

ಶ್ರೀ ಶಿವಶಕ್ತಿ ಧಾಮವು ಉದ್ಘಾಟನೆಗೊಂಡು ವರ್ಷವಾಗಿದೆಯಾದರೂ ಇಲ್ಲಿಗೆ ಬರುವ ಭಕ್ತರಿಗೆ ಒಂದು ಅವ್ಯಕ್ತ ಅನುಭೂತಿ ನೀಡುತ್ತಿದೆ. ಹಲವು ಭಕ್ತರು ಗಂಟೆಗಟ್ಟಲೆ ಇಲ್ಲಿಯೇ ಕುಳಿತಿರುತ್ತಾರೆ. ಮರಳಿ ಹೋಗಲು ಮನಸ್ಸೇ ಬರುತ್ತಿಲ್ಲ, ಇಲ್ಲಿ ಯಾವುದೋ ಒಂದು ಅಗೋಚರ ಶಕ್ತಿ ಇದೆ. ಮಾನಸಿಕ ಒತ್ತಡಗಳನ್ನು ಕಡಿಮೆ ಮಾಡಿ ಒಂದು ರೀತಿಯ ನೆಮ್ಮದಿ ದೊರೆಯುತ್ತದೆ ಎಂಬುದು ಹಲವರ ಅಭಿಪ್ರಾಯ.
ಆಧುನಿಕತೆ ಎಷ್ಟೇ ಬೆಳೆದರೂ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಪ್ರತಿಯೊಂದನ್ನು ವಿಶ್ಲೇಷಣೆ ಮಾಡುವುದು ಅಸಾಧ್ಯ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿರುವ ‘ತೇನಾ ವಿನಾ ತೃಣ ಮಪಿ ನ ಚಲತಿ’ ಎಂಬಂತೆ ಒಂದು ಹುಲ್ಲುಕಡ್ಡಿಯೂ ಭಗವಂತನ ಅಪ್ಪಣೆ ಇಲ್ಲದೆ ಅಲುಗಾಡುವುದಿಲ್ಲ. ದೇವರು ಸರ್ವಾಂತರ್ಯಾಮಿಯಾಗಿದ್ದರೂ ಆತನ ಅಸ್ತಿತ್ವದ ಅನುಭವ ಕೆಲವು ಕಡೆಗಳಲ್ಲಿ ಮಾತ್ರ ಸಾಧ್ಯ. ಅದನ್ನು ಪವಾಡ ಭೂಮಿ, ಧರ್ಮಭೂಮಿ ಅಥವಾ ಪುಣ್ಯಭೂಮಿ ಎನ್ನಬಹುದು. ಅಂತಹದ್ದೊಂದು ಪುಣ್ಯಭೂಮಿ ಹುಬ್ಬಳ್ಳಿಯ ಪಾಲಿಕೊಪ್ಪ ಹಾಗೂ ಸುತ್ತಮುತ್ತಲಿನ ಪ್ರದೇಶ.
ಹುಬ್ಬಳ್ಳಿ ನಗರದಿಂದ 20 ಕಿ.ಮೀ. ದೂರದಲ್ಲಿರುವ ಪಾಲಿಕೊಪ್ಪ ಕಳೆದೊಂದು ವರ್ಷದಿಂದ ಆಸ್ತಿಕ ಬಂಧುಗಳ ನೆಚ್ಚಿನ ತಾಣವಾಗಿದೆ. ಕಾರಣ ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರ ಬಹುದಿನಗಳ ಕನಸು ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ ಅವರ ಪರಿಶ್ರಮದಿಂದ ಬೃಹತ್ ದೇವಾಲಯಗಳ ಸಮುಚ್ಚಯ ಇಲ್ಲಿ ಸ್ಥಾಪನೆಯಾಗಿರುವುದು. ಹಿಂದು ಸಂಸ್ಕೃತಿಯ ಹೆಗ್ಗುರುತಾಗಿರುವ ಬೃಹತ್ ದೇವಾಲಯವೊಂದನ್ನು ನಿರ್ವಿುಸಿ ಸಾವಿರಾರು ವರ್ಷಗಳ ಕಾಲ ಆ ದೇವಾಲಯ ಸಂಸ್ಕೃತಿ ಪ್ರಸಾರ ಕೇಂದ್ರವಾಗಿ ಉಳಿಯಬೇಕೆಂಬ ಮಹದಾಸೆಯಿಂದ ನಿರ್ಮಾಣ ಮಾಡಿರುವ ದೇವಾಲಯಗಳ ಸಮುಚ್ಚಯಕ್ಕೆ ಶ್ರೀ ಶಿವಶಕ್ತಿ ಧಾಮ ಎಂದು ನಾಮಕರಣ ಮಾಡಲಾಗಿದೆ. ಶಿವಶಕ್ತಿಧಾಮದ ಜತೆಗೆ ಹುಬ್ಬಳ್ಳಿಯಿಂದ ತಡಸವರೆಗಿನ 25 ಕಿ.ಮೀ. ದೂರದಲ್ಲಿ ಹಲವು ಪುಣ್ಯಕ್ಷೇತ್ರಗಳಿದ್ದು, ಹುಬ್ಬಳ್ಳಿಯ ದಕ್ಷಿಣಭಾಗ ಪುಣ್ಯಭೂಮಿಯಾಗಿ ಪರಿವರ್ತನೆಗೊಂಡಿದೆ.
ಪಾಲಿಕೊಪ್ಪದ ಶ್ರೀ ಶಿವಶಕ್ತಿ ಧಾಮವು ಸ್ಥಾಪನೆಯಾಗಿ ಕೇವಲ ಒಂದು ವರ್ಷ ಪೂರೈಸಿದೆಯಾದರೂ, ಇದು ಪ್ರಾಚೀನ ಕಾಲದಿಂದಲೂ ಪವಾಡ ಭೂಮಿ ಎಂಬುದಕ್ಕೆ ಹಲವು ನಿದರ್ಶನಗಳಿವೆ. ಈ ಹಿಂದೆ ಪಾಲಿಕೊಪ್ಪ ಹಿರೇಮಠದಲ್ಲಿ ಜನಿಸಿ ಮುಂದೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ 119ನೇ ಜಗದ್ಗುರುಗಳಾಗಿ ವಿಜೃಂಭಿಸಿದ ಶ್ರೀ ವೀರಗಂಗಾಧರ ಶಿವಾಚಾರ್ಯ ಭಗವತ್ಪಾದರು ಮಾನವ ಧರ್ಮ ಸಂದೇಶದ ಮೂಲಕ ವಿಶ್ವವಿಖ್ಯಾತವಾಗಿದ್ದಾರೆ.
‘ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ’ ಎಂಬ ಉದಾತ್ತ ಸಂದೇಶದೊಂದಿಗೆ ವಿಶ್ವಮಾನವತೆಯನ್ನು ಸಾರಿದ ಗಂಗಾಧರಜ್ಜ ಮಹಾನ್ ತಪಸ್ವಿಗಳಾಗಿ, ಶಿವಪೂಜಾ ದುರಂಧರರಾಗಿದ್ದರು. ಅನುಷ್ಠಾನ ಮೂರ್ತಿಗಳಾಗಿದ್ದ ಶ್ರೀ ಗಂಗಾಧರ ಜಗದ್ಗುರುಗಳು ಮಾಡಿದ ಧರ್ಮಕ್ರಾಂತಿಯ ಮೂಲಸ್ಥಳ ಈ ಪಾಲಿಕೊಪ್ಪ. ಶ್ರೀ ಶಿವಶಕ್ತಿಧಾಮದ ಹಿಂಭಾಗದಲ್ಲಿರುವ ಪಾಲಿಕೊಪ್ಪ ಗ್ರಾಮದಲ್ಲಿ ಶ್ರೀ ಗಂಗಾಧರ ಜಗದ್ಗುರುಗಳು ಜನ್ಮವೆತ್ತಿದ ಮಠ, ದೇವಾಲಯವಿದ್ದು, ಪೂಜ್ಯರ ಅತ್ಯಾಕರ್ಷಕ ಕೃಷ್ಣಶಿಲೆಯ ಮೂರ್ತಿ ಸ್ಥಾಪಿಸಲಾಗಿದೆ. ಇಂದಿಗೂ ವಾರ್ಷಿಕವಾಗಿ ಪೂಜ್ಯರ ಉತ್ಸವ ಜಾತ್ರೆಗಳು ನಡೆಯುತ್ತವೆ. ಪಾಲಿಕೊಪ್ಪದ ಪುಣ್ಯಭೂಮಿಯಲ್ಲಿ ಜನಿಸಿದ ಮಹಾಸನ್ನಿಧಿಯವರು ಮುಂದೆ ಅಖಂಡ ಭಾರತದಾದ್ಯಂತ ಧರ್ಮ ಧ್ವಜವನ್ನು ಮುಗಿಲೆತ್ತರದಲ್ಲಿ ಹಾರಿಸಿ ಗದಗ ಜಿಲ್ಲೆಯ ಲಕ್ಷೆ್ಮೕಶ್ವರದಲ್ಲಿ ಐಕ್ಯರಾಗಿದ್ದಾರೆ. ಅವರು ಐಕ್ಯರಾದ ಸ್ಥಳ ಮುಕ್ತಿಮಂದಿರ ಎಂಬ ಹೆಸರಿನಿಂದ ಬೃಹತ್ ಧರ್ಮಕ್ಷೇತ್ರವಾಗಿದೆ.
ಪಾಲಿಕೊಪ್ಪದ ಸಮೀಪದಲ್ಲೇ ಇರುವ ತಡಸ ಗ್ರಾಮದೊಳಗೆ ವೀರಭದ್ರ ದೇವರ ಗದ್ದುಗೆ ಇದೆ. ಇದೂ ಕೂಡ ಪವಾಡಸದೃಶ ಹಿನ್ನೆಲೆಯಲ್ಲಿ ಸ್ಥಾಪನೆಗೊಂಡಿದೆ. 30 ವರ್ಷಗಳ ಹಿಂದೆ ಜೈನ ಸಮುದಾಯಕ್ಕೆ ಸೇರಿದ ಯುವಕನೋರ್ವ ಕಾಲೇಜು ವತಿಯಿಂದ ವರೂರಿನಲ್ಲಿ ಏರ್ಪಡಿಸಿದ್ದ ಎನ್ಸಿಸಿ ಶಿಬಿರದಲ್ಲಿ ಪಾಲ್ಗೊಂಡಾಗ ಭೂಮಿಯಲ್ಲಿ ವೀರಭದ್ರ ದೇವರ ಹಲಗೆ ಸಿಗುತ್ತದೆ. ಜೈನರಾಗಿದ್ದ ಕಾರಣಕ್ಕೆ ಊರ ಗೌಡರಿಗೆ ಅದನ್ನು ನೀಡುತ್ತಾರೆ. ಮುಂದೆ ಹಲವು ದಿನಗಳ ಕಾಲ ಯುವಕನ ಕನಸಿನಲ್ಲಿ ಮೇಲಿಂದ ಮೇಲೆ ಬಂದು ತನ್ನ ಮೂರ್ತಿಯನ್ನು ಕೊಂಡೊಯ್ಯುವಂತೆ ದೇವರು ಸೂಚನೆ ನೀಡಿದರೂ, ನಿರ್ಲಕ್ಷ್ಯ ವಹಿಸಿದ ಯುವಕನ ಕುಟುಂಬದಲ್ಲಿ ಹಲವು ತೊಂದರೆಗಳಾಗಲು ಆರಂಭಿಸುತ್ತವೆ. ನಂತರ ಗೌಡರನ್ನು ವಿನಂತಿಸಿಕೊಂಡು ವೀರಭದ್ರ ದೇವರ ಹಲಗೆಯನ್ನು ತಂದು ತಮ್ಮ ಮನೆಯ ಅರ್ಧ ಭಾಗವನ್ನೇ ದೇವಾಲಯವನ್ನಾಗಿ ಮಾರ್ಪಡಿಸಿ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ. ದೇವಾಲಯ ಸ್ಥಾಪನೆಯಾದ ನಂತರ ಹಲವು ಪವಾಡ ಸದೃಶ ಘಟನೆಗಳು ಜರುಗಿದ್ದು, ಸಾಕಷ್ಟು ಜನರಿಗೆ ಸಂತಾನ ಭಾಗ್ಯ ದೊರಕಿದೆ ಎಂದು ಒಳಿತು ಕಂಡವರು ಹೇಳಿದ್ದಾರೆ. ವೀರಭದ್ರ ಸ್ವಾಮಿಯ ಕೃಪೆಗೆ ಒಳಗಾದ ಜೈನ ಸಮಾಜದ ಶ್ರೀ ಬಸವರಾಜ ಗುರುಗಳು ಇತ್ತೀಚೆಗೆ ನಿಧನರಾಗಿದ್ದು, ಅವರ ವಂಶಸ್ಥರೇ ದೇವಾಲಯವನ್ನು ಮುಂದುವರಿಸುತ್ತಿದ್ದಾರೆ. ಇದೇ ಮುಂಬರುವ ಮಾ.4ರ ಮಂಗಳವಾರದಂದು ವೀರ ಭದ್ರಸ್ವಾಮಿಯ ವಾರ್ಷಿಕ ರಥೋತ್ಸವ ನಡೆಯಲಿದೆ.
ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ (ಪಿ.ಬಿ.ರಸ್ತೆ)ಯ ದಕ್ಷಿಣ ಭಾಗದಲ್ಲಿ ಇನ್ನೂ ಹಲವು ದೇವಾಲಯಗಳಿದ್ದು, ಇವುಗಳೆಲ್ಲವೂ ಆಯಾ ಸಂದರ್ಭದಲ್ಲಾದ ಸ್ವಪ್ನದೃಷ್ಠಾಂತ ಪ್ರೇರಣೆಯಿಂದಲೇ ನಿರ್ವಣವಾಗಿರುವುದು ಆಶ್ಚರ್ಯವೆನಿಸಿದರೂ ಸತ್ಯ. ಪಿ.ಬಿ.ರಸ್ತೆಗೆ ಹತ್ತಿರದಲ್ಲೇ ಇರುವ ಬುಡರಸಿಂಗಿ ಶ್ರೀ ರಾಜೇಂದ್ರ ಸುರೀಶ್ವರಜಿ ಮಹಾರಾಜರ ಮಂದಿರ ಮತ್ತು ಗಬ್ಬೂರು ಪಾರ್ಶ್ವನಾಥ ಮಂದಿರ ಪಾಲಿಕೊಪ್ಪದಿಂದ ಹುಬ್ಬಳ್ಳಿಗೆ ಹೋಗುವ ಮಾರ್ಗದಲ್ಲಿ ದೊರೆಯುವ ಇನ್ನೆರಡು ಜೈನಕ್ಷೇತ್ರಗಳು. ಮಧ್ಯಪ್ರದೇಶದ ಇಂದೋರ್ ಸಮೀಪದ ಮೋಹನ್ಖೇಡ ಎಂಬಲ್ಲಿ ಜಗತ್ಪ್ರಸಿದ್ಧ ಜೈನಮುನಿ ಶ್ರೀರಾಜೇಂದ್ರ ಸುರೀಶ್ವರಜಿ ಮೂಲ ಮಂದಿರವಿದೆ. ದರ್ಶನಕ್ಕಾಗಿ ಹುಬ್ಬಳ್ಳಿಯಿಂದ ಹೋಗಿದ್ದ ಪರಸ್ಮಲ್ಜಿ ಬಗ್ರೇಚಾ ಅವರಿಗೆ ರಾತ್ರಿ ಕನಸಿನಲ್ಲಿ ಹುಬ್ಬಳ್ಳಿ ದಕ್ಷಿಣ ಭಾಗದಲ್ಲಿ ಒಂದು ಮಂದಿರ ನಿರ್ವಣಕ್ಕೆ ಪ್ರೇರಣೆ ದೊರೆಯುತ್ತದೆ. ಅಲ್ಲಿಂದ ಮೂರ್ತಿಯ ಫೋಟೋ ತೆಗೆದುಕೊಂಡು ಬಂದು ಹುಬ್ಬಳ್ಳಿಯ ಶಂಕರಗೌಡ ಎಂಬ ಕಲಾವಿದನಿಂದ ಮೂರ್ತಿ ಮಾಡಿಸಿ ಬುಡರಸಿಂಗಿಯಲ್ಲಿ ಮಂದಿರವನ್ನು ನಿರ್ಮಾಣ ಮಾಡಿದ್ದಾರೆ. ಅದೇ ರೀತಿ ಆಚಾರ್ಯ ಧನಪಾಲ್ ಸುರೀಶ್ವರಜಿ ಎಂಬ ಜೈನಮುನಿ ದೇಹ ತ್ಯಜಿಸಿದ ನಂತರ ಅವರ ಸಮಾಧಿಯನ್ನು ಎಲ್ಲಿ ಮಾಡಬೇಕೆಂಬ ಪ್ರಶ್ನೆ ಉದ್ಭವವಾದಾಗ ಗಬ್ಬೂರಿನಲ್ಲಿ ದಾನಿಗಳೊಬ್ಬರು 30 ಗುಂಟೆ ಭೂಮಿಯನ್ನು ದಾನ ಮಾಡಿದರು. ಅಲ್ಲಿಯೇ ಅವರ ಸಮಾಧಿ ನಿರ್ವಣವಾಯಿತು. ಜತೆಗೆ ಭಗವಾನ್ ಪಾರ್ಶ್ವನಾಥ ಸ್ವಾಮಿಯ ಮಂದಿರವನ್ನು ನಿರ್ವಿುಸಲಾಯಿತು. ಪಾಲಿಕೊಪ್ಪದ ಶ್ರೀ ಶಿವಶಕ್ತಿಧಾಮದ ಕೀರ್ತಿ ಶಿಖರಕ್ಕೆ ಪೂರಕವಾಗಿ ಇಂತಹ ಹಲವು ಕ್ಷೇತ್ರಗಳು ಈ ಭಾಗದಲ್ಲಿವೆ.
ಪಾಲಿಕೊಪ್ಪದಿಂದ ಕೇವಲ ನಾಲ್ಕೈದು ಕಿ.ಮೀ. ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ತಡಸ ಕ್ರಾಸ್ ಬಳಿ ಶ್ರೀ ಗಾಯತ್ರಿದೇವಿ ದೇವಸ್ಥಾನ ಈ ಭಾಗದ ಪ್ರಸಿದ್ಧ ಶಕ್ತಿಕ್ಷೇತ್ರ. ಗಾಯತ್ರಿ ದೇವಿಯನ್ನು ವೇದಮಾತೆ ಎನ್ನಲಾಗುತ್ತದೆ. ಸನಾತನ ಸಂಸ್ಕೃತಿಗೆ ಆಧಾರವಾಗಿರುವ ನಾಲ್ಕು ವೇದಗಳ ಮೂಲ ಮಂತ್ರವೇ ಗಾಯತ್ರಿ ಮಂತ್ರ. ಗಾಯತ್ರಿಯನ್ನು ಸರಸ್ವತಿ ದೇವಿಯ ಸ್ವರೂಪ ಎಂದೇ ಭಾವಿಸಲಾಗುತ್ತದೆ. ವೇದಮಾತೆಯನ್ನು ಸ್ಮರಿಸದೆ ಯಾವುದೇ ಪೂಜೆ ಪುನಸ್ಕಾರವೂ ಆರಂಭವಾಗುವುದಿಲ್ಲ. ಸಂಧ್ಯಾವಂದನೆಯಲ್ಲಿ ಹೇಳುವ ಗಾಯತ್ರಿ ಮಂತ್ರವೇ ವೈದಿಕರ ಧಾರ್ವಿುಕ ಶಕ್ತಿವೃದ್ಧಿಯ ರಹಸ್ಯ. ಉತ್ತರ ಭಾರತದ ಹರಿದ್ವಾರದಲ್ಲಿ ಮೂಲ ಗಾಯತ್ರಿ ಮಂದಿರವಿದ್ದು, ದಕ್ಷಿಣ ಭಾರತದಲ್ಲಿ ಗಾಯತ್ರಿ ಮಂದಿರಗಳು ತೀರಾ ಅಪರೂಪ. ಅಂತಹ ಅಪರೂಪದ ಗಾಯತ್ರಿದೇವಿ ತಪೋಭೂಮಿಯು ಪಾಲಿಕೊಪ್ಪಕ್ಕೆ ಸಮೀಪದಲ್ಲಿರುವ ತಡಸ ಗ್ರಾಮದಲ್ಲಿದೆ.
ಕಳೆದ 25 ವರ್ಷಗಳ ಹಿಂದೆ ಶ್ರೀ ಬಾಲಕೃಷ್ಣಾನಂದ ಸರಸ್ವತಿ ಸ್ವಾಮೀಜಿ ಎಂಬ ಸಾಧಕರಿಗೆ ಸ್ವಪ್ನ ದೃಷ್ಟಾಂತದ ಮೂಲಕ ದೊರೆತ ಪ್ರೇರಣೆಯಿಂದ ದಕ್ಷಿಣ ಭಾರತದ, ಅದರಲ್ಲೂ ಉತ್ತರ ಕರ್ನಾಟಕದ ಹುಬ್ಬಳ್ಳಿ ಸಮೀಪದ ತಡಸದಲ್ಲಿ ಗಾಯತ್ರಿ ದೇವಾಲಯ ಸ್ಥಾಪನೆಗೊಂಡಿದೆ. ನಿತ್ಯ ನೂರಾರು ಭಕ್ತರು, ಗಣ್ಯರು ಮೇಲಿಂದ ಮೇಲೆ ಭೇಟಿ ನೀಡುವ ಪುಣ್ಯಕ್ಷೇತ್ರವಾಗಿದೆ. ಶೃಂಗೇರಿ, ಉಡುಪಿ ಪೇಜಾವರ, ಸ್ವರ್ಣವಲ್ಲಿ, ಬಾಬಾರಾಮದೇವ ಮತ್ತಿತರ ಅನೇಕ ಶ್ರೀಗಳು ಇಲ್ಲಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಈ ಹಿಂದೆ ಈ ಕ್ಷೇತ್ರದಲ್ಲಿ ಕೋಟಿ ಜಪಯಜ್ಞದ ಬೃಹತ್ ಕಾರ್ಯಕ್ರಮ ನಡೆದಿದ್ದು, ಕ್ಷೇತ್ರದ ಧಾರ್ವಿುಕ ಶಕ್ತಿ ಹೆಚ್ಚಾಗಿದೆ. ದೇವಾಲಯ ನಿರ್ವಣವಾಗಿ 25 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಮುಂಬರುವ ಏಪ್ರಿಲ್ನಲ್ಲಿ ಶೃಂಗೇರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನಾವು ಈ ಹಿಂದೆ ವಿಆರ್ಎಲ್ ಕೇಂದ್ರ ಕಚೇರಿ ನಿರ್ಮಾಣಕ್ಕಾಗಿ ವರೂರಿನಲ್ಲಿ ಜಾಗ ಖರೀದಿ ಮಾಡುವಾಗ ಅಥವಾ ಪಾಲಿಕೊಪ್ಪದಲ್ಲಿ ಜಮೀನು ಖರೀದಿಸಿ ದೇವಾಲಯ ನಿರ್ವಿುಸುವಾಗ ಜಾಗದ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ನಂತರ ಈ ಎಲ್ಲ ಭಾಗದಲ್ಲಿ ಒಂದು ಧಾರ್ವಿುಕ ಶಕ್ತಿ, ಜಾಗದ ಮಹತ್ವ ತಿಳಿಯಿತು. ಈ ಭಾಗದಲ್ಲಿ ಸಾಕಷ್ಟು ದೇವಾಲಯಗಳಿದ್ದು, ಆ ಎಲ್ಲ ಕ್ಷೇತ್ರಗಳ ನಿರ್ಮಾಣದ ಹಿಂದೆ ದೇವರ ಸ್ವಪ್ನ ಪ್ರೇರಣೆ ಇದೆ ಎಂಬುದು ನಂತರ ತಿಳಿಯಿತು. ನಮಗೆ ಯಾವುದೇ ಕನಸು ಬಿದ್ದಿಲ್ಲ. ಬದಲಾಗಿ ಹಿಂದು ಸಮಾಜ ಮತ್ತು ಸನಾತನ ಸಂಸ್ಕೃತಿಯ ಪ್ರಸಾರಕ್ಕಾಗಿ ಅಳಿಲುಸೇವೆ ಮಾಡಬೇಕೆಂಬ ಸಂಕಲ್ಪದಿಂದ ಈ ಕಾರ್ಯವಾಗಿದೆ. ಕಳೆದ ಒಂದು ವರ್ಷದಲ್ಲಿ ಬರುವ ಭಕ್ತರ ಸಂಖ್ಯೆಯನ್ನು ಗಮನಿಸಿದರೆ ಮುಂದಿನ ತಲೆಮಾರಿಗೆ ಇದೊಂದು ದೊಡ್ಡ ಧಾರ್ವಿುಕ ಕ್ಷೇತ್ರವಾಗುವುದರಲ್ಲಿ ಸಂದೇಹವಿಲ್ಲ. | ಡಾ. ವಿಜಯ ಸಂಕೇಶ್ವರ, ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್
ಪಾಲಿಕೊಪ್ಪದಿಂದ ಕೇವಲ ಆರೇಳು ಕಿ.ಮೀ.ದೂರದಲ್ಲಿರುವ ವರೂರು ವಿಆರ್ಎಲ್ ಕೇಂದ್ರ ಕಚೇರಿಯ ಮುಂಭಾಗದಲ್ಲಿರುವ ಜೈನ ಧರ್ಮದ ನವಗ್ರಹ ತೀರ್ಥಕ್ಷೇತ್ರ ಕೇವಲ ಜೈನರಿಗಷ್ಟೇ ಅಲ್ಲದೆ ಸನಾತನ ಧಾರ್ವಿುಕ ಆಸ್ತಿಕರೆಲ್ಲರಿಗೂ ಪವಿತ್ರಕ್ಷೇತ್ರವಾಗಿದೆ. ಈ ಕ್ಷೇತ್ರದ ಮುನಿಗಳಾಗಿರುವ ಶ್ರೀ ಆಚಾರ್ಯ ಗುಣಧರನಂದಿ ಮಹಾರಾಜರಿಗೆ ಪದ್ಮಾವತಿ ದೇವಿಯಿಂದ ದೊರೆತ ಸ್ವಪ್ನ ಪ್ರೇರಣೆಯಂತೆ ಈ ಕ್ಷೇತ್ರವನ್ನು ನಿರ್ಮಾಣ ಮಾಡಿದ್ದಾರೆ. ಕ್ಷೇತ್ರ ನಿರ್ವಣಕ್ಕೆ ಬೇಕಾದ ಆರ್ಥಿಕ ಸಂಪನ್ಮೂಲದ ಕೊರತೆ ಇದ್ದಾಗ್ಯೂ ಭಿಕ್ಷೆ ಬೇಡಿ ಧರ್ಮ ದೀಕ್ಷೆ ನೀಡುವ ಕೆಲಸ ಮಾಡಲು ಮುಂದಾಗಿದ್ದಾಗಿ ಸ್ವಾಮೀಜಿ ತಿಳಿಸಿದ್ದಾರೆ. ವೈಜ್ಞಾನಿಕವಾಗಿ ಮತ್ತು ಶಾಸ್ತ್ರದ ಪ್ರಕಾರವೂ ನವಗ್ರಹಗಳು ಈ ಜಗತ್ತಿಗೆ ಆಧಾರ. ನವಗ್ರಹಗಳ ತರಂಗಗಳನ್ನು ಆಧರಿಸಿ ಭೂಮಿಯ ಮೇಲಿನ ಪ್ರಮುಖ ಬೆಳವಣಿಗೆ ಮತ್ತು ಬದಲಾವಣೆಗಳು ಆಗುತ್ತವೆ. ಆದ್ದರಿಂದ ನವಗ್ರಹ ಸಹಿತ ಜೈನ ಭೂಗೋಳ ಕ್ಷೇತ್ರವನ್ನು ಇಲ್ಲಿ ನಿರ್ವಿುಸಲಾಗಿದೆ. ಭಗವಾನ್ ಪಾರ್ಶ್ವನಾಥ ಮತ್ತು ಪದ್ಮಾವತಿ ಅಮ್ಮನವರ ಸಾನ್ನಿಧ್ಯವೂ ಇಲ್ಲಿದೆ. ಶ್ರೀಗಳು ಸ್ಥಾಪಿಸಿರುವ ಸುಮೇರು ಪರ್ವತದ ಪ್ರತಿಕೃತಿಯು 400 ಅಡಿ ಎತ್ತರವಿದ್ದು, ಪ್ರವಾಸಿಗರನ್ನು ಆಕರ್ಷಿಸಲು ಪ್ರಮುಖ ಕಾರಣವಾಗಿದೆ.