

ವಿಶ್ವಸಂಸ್ಥೆ: ಕೋವಿಡ್ 19 ವೈರಸ್ ಸೋಂಕು ಜಗತ್ತನ್ನು ತಲ್ಲಣಗೊಳಿಸಿದ್ದು, ಅದನ್ನು ಎದುರಿಸುವ ಹೋರಾಟದ ಕಾರಣಕ್ಕೆ ಜಾಗತಿಕ ಆರ್ಥಿಕ ವ್ಯವಸ್ಥೆಯೂ ಹೊಡೆತ ತಿಂದಿದೆ. ಈ ನಡುವೆ, ಮತ್ತೊಂದು ಆಘಾತ ಆಹಾರದ ಕೊರತೆ ಮೂಲಕ ಕಾಡಲಾರಂಭಿಸಿದೆ. ಇದಕ್ಕೆ ಪೂರಕವಾಗಿ, ಶೀಘ್ರವೇ ಆಹಾರದ ಕೊರತೆ ತೀವ್ರವಾಗಿ ಜಗತ್ತನ್ನು ಕಾಡಲಿದೆ. ಈ ಕೂಡಲೇ ಅದನ್ನು ಎದುರಿಸುವುದಕ್ಕೆ ತಕ್ಕ ಕ್ರಮಗಳನ್ನು ಆಯಾ ಸರ್ಕಾರಗಳು ತೆಗೆದುಕೊಳ್ಳಬೇಕು ಎಂದು ವಿಶ್ವಸಂಸ್ಥೆ ನಿನ್ನೆ ಎಚ್ಚರಿಸಿದೆ.
ವಿಶ್ವಸಂಸ್ಥೆಯ ಸೆಕ್ರಟರಿ ಜನರಲ್ ಆಂಟೊನಿಯೋ ಗುಟೆರ್ರಸ್ ಈ ಬಗ್ಗೆ ಪ್ರತಿಕ್ರಿಯಸಿದ್ದು, ಗ್ಲೋಬಲ್ ಫುಡ್ ಎಮರ್ಜೆನ್ಸಿಯನ್ನು ತಪ್ಪಿಸಲು ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. 82 ಕೋಟಿ ಜನ ಹಸಿವಿನಿಂದ ಕಂಗಾಲಾಗಿದ್ದಾರೆ. ಐದು ವರ್ಷದೊಳಗಿನ 14.4 ಕೋಟಿ ಮಕ್ಕಳ ಬೆಳವಣಿಗೆ ಸರಿಯಾಗಿಲ್ಲ. ಈ ನಡುವೆ, ಕೋವಿಡ್ 19 ಸೋಂಕು ಇನ್ನಷ್ಟು ಅಧ್ವಾನ ತಂದೊಡ್ಡಿದೆ. ಜಗತ್ತಿನ 780 ಕೋಟಿ ಜನರಿಗಾಗುವಷ್ಟು ಆಹಾರ ನಮ್ಮಲ್ಲಿಲ್ಲ. ನಮ್ಮ ಆಹಾರ ಉತ್ಪಾದನೆ, ಪೂರೈಕೆ ವ್ಯವಸ್ಥೆ ಈ ನಿಟ್ಟಿನಲ್ಲಿ ವಿಫಲವಾಗುತ್ತಿವೆ ಎಂದು ಎಚ್ಚರಿಸಿದ್ದಾರೆ.
ಆಹಾರ ಭದ್ರತೆ ಮತ್ತು ಪೌಷ್ಟಿಕತೆ ಮೇಲೆ ಕೋವಿಡ್ 19ನ ಪರಿಣಾಮದ ಕುರಿತ ನೀತಿಯ ವಿವರ ನೀಡಿದ ಅವರು, ಈ ಸೋಂಕಿನ ಕಾರಣಕ್ಕೆ 4.9 ಕೋಟಿ ಜನ ಬಹುತೇಕ ಕಡುಬಡತನಕ್ಕೆ ಜಾರಲಿದ್ದಾರೆ. ಪುಟ್ಟ ಮಕ್ಕಳಿಗೆ, ಗರ್ಭಿಣಿಯರು, ಬಾಣಂತಿಯರು ಮತ್ತು ಹಾಲೂಡಿಸುವ ತಾಯಂದಿರ ಆರೋಗ್ಯದ ಕಡೆಗೆ ಎಲ್ಲ ಸರ್ಕಾರಗಳೂ ಗಮನಹರಿಸಬೇಕು. ಅವರಿಗೆ ಆಹಾರ ಮತ್ತು ಪೌಷ್ಟಿಕಾಂಶ ಸಿಗುತ್ತಿರುವುದನ್ನು ಖಾತರಿಗೊಳಿಸುವ ಹೊಣೆಗಾರಿಕೆ ಆಯಾ ಸರ್ಕಾರಗಳದ್ದು ಎಂದು ಗುಟೆರ್ರಸ್ ಎಚ್ಚರಿಸಿದ್ದಾರೆ. (ಏಜೆನ್ಸೀಸ್)