

ಕಾರ್ಗಲ್: ಭಾದ್ರಪದ ಮಾಸವು ಅತ್ಯಂತ ಪವಿತ್ರ ತಿಂಗಳು. ಈ ಸಂದರ್ಭ ಆಚರಿಸುವ ದಶಲಕ್ಷಣ ಮಹಾಪರ್ವದ ಪೂಜೆ ಅತ್ಯಂತ ಮಹತ್ವ ಪಡೆದಿದೆ ಎಂದು ಶಿರಸಿ ಸೋಂದಾ ಶ್ರೀ ದಿಗಂಬರ ಜೈನ ಮಠದ ಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಹೇಳಿದರು.
ಸಮೀಪದ ಮರಬಿಡಿ ಸೀಮೆಯ ಬಿದರೂರು ಶ್ರೀ ವರ್ಧಮಾನ ದಿಗಂಬರ ಜೈನ ಬಸದಿಯಲ್ಲಿ ಹತ್ತು ದಿನಗಳ ಕಾಲ ನಡೆಯುತ್ತಿರುವ ದಶಲಕ್ಷಣ ಮಹಾಪರ್ವದ 7ನೇ ದಿನವಾದ ಮಂಗಳವಾರ ಧಾರ್ಮಿಕ ಕಾರ್ಯದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಶುಕ್ಲಪಕ್ಷದ ಭಾದ್ರಪದ ಮಾಸವು ತಿಂಗಳುಗಳ ರಾಜ ಎನಿಸಿಕೊಂಡಿದೆ. ಇಲ್ಲಿ ಅತಿ ಹೆಚ್ಚು ನೋಂಪಿಗಳನ್ನು ಹೊಂದಿದೆ. ಪರಿಶುದ್ಧ ಭಕ್ತಿ, ಏಕಾಗ್ರತೆಯಿಂದ ಭಗವಂತನನ್ನು ಆರಾಧಿಸಿದರೆ ಲ ನಿಶ್ಚಯ. ದಶಲಕ್ಷಣದ ಹತ್ತು ಧರ್ಮಗಳನ್ನು ಆಚರಿಸಿ ಆ ಎಲ್ಲ ಗುಣಗಳನ್ನು ಧರಿಸಿಕೊಂಡಲ್ಲಿ ಆತ್ಮದ ಸ್ಥಾನವನ್ನು ಭದ್ರಪಡಿಸುವ ಮೂಲಕ ಮೋಕ್ಷ ಪಡೆಯಲು ಸಾಧ್ಯ ಎಂದು ತಿಳಿಸಿದರು.
ಉತ್ತಮ ತಪಸ್ಸಿನ ಮುಖ್ಯ ಉದ್ದೇಶವು ಜ್ಞಾನ ದೇಗುಲಗಳಲ್ಲಿ ಚಿತ್ತಸ್ಥೈರ್ಯ ಸಂಪಾದಿಸುವುದು. ತಪಸ್ಸು ಆರೋಗ್ಯ ದೃಷ್ಟಿಯಿಂದಲೂ ಪ್ರಯೋಜನಕಾರಿ. ಜೈನ ಸಿದ್ಧಾಂತದಲ್ಲಿ ಬಾಹ್ಯ ತಪಸ್ಸು ಮತ್ತು ಅಭ್ಯಂತರ ತಪಸ್ಸು ಎಂದು ಎರಡು ಬಗೆಯಾಗಿದೆ ಎಂದರು.
ಬಿದರೂರು ಬಸದಿಯ ಆಡಳಿತ ಸಮಿತಿ ಮತ್ತು ಭಕ್ತರು ಶ್ರೀಗಳಿಗೆ ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು. ಶ್ರೀ ವರ್ಧಮಾನ ದಿಗಂಬರ ಸಮಿತಿ ಅಧ್ಯಕ್ಷ ಶಾಂತರಾಜ್, ಪ್ರಮುಖರಾದ ಧನಪಾಲ, ಲೋಕರಾಜ್, ನಾಗರಾಜ್, ಹರೀಶ್, ಧನಪಾಲ ಹಳಬಳ್ಳಿ, ಚೂಡಾರತ್ನ, ಬಬಿತಾ ಪ್ರೇಮ್‌ಕುಮಾರ್, ಮಹಾವೀರ, ಹೇಮಾವತಿ, ನವೀನ್ ಜೈನ್, ಲೋಕರಾಜ್ ಇತರರಿದ್ದರು.