

ಬೆಂಗಳೂರು: ಅಗಲಿದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗಾಗಿ ಚಿತ್ರರಂಗ ವಿಶೇಷ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದು, ಅದಕ್ಕೆ 'ಪುನೀತ ನಮನ' ಎಂಬ ಹೆಸರನ್ನು ಇಟ್ಟಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಆ ಬಗ್ಗೆ ಇಂದು ಸುದ್ದಿಗೋಷ್ಠಿಯಲ್ಲಿ ವಿವರವಾದ ಮಾಹಿತಿ ನೀಡಲಾಗಿದೆ.
ಮಂಡಳಿ ಅಧ್ಯಕ್ಷ ಜೈರಾಜ್ ಹಾಗೂ ಸಾ.ರಾ. ಗೋವಿಂದು, ನವರಸನ್, ನಿರ್ದೇಶಕ ನಾಗಣ್ಣ ಮುಂತಾದವರು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಾರ್ಯಕ್ರಮದ ವಿವರ ತಿಳಿಸಿದರು. ಮಂಡಳಿಯಿಂದ ನಡೆಯುವ ಈ ಕಾರ್ಯಕ್ರಮದ ನಿರ್ವಹಣೆ ಜವಾಬ್ದಾರಿಯನ್ನು ನಾಗಣ್ಣ ಅವರು ವಹಿಸಿಕೊಂಡಿದ್ದಾರೆ.
ಪುನೀತ ನಮನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಪುಟ ಸಚಿವರು, ಆಡಳಿತ ಹಾಗೂ ಪ್ರತಿಪಕ್ಷಗಳ ನಾಯಕರು, ನೆರೆರಾಜ್ಯಗಳ ನಟ-ನಟಿಯರು ಭಾಗಿಯಾಗಲಿದ್ದಾರೆ. ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ 3ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ಸುಮಾರು 3 ಗಂಟೆ ನಡೆಯಲಿದೆ. ಕಾರ್ಯಕ್ರಮಕ್ಕಾಗಿ ಯಾರಿಂದಲೂ ಪ್ರಾಯೋಜಕತ್ವ ಪಡೆದಿಲ್ಲ, ಸಂಪೂರ್ಣ ಖರ್ಚನ್ನು ವಾಣಿಜ್ಯ ಮಂಡಳಿಯೇ ಭರಿಸಲಿದೆ. ಮಾತ್ರವಲ್ಲ ಈ ಕಾರ್ಯಕ್ರಮಕ್ಕೆ ಯಾವುದೇ ವಾಣಿಜ್ಯ ಉದ್ದೇಶವಿಲ್ಲ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೂರು ಗಂಟೆಗಳ ಈ ಕಾರ್ಯಕ್ರಮಕ್ಕೆ ಡಾ.ವಿ.ನಾಗೇಂದ್ರ ಪ್ರಸಾದ್ ಗೀತೆಯೊಂದನ್ನು ರಚಿಸಿದ್ದು, ಅದಕ್ಕೆ ಗುರುಕಿರಣ್ ಸಂಗೀತ ಸಂಯೋಜಿಸಿದ್ದಾರೆ. ಈ ಹಾಡಿನ ಪ್ರಸ್ತುತಿ ಜತೆಗೆ ಪುನೀತ್ ಅಭಿನಯದ ಸಿನಿಮಾಗಳ ಕೆಲವು ತುಣುಕುಗಳು ಇರುತ್ತವೆ. 1,500 ಜನರಿಗೆ ಅವಕಾಶ ಕಲ್ಪಿಸಲಾಗಿದ್ದು, ಪಾಸ್ ಇರುವವರಿಗೆ ಮಾತ್ರ ಪ್ರವೇಶ ಇರುತ್ತದೆ. ವೇದಿಕೆ ಮೇಲೆ ಅಪ್ಪು ಪುತ್ಥಳಿ ಮಾತ್ರ ಇರುತ್ತದೆ ಹೊರತು ಅಲ್ಲಿ ಯಾರೂ ಅತಿಥಿಯಾಗಿ ಹಾಜರಿರುವುದಿಲ್ಲ. ಪುನೀತ್ ಅವರ ಸಿನಿಪ್ರಯಾಣದ ತುಣುಕು, ಅವರಿಗೆ ಒಂದು ಶ್ರದ್ಧಾಂಜಲಿ ವಿಡಿಯೋ, ಮೊಂಬತ್ತಿಯಿಂದ ಅಪ್ಪುಗೆ ನಮನ ಕಾರ್ಯಕ್ರಮಗಳೂ ಇರಲಿವೆ. ಅಂದು ಯಾವುದೇ ಸಿನಿಮಾಗೆ ಸಂಬಂಧಿಸಿ ಚಿತ್ರೀಕರಣ ಚಟುವಟಿಕೆ ನಡೆಯುವುದಿಲ್ಲ ಎಂದು ಜೈರಾಜ್ ತಿಳಿಸಿದರು.
ಅಭಿಮಾನಿಗಳಲ್ಲಿ ಮನವಿ: ಇದು ಸಿನಿಮಾರಂಗಕ್ಕೆ ಸೀಮಿತವಾಗಿ ನಡೆಯುವ ಕಾರ್ಯಕ್ರಮ. ಅಲ್ಲದೆ ತೆರೆದ ಮೈದಾನದಲ್ಲಿ ನಡೆಸುವುದು ಕಷ್ಟವಾದ್ದರಿಂದ ಅಭಿಮಾನಿಗಳನ್ನು ಆಹ್ವಾನಿಸಿಲ್ಲ. ಅಭಿಮಾನಿಗಳು ತಾವಿರುವ ಜಾಗದಲ್ಲೇ ಅಪ್ಪುಗೆ ಶ್ರದ್ಧಾಂಜಲಿ ಸಲ್ಲಿಸಬೇಕು ಎಂದು ಕೋರುತ್ತೇವೆ ಎಂಬುದಾಗಿ ಸಾ.ರಾ.ಗೋವಿಂದು ತಿಳಿಸಿದರು.