

Delhi Election Result: ಬಹುನಿರೀಕ್ಷಿತ ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು (ಫೆ.08) ಅಧಿಕೃತವಾಗಿ ಪ್ರಕಟವಾಯಿತು. ಎಕ್ಸಿಟ್ ಪೋಲ್ ಸಮೀಕ್ಷೆಗಳ ವರದಿಯಂತೆ 27 ವರ್ಷಗಳ ಬಳಿಕ ದೆಹಲಿಯಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದೆ. ಮೂರನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾತರದಿಂದ ಕಾಯುತ್ತಿದ್ದ ಆಮ್ ಆದ್ಮಿ ಪಕ್ಷದ ಕನಸನ್ನು ಚಿವುಟಿ ದೆಹಲಿಯಲ್ಲಿ ಕಮಲ ಅರಳಿದೆ. ಸರ್ಕಾರ ರಚಿಸುವತ್ತ ಹೆಜ್ಜೆ ಹಾಕಬೇಕಿದ್ದ ಎಎಪಿ ಈಗ ಹೀನಾಯ ಸೋಲನ್ನು ಅನುಭವಿಸಿರುವುದು ಪಕ್ಷದ ನಾಯಕರಲ್ಲಿ ತೀರ ಬೇಸರ ತಂದಿದೆ. ಅಸಲಿಗೆ ಈ ಐದು ವಿಷಯಗಳೇ ಎಎಪಿ ಸೋಲಿಗೆ ಕಾರಣವಾಯಿತೇ ಎಂಬ ಮಾತುಗಳು ಸದ್ಯ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಕಳೆದ ಚುನಾವಣೆಗಳಿಗೆ ಹೋಲಿಸಿದರೆ, ಆಮ್ ಆದ್ಮಿ ಪಕ್ಷದ ಸಾಧನೆ ತುಂಬಾ ಕಳಪೆಯದ್ದಾಗಿದೆ. 2015ರಲ್ಲಿ, ಎಎಪಿ 67 ಸ್ಥಾನಗಳನ್ನು ಗೆದ್ದಿದೆ. ಆದರೆ, 2020ರಲ್ಲಿ, ಈ ಸಂಖ್ಯೆ 62ಕ್ಕೆ ಇಳಿದಿದೆ. ಮತ್ತೊಂದೆಡೆ, ಬಿಜೆಪಿ 2015ರಲ್ಲಿ ಮೂರು ಸ್ಥಾನಗಳನ್ನು ಮತ್ತು 2020ರಲ್ಲಿ ಎಂಟು ಸ್ಥಾನಗಳನ್ನು ಗೆದ್ದಿದೆ. ಇನ್ನೂ ಈ ಬಾರಿ, ಕಮಲದ ಸ್ಥಾನಗಳು ಗಮನಾರ್ಹವಾಗಿ ಹೆಚ್ಚಾಗಿವೆ. ಸದ್ಯ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಸೋಲಿನ ಹಿಂದಿರುವ ಐದು ಪ್ರಮುಖ ಕಾರಣಗಳು ಹೀಗಿವೆ ಗಮನಿಸಿ.
ಪಕ್ಷದ ಉನ್ನತ ನಾಯಕರಾದ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ವಿರುದ್ಧ ಭ್ರಷ್ಟಾಚಾರ ಆರೋಪಗಳು ಮತ್ತು ಅರೆಸ್ಟ್ ಪಕ್ಷದ ವರ್ಚಸ್ಸನ್ನು ತೀವ್ರವಾಗಿ ಡ್ಯಾಮೇಜ್ ಮಾಡಿತು. ಈ ಕಾನೂನು ವಿವಾದಗಳು ಎಎಪಿಯ ಭ್ರಷ್ಟಾಚಾರ ವಿರೋಧಿ ವರ್ಚಸ್ಸನ್ನು ಮತ್ತಷ್ಟು ದುರ್ಬಲಗೊಳಿಸಿತು. ಕೇಜ್ರಿವಾಲ್ ತಮ್ಮ ಭರವಸೆಗಳನ್ನು ಈಡೇರಿಸುವಲ್ಲಿಯೂ ವಿಫಲರಾಗಿದ್ದಾರೆ. ಯಮುನಾ ನದಿಯನ್ನು ಸ್ವಚ್ಛಗೊಳಿಸುವುದು, ದೆಹಲಿ ರಸ್ತೆಗಳನ್ನು ಪ್ಯಾರಿಸ್‌ನಂತೆ ಮಾಡುವುದು ಹಾಗೂ ಶುದ್ಧ ನೀರನ್ನು ಒದಗಿಸುವುದು ಸೇರಿ ಮುಂತಾದ ಭರವಸೆಗಳನ್ನು ಕೇಜ್ರಿವಾಲ್ ಈಡೇರಿಸಲಿಲ್ಲ.
ಕೇಜ್ರಿವಾಲ್ ಬಂಧನ ಮತ್ತು ನಂತರದ ರಾಜೀನಾಮೆ ಪಕ್ಷದ ನಾಯಕತ್ವದಲ್ಲಿ ಅಸ್ಥಿರತೆಗೆ ಕಾರಣವಾಯಿತು ಎಂಬುದು ಪ್ರಮುಖ ಕಾರಣಗಳಲ್ಲಿ ಒಂದು. ಅತಿಶಿ ಅವರನ್ನು ತಮ್ಮ ಸ್ಥಾನಕ್ಕೆ ತಂದಿದ್ದೇ ಆದರೂ ನಾಯಕತ್ವ ಬದಲಾವಣೆಯು ಪಕ್ಷಕ್ಕೆ ಸವಾಲಾಗಿ ಪರಿಣಮಿಸಿತು. ಈ ವಿಷಯದಲ್ಲಿ ಅರವಿಂದ್ ಕೇಜ್ರಿವಾಲ್ ಅವರ ವಿಶ್ವಾಸಾರ್ಹತೆ ಇನ್ನಷ್ಟು ಕುಸಿದು ಹೋಯಿತು.
ವಾಸ್ತವವಾಗಿ, ಸ್ಥಾನಗಳ ವಿಷಯದಲ್ಲಿ, ಕಾಂಗ್ರೆಸ್ ದೆಹಲಿಯಲ್ಲಿ ಕೇವಲ ಒಂದೇ ಒಂದು ಸ್ಥಾನವನ್ನೂ ಗೆಲ್ಲಲಿಲ್ಲ. ಆದರೆ, ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಕಾಂಗ್ರೆಸ್‌ನೊಂದಿಗೆ ಮಾಡಿದಂತೆ, ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಮತಗಳು ವಿಭಜನೆಯಾಯಿತು. 2013ರ ಬಳಿಕ ಕಾಂಗ್ರೆಸ್ ವೋಟ್ಬ್ಯಾಂಕ್ ಆಮ್ ಆದ್ಮಿ ಪಕ್ಷದ ಕಡೆಗೆ ಬದಲಾಯಿತು. ಆದ್ದರಿಂದ, ಕೈ ಮರಳುವಿಕೆಯಿಂದಾಗಿ ಎಎಪಿ ಸೋಲುಂಡಿತು. ಅಲ್ಲದೆ, 2024ರ ಲೋಕಸಭಾ ಚುನಾವಣೆಯಲ್ಲಿ ದೆಹಲಿಯಲ್ಲಿ ಎಲ್ಲಾ 7 ಸ್ಥಾನಗಳನ್ನು ಕಳೆದುಕೊಂಡು ಪಂಜಾಬ್‌ನಲ್ಲಿ ಕೇವಲ 3 ಸ್ಥಾನಗಳನ್ನು ಗೆದ್ದ ಕಾರಣ ಪಕ್ಷದ ಬೆಂಬಲ ಕುಸಿದಿದೆ. ಇದು ಮತದಾರರ ವಿಶ್ವಾಸದಲ್ಲಿ ಕುಸಿತಕ್ಕೆ ಕಾರಣವಾಗಿರಬಹುದು.
ಪಕ್ಷದೊಳಗಿನ ಆಂತರಿಕ ಕಲಹ, ಕೈಲಾಶ್ ಗೆಹ್ಲೋಟ್ ಮತ್ತು ರಾಜ್ ಕುಮಾರ್ ಆನಂದ್ ಅವರಂತಹ ಪ್ರಮುಖ ನಾಯಕರ ರಾಜೀನಾಮೆಗಳು ಸಾಂಸ್ಥಿಕ ದೌರ್ಬಲ್ಯವನ್ನು ಎತ್ತಿ ಹಿಡಿದವು. ಇದು ಎಎಪಿಯ ಪತನಕ್ಕೆ ಒಂದು ಬಲವಾದ ಕಾರಣ ಎನ್ನಲಾಗಿದೆ.
ಎಎಪಿ ವಿರುದ್ಧದ ಭ್ರಷ್ಟಾಚಾರ ಆರೋಪಗಳನ್ನು ವಿರೋಧ ಪಕ್ಷಗಳು ಪಕ್ಷದ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಲು ಬಳಸಿಕೊಂಡವು. ಇದು ಎಎಪಿ ಖ್ಯಾತಿಯನ್ನು ಇನ್ನಷ್ಟು ಹಾಳು ಮಾಡಿತು. ಮಹಿಳೆಯರು ಮತ್ತು ಹೊಸ ಮತದಾರರು ಎಎಪಿಯಲ್ಲಿ ಆಸಕ್ತಿ ತೋರಿಸಲು ಮುಂದಾಗಲಿಲ್ಲ. ಇದರ ಪರಿಣಾಮವಾಗಿ, ಕೇಜ್ರಿವಾಲ್ ಅವರ ಇಮೇಜ್ ಡ್ಯಾಮೇಜ್ ಆಗುವುದರ ಜತೆಗೆ ಚುನಾವಣಾ ಗೆಲುವಿನಿಂದಲೂ ದೂರ ಸರಿದರು,(ಏಜೆನ್ಸೀಸ್).