

ವಿಜಯಪುರ: ಹವಾಮಾನ ವೈಪರೀತ್ಯದಿಂದಲೋ ಕಳಪೆ ಬಿತ್ತನೆ ಬೀಜನೆ ವಿತರಣೆಯಿಂದಲೋ ತೊಗರಿ ಬೆಳೆ ಹಾನಿಯಾಗಿದ್ದು, ಕೂಡಲೇ ಸಮಗ್ರ ಅಧ್ಯಯನ ನಡೆಸಿ, ಸಮೀಕ್ಷೆ ಕೈಗೊಂಡರು ರೈತರಿಗೆ ಸಮರ್ಪಕ ಪರಿಹಾರ ಒದಗಿಸಬೇಕೆಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಸರ್ಕಾರಕ್ಕೆ ಆಗ್ರಹಿಸಿದರು.
ಜಿಲ್ಲೆಯಲ್ಲಿ 5,34,564 ಹೆಕ್ಟರ್ ಪ್ರದೇಶದಲ್ಲಿ ತೊಗರಿ ಹಾನಿಯಾಗಿದ್ದು, ಅಂದಾಜು 3.5 ರಿಂದ 4 ಸಾವಿರ ಕೋಟಿ ರೂಪಾಯಿ ಹಾನಿ ಉಂಟಾಗಿದೆ. ಹೀಗಾಗಿ ರೈತರು ಸಂಕಷ್ಟದಲ್ಲಿದ್ದು, ಸರ್ಕಾರ ಕೂಡಲೇ ಪರಿಹಾರ ಕಲ್ಪಿಸಬೇಕೆಂದು ಒತ್ತಾಯಿಸುವುದಾಗಿಯೂ ಈ ಬಗ್ಗೆ ವಿಧಾನ ಮಂಡಲ ಅಧಿವೇಶನದಲ್ಲಿ ಧ್ವನಿ ಎತ್ತುವುದಾಗಿಯೂ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಕೃಷಿ, ತೋಟಗಾರಿಕೆಗೆ ಹೆಸರಾದ ವಿಜಯಪುರ ಜಿಲ್ಲೆಯ ರೈತರು ಒಂದಿಲ್ಲ ಒಂದು ಸಮಸ್ಯೆಗಳಿಗೆ ಸಿಲುಕುತ್ತಲೇ ಇದ್ದಾರೆ. ಈ ಬಾರಿ ಮುಂಗಾರು ಮಳೆ ಸಮೃದ್ಧವಾಗಿದ್ದು, ರೈತರು ಸಂತೃಪ್ತರಾಗಿದ್ದರು. ಆದರೆ, ತೊಗರಿ ಬೆಳೆಗೆ ಸಕಾಲಕ್ಕೆ ಮಳೆ ಸಿಕ್ಕಿಲ್ಲ. ಹೀಗಾಗಿ ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಬಾರದ ಹಿನ್ನೆಲೆ ಹತಾಶರಾಗಿದ್ದಾರೆ. ಎಂಎಸ್‌ಪಿ ಘೋಷಣೆ ಹಿನ್ನೆಲೆ ಮಾರುಕಟ್ಟೆ ದರ ಹೆಚ್ಚಾಗಿ ಸಿಗುವ ಆಶಾಭಾವದಿಂದ ಹೆಚ್ಚಿನ ಪ್ರಮಾಣದಲ್ಲಿ ರೈತರು ತೊಗರಿ ಬಿತ್ತನೆ ಮಾಡಿದ್ದಾರೆ. ಆದರೆ, ಆಳೆತ್ತರ ಬೆಳೆದ ಬೆಳೆಯ ಹೂ ಉದುರಿದೆ. ಕಾಯಿಗಟ್ಟಿಲ್ಲ. ಇದರಿಂದ ಸಾಕಷ್ಟು ಹಾನಿಯುಂಟಾಗಿದ್ದು ಆತಂಕ ಇಮ್ಮಡಿಸಿದೆ. ಜಿಲ್ಲೆಯಲ್ಲಿಯೇ ಇಂಡಿಯಲ್ಲಿ ಹೆಚ್ಚು ತೊಗರಿ ಬಿತ್ತನೆ ಮಾಡಲಾಗಿದೆ. ನಂತರದ ಸ್ಥಾನದಲ್ಲಿ ಮುದ್ದೇಬಿಹಾಳ, ಸಿಂದಗಿ, ವಿಜಯಪುರ, ಬ.ಬಾಗೇವಾಡಿ ಇದೆ. ಈಗಾಗಲೇ ಅಧಿಕಾರಿಗಳ ಸಭೆ ನಡೆಸಿ ಅಧ್ಯಯನ ವರದಿ ಸಿದ್ಧಪಡಿಸಲು ಸೂಚಿಸಲಾಗಿದೆ ಎಂದರು.
ರೈತರ ಆತಂಕದ ಬಗ್ಗೆ ಈಗಾಗಲೇ ರಾಜ್ಯದ ಕೃಷಿ ಸಚಿವರು, ಕೃಷಿ ಆಯುಕ್ತರು ಮತ್ತು ಕೃಷಿ ವಿಜ್ಞಾನಿಗಳ ಜೊತೆ ಸಮಾಲೋಚನೆ ನಡೆಸಿದ್ದೇನೆ. ಹವಾಮಾನ ವೈಪರೀತ್ಯದ ಜೊತೆಗೆ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಬೆಳೆ ಹಾನಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಬಿತ್ತನೆ ಬೀಜ ಕಳಪೆಯಾಗಿರುವ ಬಗ್ಗೆ ರೈತರು ದೂರು ನೀಡಿದ್ದಾರೆ. ಕೆಲಸು ಏಜೆನ್ಸಿಗಳು ಗುಣಮಟ್ಟದ ಬಿತ್ತನೆ ಬೀಜ ನೀಡಿಲ್ಲ ಮತ್ತು ನೆರೆಯ ಜಿಲ್ಲೆಯಲ್ಲಿ ಕಪ್ಪು ಪಟ್ಟಿಗೆ ಸೇರ್ಪಡೆಯಾದ ಏಜೆನ್ಸಿಗಳಿಗೆ ಜಿಲ್ಲೆಯಲ್ಲಿ ಬಿತ್ತನೆ ಬೀಜ ವಿತರಿಸಲು ಗುತ್ತಿಗೆ ನೀಡಲಾಗಿರುವ ಬಗ್ಗೆ ತನಿಖೆ ನಡೆಸಲು ಸೂಚಿಸಲಾಗುವುದು. ವಿಧಾನ ಮಂಡಲ ಅಧಿವೇಶನದಲ್ಲೂ ಈ ಬಗ್ಗೆ ಚರ್ಚಿಸಲಾಗುವುದು ಎಂದು ಪ್ರತಿಕ್ರಿಯಿಸಿದರು.
ರೈತರು ಸಹ ಏಕ ಬೆಳೆ ಪದ್ದತಿ ಬಿಟ್ಟು ಸಮಗ್ರ ಬೇಸಾಯ ಪದ್ಧತಿ ಅಳವಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಮಾಧ್ಯಗಳು ಸಹ ರೈತರಲ್ಲಿ ಜಾಗೃತಿ ಮೂಡಿಸಬೇಕೆಂದರು.