'ಪುಷ್ಪ 2' ಚಿತ್ರಕ್ಕಿಂತಲೂ ಈ ಪತ್ರವೇ ಸಿಕ್ಕಾಪಟ್ಟೆ ವೈರಲ್​! ಹಾಳೆಯಲ್ಲಿ ಬರೆದ ವಿಷಯಕ್ಕೆ ನೆಟ್ಟಿಗರು ಶಾಕ್​ | Letter

ವಿಜಯವಾಣಿ - 2024-12-05T164751.349
Published on

ತೆಲಂಗಾಣ: ಭಾರತೀಯ ಚಿತ್ರೋದ್ಯಮದಲ್ಲಿ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ 'ಪುಷ್ಪ 2' ಸಿನಿಮಾ ಇಂದು ಬಿಡುಗಡೆಯಾಗಿದ್ದು, ಎಲ್ಲೆಲ್ಲೂ ಚಿತ್ರದ ಹವಾ ಜೋರಾಗಿದೆ. ದೇಶದ ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಂಡ ಅಲ್ಲು ಅರ್ಜುನ್​ ಸಿನಿಮಾಗೆ ಸಿನಿಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳು ಲಭ್ಯವಾಗಿವೆ. ಮೊದಲ ದಿನ ನೋಡಲು ಆಗದ ಸಿನಿಪ್ರಿಯರು, ಎರಡನೇ ದಿನ ಚಿತ್ರವನ್ನು ಕಣ್ತುಂಬಿಕೊಳ್ಳಲು ಕಾತರ ವ್ಯಕ್ತಪಡಿಸಿದ್ದಾರೆ. ಸದ್ಯ ದೇಶವ್ಯಾಪಿ ಪುಷ್ಪ 2 ಸಿನಿಮಾದ್ದೇ ಸದ್ದು ಗದ್ದಲ ಇರುವಾಗ ಇಲ್ಲೊಂದು ಪತ್ರ (Letter) ಮಾತ್ರ ಅದನ್ನು ಮೀರಿಸುವಷ್ಟು ಸದ್ದು ಮಾಡುತ್ತಿದೆ.

ಟ್ರೇಲರ್​ನಿಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದ 'ಪುಷ್ಪ 2' ಚಿತ್ರ, ಸಿನಿಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿತ್ತು. ಇದೀಗ ಶಾಲಾ ಬಾಲಕನೊಬ್ಬ ಅಲ್ಲು ಅರ್ಜುನ್​ ಅವರ ಅಪ್ಪಟ ಅಭಿಮಾನಿಯಾಗಿದ್ದು, ಇಂದು ಚಿತ್ರ ಬಿಡುಗಡೆಯ ಹಿನ್ನಲೆ ತನ್ನ ಮನದಾಸೆಯನ್ನು ಮುಕ್ತವಾಗಿ ಯಾವುದೇ ಅಂಚಿಕೆ ಇಲ್ಲದೆ, ಪತ್ರದ ಮೂಲಕ ಹೊರಹಾಕಿದ್ದಾನೆ. ಈ ಲೆಟರ್​ ನೋಡಿದ ಶಿಕ್ಷಕ ಒಂದು ನಿಮಿಷ ಅಚ್ಚರಿಗೆ ಒಳಗಾಗಿದ್ದೇ ಆದರೂ ನಂತರದಲ್ಲಿ ಖುಷಿ ಪಟ್ಟಿದ್ದಾರೆ.

ಪತ್ರದಲ್ಲಿ ಬರೆದದ್ದೇನು?

ಒಂದೆಡೆ ನೆಚ್ಚಿನ ನಟನ ಸಿನಿಮಾ ರಿಲೀಸ್​, ಮತ್ತೊಂದೆಡೆ ಶಾಲೆಗೆ ಚಕ್ಕರ್​ ಹಾಕಲು ಮನಸ್ಸಿಲ್ಲ. ಈ ಎರಡು ವಿಷಯದಿಂದ ಭಾರೀ ಗೊಂದಲಕ್ಕೀಡಾಗಿದ್ದ ಬಾಲಕ, ಶಿಕ್ಷಕರಿಗೆ ಸುಳ್ಳು ಹೇಳಲು ಒಪ್ಪದೆ, ಕಡೆಗೂ ಸತ್ಯ ಸಂಗತಿಯನ್ನು ನೇರವಾಗಿ ಹೇಳದೆ, ಪತ್ರದಲ್ಲಿ ಬರೆದು ಕೊಟ್ಟಿದ್ದಾನೆ. ಪತ್ರ ತೆರೆದು ಓದಿದ ಸ್ಕೂಲ್ ಮಾಸ್ಟರ್​, ಸಿನಿಮಾ ನೋಡಲು ಈತ ವ್ಯಕ್ತಪಡಿಸಿದ ರೀತಿ, ಹಂಬಲ, ಧೈರ್ಯ ನನಗೆ ಬಹಳ ಇಷ್ಟವಾಯಿತು. ಸುಳ್ಳು ಹೇಳುವ ಕಾಲದಲ್ಲಿ ಸತ್ಯವನ್ನು ಮರೆಮಾಚದಂತೆ ಹೊರಹಾಕಿರುವುದು ಒಳ್ಳೆಯ ವಿದ್ಯಾರ್ಥಿಗಳ ಲಕ್ಷಣ ಎಂದು ಮೆಚ್ಚಿ ಮಾತನಾಡಿದ್ದಾರೆ.

ವಾಟ್ಸ್​ಆ್ಯಪ್​ನಲ್ಲಿ ಹಂಚಿಕೆ

ಬಾಲಕ ಬರೆದ ಪತ್ರವನ್ನು ನೋಡಿ ಖುಷಿಪಟ್ಟ ಶಿಕ್ಷಕರು, ಲೆಟರ್​ನ ಫೋಟೋವನ್ನು ತಮ್ಮ ವಾಟ್ಸ್​ಆ್ಯಪ್​ನ ಸ್ಟೇಟಸ್​​ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಅನೇಕರು, ಫೋಟೋವನ್ನು ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡು ವ್ಯಾಪಕ ವೈರಲ್​ಗೆ ಕಾರಣರಾಗಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net