

ಲೋಕಜ್ಞಾನದ ಮೂರ್ತಿಯಾದ ಮುಹಮದ್ ಪೈಗಂಬರ್(ಸ) ಹೇಳದ ವಿಚಾರವಿಲ್ಲ, ರ್ಚಚಿಸದ ವಿಷಯವಿಲ್ಲ. ಉದ್ದೇಶ ಪೂರ್ವಕವಾಗಿ ಬಡ್ಡಿ ಹೇರುವ, ಸಾಕ್ಷಿ ನೀಡುವ ಮತ್ತು ಬಡ್ಡಿಯ ವ್ಯವಹಾರವನ್ನು ಬರೆಯುವ ಪ್ರತಿಯೊಬ್ಬರನ್ನು ಪ್ರವಾದಿ(ಸ) ಶಪಿಸಿದ್ದಾರೆ. ಈ ಬಡ್ಡಿ ವ್ಯವಹಾರ ಬಡವರ ಬದುಕನ್ನು ನರಕವಾಗಿಸುತ್ತದೆ. ಜಗಳ, ಸಂಬಂಧ ಕಡಿತ, ಸುಳ್ಳು, ಕೊಲೆ, ಸುಲಿಗೆ, ನೀಚ ವರ್ತನೆಗಳು ಬಡ್ಡಿ ವ್ಯವಹಾರದ ಮೂಲ ಲಕ್ಷಣಗಳಾಗಿವೆ. ಇದರ ಒಟ್ಟು ಅರ್ಥವೇನೆಂದರೆ ಪ್ರವಾದಿ(ಸ)ಯವರ ಶಫಾಅತ್ನಿಂದ ಅಂದು ಇಂತಹ ವ್ಯಕ್ತಿಗಳು ವಂಚಿತರಾಗಿರುವರು. ಅಷ್ಟೇ ಅಲ್ಲ, ಪ್ರವಾದಿವರ್ಯರ(ಸ) ಶಾಪವೂ ಅವರ ಮೇಲೆ ಬೀಳುವುದು.
ಪ್ರವಾದಿ ನುಡಿದರು: ಇಂದು ರಾತ್ರಿ ನನ್ನ ಹತ್ತಿರ ಇಬ್ಬರು ಆಗಮಿಸಿದರು. ಅವರು ನನ್ನನ್ನು ಒಂದು ಪವಿತ್ರ ಸ್ಥಳಕ್ಕೆ ಕರೆದುಕೊಂಡು ಹೋದರು. ಮುಂದೆ ಮೂವರೂ ರಕ್ತ ಹರಿಯುವ ಒಂದು ಕಾಲುವೆ ಹತ್ತಿರ ತಲುಪಿದೆವು. ಅಲ್ಲಿ ಒಬ್ಬ ವ್ಯಕ್ತಿ ನಿಂತಿದ್ದನು. ಕಾಲುವೆಯ ದಡದಲ್ಲಿ ಮತ್ತೊಬ್ಬ ವ್ಯಕ್ತಿ ನಿಂತಿದ್ದನು. ಅವನ ಮುಂದೆ ಅನೇಕ ಕಲ್ಲುಗಳಿದ್ದವು. ಕಾಲುವೆಯಲ್ಲಿ ನಿಂತಿದ್ದ ವ್ಯಕ್ತಿ ಅಲ್ಲಿಂದ ಹೊರ ಬರಲು ಮುಂದೆ ಹೆಜ್ಜೆ ಹಾಕಿದಾಗಲೆಲ್ಲ ದಡದಲ್ಲಿ ನಿಂತಿದ್ದ ವ್ಯಕ್ತಿ ಅವನ ಮುಖಕ್ಕೆ ಕಲ್ಲು ಹೊಡೆದು ಅವನು ಬಂದಲ್ಲಿಗೆ ಮರಳುವಂತೆ ಮಾಡುತ್ತಿದ್ದನು. ಹೀಗೆ ಎಡೆಬಿಡದೆ ನಡೆಯುತ್ತಿತ್ತು. ರಕ್ತದ ಕಾಲುವೆಯಲ್ಲಿ ನಿಂತಿದ್ದ ವ್ಯಕ್ತಿ ಯಾರು? ಎಂದು ಕೇಳಿದೆ.
ಅದಕ್ಕೆ ಉತ್ತರವಾಗಿ ಒಬ್ಬನು, ಈತ ಭೂಲೋಕದಲ್ಲಿ ಬಡ್ಡಿ ತಿನ್ನುತ್ತಿದ್ದನು. ಬಡ್ಡಿಯು ರಕ್ತದ ರೂಪದಲ್ಲಿ ಹರಿಯುತ್ತಿತ್ತು. ಅದರಲ್ಲಿ ಅವನನ್ನು ನಿಲ್ಲಿಸಲಾಗಿದೆ ಎಂದನು. ಅಲ್ಲಾಹನ ಪ್ರವಾದಿ ಹೇಳಿದರು. ಲಂಚ ಕೊಡುವವನ ಮೇಲೆ, ಲಂಚ ಪಡೆಯುವವನ ಮೇಲೆ ಅಲ್ಲಾಹನ ಶಾಪವಿದೆ. ಇಂದಿನಂತೆ ಅಂದೂ ಸರ್ಕಾರಿ ನೌಕರರು (ರಾಜಾಸ್ಥಾನ) ಲಂಚ ಪಡೆಯುತ್ತಿದ್ದುದರ ಪ್ರಸ್ತಾಪವಿದೆ. ಸರ್ಕಾರಿ ಅಧಿಕಾರಿಯು ಸಾಮಾನ್ಯ ಜನತೆಯಿಂದ ಯಾವುದಾದರೂ ಕೆಲಸವನ್ನು ಮಾಡಿಕೊಡಲು ಪಡೆದಿದ್ದ ಹಣವೇ ಲಂಚ. ಇದು ಎಲ್ಲ ಕಾಲದಲ್ಲಿ ಪಿಶಾಚಿಯಂತೆ ಮಾನವರನ್ನು ಕಾಡಿದೆ. ಸಂದೇಹಾಸ್ಪದವಾದ ವಸ್ತುಗಳನ್ನು ಮುಟ್ಟಬಾರದು.