

ಉತ್ತಮ ಆಡಳಿತ, ಅಭಿವೃದ್ಧಿ, ಭ್ರಷ್ಟಾಚಾರರಹಿತ ಕೆಲಸಕಾರ್ಯಗಳು, ಆಯಾ ರಂಗದ ಬೆಳವಣಿಗೆ ಇದೆಲ್ಲ ಸಾಕಾರಗೊಳ್ಳಬೇಕಾದರೆ ರಾಜಕೀಯ ಕ್ಷೇತ್ರ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಹೊಸ ಬದಲಾವಣೆಗಳಿಗಾಗಿ, ಸುಧಾರಣೆಗಳಿಗಾಗಿ ಯುವಕರು ರಾಜಕೀಯಕ್ಕೆ ಬರಬೇಕು ಎಂಬ ಆಶಯವೂ ಆಗಾಗ ದೊಡ್ಡದನಿಯಲ್ಲಿ ಕೇಳಿಬರುತ್ತದೆ. ಇದಕ್ಕೆ ಪೂರಕವಾಗಿ ಯುವವರ್ಗವೂ ರಾಜಕೀಯ ಕ್ಷೇತ್ರ ಪ್ರವೇಶಿಸಿ, ಕೆಲಸ ಮಾಡುವ ತುಡಿತ ಹೊಂದಿದೆ. ಆದರೆ, ರಾಜಕೀಯ ರಂಗದ ಸ್ಥಿತಿ ಏನಾಗಿದೆ, ನಾವು ಆರಿಸಿ ಕಳಿಸುವ ಜನಪ್ರತಿನಿಧಿಗಳ ಹಿನ್ನೆಲೆ ಏನು ಎಂಬುದನ್ನು ಅವಲೋಕಿಸಿದರೆ ನಿಜಕ್ಕೂ ಗಾಬರಿಯಾಗುತ್ತದೆ. ಎಲ್ಲ ರಾಜಕೀಯ ಪಕ್ಷಗಳು ಸ್ಪರ್ಧೆಗೆ ಬಿದ್ದವರಂತೆ ಕಳಂಕಿತರಿಗೇ ಟಿಕೆಟ್ ನೀಡುತ್ತಿದ್ದು, ಈ ಪ್ರವೃತ್ತಿ ನಿಜಕ್ಕೂ ಅಪಾಯಕಾರಿ ಬೆಳವಣಿಗೆ.
ಇತ್ತೀಚೆಗೆ ಬಿಡುಗಡೆಯಾಗಿರುವ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾಮ್್ಸರ್ (ಎಡಿಆರ್) ವರದಿಯು ಬೆಚ್ಚಿಬೀಳುವ ಹಲವು ಸಂಗತಿಗಳನ್ನು ಒಳಗೊಂಡಿದೆ. ದೇಶದ ಶೇಕಡ 47ರಷ್ಟು ಸಚಿವರ ವಿರುದ್ಧ ಕ್ರಿಮಿನಲ್ ಕೇಸ್ಗಳಿದ್ದು, ಕೊಲೆ, ಕೊಲೆ ಯತ್ನ, ಅಪಹರಣಗಳಂಥ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ. 27 ರಾಜ್ಯ ವಿಧಾನಸಭೆ, 3 ಕೇಂದ್ರಾಡಳಿತ ಪ್ರದೇಶಗಳು, ಕೇಂದ್ರ ಸಚಿವ ಮಂಡಳಿಯ 643 ಸಚಿವರ ಅಫಿಡವಿಟ್ ಪರಿಶೀಲಿಸಿ, ಈ ವರದಿಯನ್ನು ಸಿದ್ಧಗೊಳಿಸಲಾಗಿದೆ. ಈ ಪೈಕಿ 302 ಸಚಿವರು ಅಥವಾ ಒಟ್ಟು ಸಚಿವರ ಪೈಕಿ ಶೇ.47ರಷ್ಟು ಸಚಿವರು ತಮ್ಮ ವಿರುದ್ಧ ಅಪರಾಧ ಪ್ರಕರಣ ಇರುವುದಾಗಿ ಘೋಷಿಸಿದ್ದಾರೆ.
302 ಸಚಿವರಲ್ಲಿ 174 ಸಚಿವರು ಗಂಭೀರ ಅಪರಾಧ ಪ್ರಕರಣ ಎದುರಿಸುತ್ತಿದ್ದಾರೆ. ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ ಸೇರಿದಂತೆ 11 ರಾಜ್ಯಗಳ ಶೇ.60ರಷ್ಟು ಮಂತ್ರಿಗಳು ಅಪರಾಧ ಪ್ರಕರಣ ಎದುರಿಸುತ್ತಿದ್ದಾರೆ. ಅಲ್ಲದೆ, ಸಂಪತ್ತು ಗಳಿಕೆಯಲ್ಲೂ ಭಾರಿ ಏರಿಕೆ ಕಂಡುಬಂದಿದೆ. 643 ಸಚಿವರ ಬಳಿ ಒಟ್ಟು 23,239 ಕೋಟಿ ರೂ.ಗಳ ಆಸ್ತಿ ಇದೆ. ಅಂದರೆ ಪ್ರತಿ ಸಚಿವರು ಸರಾಸರಿ 37.21 ಕೋಟಿ ರೂ.ಗಳ ಆಸ್ತಿಯನ್ನು ಹೊಂದಿದ್ದಾರೆ. ರಾಜಕೀಯದಲ್ಲಿ ಕಳಂಕಿತರೇ ತುಂಬಿಕೊಂಡರೆ ಉತ್ತಮ ಆಡಳಿತ ನಿರೀಕ್ಷಿಸಲು ಹೇಗೆ ತಾನೇ ಸಾಧ್ಯ? ಈ ನಿಟ್ಟಿನಲ್ಲಿ ಬೇರುಮಟ್ಟದಲ್ಲಿಯೇ ಬದಲಾವಣೆ ಆಗಬೇಕಿದ್ದು, ಆಯಾ ಪಕ್ಷಗಳು ಟಿಕೆಟ್ ಹಂಚಿಕೆಯ ವೇಳೆ ಜಾಗ್ರತೆ ವಹಿಸಬೇಕಿದೆ. ಯಾವುದೇ ಕ್ಷೇತ್ರ ಮೌಲ್ಯಗಳಿಂದ ವಿಮುಖವಾದರೆ ಅಧಃಪತನ ಖಚಿತ.
ಅದರಲ್ಲೂ, ರಾಜಕೀಯ ರಂಗ ಮತ್ತು ಜನಪ್ರತಿನಿಧಿಗಳ ಮೇಲೆ ಮಹತ್ವದ ಹೊಣೆಗಾರಿಕೆ ಇದೆ. ವಿಧಾನಸಭೆ ಅಥವಾ ಲೋಕಸಭೆ ಚುನಾವಣೆ ಸಮೀಪಿಸಿದಾಗಲಂತೂ ಪಕ್ಷಾಂತರ ದೊಡ್ಡಮಟ್ಟದಲ್ಲಿ ನಡೆಯುತ್ತದೆ ಮತ್ತು ಸೈದ್ಧಾಂತಿಕ ವಿರೋಧಿಗಳು ಬಣ ಬದಲಿಸಿ, ತಾವು ವಿರೋಧಿಸುತ್ತಿದ್ದ ಪಕ್ಷವನ್ನೇ ಸೇರಿಕೊಳ್ಳುತ್ತಾರೆ. ಇಂಥ ಸಮಯದಲ್ಲಿ ಅಭ್ಯರ್ಥಿಯನ್ನು ‘ಗೆಲ್ಲುವ ಕುದುರೆ’ಯಾಗಷ್ಟೇ ಪರಿಗಣಿಸುವ ರಾಜಕೀಯ ಪಕ್ಷಗಳು, ತರಾತುರಿಯಲ್ಲಿ ಬಿ.ಫಾರಂ ಹಂಚುತ್ತವೆ. ಇಂಥ ಬೆಳವಣಿಗೆಗಳು ಪ್ರಜಾಪ್ರಭುತ್ವದ ಸ್ವಾಸ್ಥ್ಯಕ್ಕೆ ಮಾರಕ. ರಾಜಕೀಯ ರಂಗದ ಬಗ್ಗೆ ಜನರು ಭ್ರಮನಿರಸನಗೊಳ್ಳುವ ಮೊದಲೇ ಎಚ್ಚೆತ್ತುಕೊಂಡು ಶುದ್ಧೀಕರಣದ ಪ್ರಕ್ರಿಯೆ ಪ್ರಾಮಾಣಿಕ ನೆಲೆಯಲ್ಲಿ ನಡೆಯಬೇಕಿದೆ. ಸಚ್ಚಾರಿತ್ರ್ಯವಂತರು, ಪ್ರಾಮಾಣಿಕರು, ಪ್ರತಿಭಾಸಂಪನ್ನರು ಈ ರಂಗ ಪ್ರವೇಶಿಸುವಂತಾಗಿ, ಪ್ರಜಾತಂತ್ರದ ಮೌಲ್ಯಗಳು ಪಕ್ವವಾಗಬೇಕು.