

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಗಲಿಕೆಯ ಹಿನ್ನೆಲೆಯಲ್ಲಿ ಇಂದು ಸಂಜೆ ರಾಜ್ಯಾದ್ಯಂತ ವಿಶೇಷ ಕಾರ್ಯಕ್ರಮ ನಡೆಯುತ್ತಿದ್ದು, ಪ್ರಮುಖವಾಗಿ ರಾಜ್ಯದ ವಿವಿಧೆಡೆ ಇರುವ ಪ್ರಮುಖ ಚಿತ್ರಮಂದಿರಗಳಲ್ಲಿ ಪುನೀತ್ ಅವರ ಫೋಟೋ ಇರಿಸಿ ಪೂಜಿಸಿ, ಹಣತೆ ಹಚ್ಚಿ, ಹೂ ಹಾಕಿ ಗೀತನಮನವನ್ನೂ ನಡೆಸವು ಮೂಲಕ ಬಾಷ್ಪಾಂಜಲಿ ಸಲ್ಲಿಸಲಾಗುತ್ತಿದೆ.
ಕನ್ನಡ ಚಿತ್ರಪ್ರದರ್ಶಕರ ನೇತೃತ್ವದಲ್ಲಿ ನಡೆಯತ್ತಿರುವ ಈ ಕಾರ್ಯಕ್ರಮಕ್ಕೆ ‘ಪುಷ್ಪಾಂಜಲಿ, ದೀಪಾಂಜಲಿ, ಗೀತಾಂಜಲಿ, ಬಾಷ್ಪಾಂಜಲಿ’ ಎಂಬ ಹೆಸರಿಡಲಾಗಿದ್ದು, ಇದರಲ್ಲಿ ರಾಜ್ಯಾದ್ಯಂತದ ಚಿತ್ರಪ್ರದರ್ಶಕರ ಜೊತೆಗೆ ಅಲ್ಲಿನ ಸಿಬ್ಬಂದಿ ವರ್ಗ ಮಾತ್ರವಲ್ಲದೆ ಚಲನಚಿತ್ರ ಪ್ರೇಕ್ಷಕರು, ಅಭಿಮಾನಿಗಳು ಕೂಡ ಕೈಜೋಡಿಸಿದ್ದಾರೆ. ರಾಜ್ಯದ ಪ್ರಮುಖ ಚಿತ್ರಮಂದಿರಗಳ ಆವರಣದಲ್ಲಿ ಇಂದು ಸಂಜೆ ಆರರಿಂದ ಈ ಕಾರ್ಯಕ್ರಮ ಆರಂಭವಾಗಿದ್ದು, ಕೆಲವೆಡೆ ಇನ್ನೂ ನಡೆಯುತ್ತಲೇ ಇದೆ.
ಗೀತಾಂಜಲಿ: ಪುನೀತ್ಗೆ ಶ್ರದ್ಧಾಂಜಲಿ ಸಲ್ಲಿಸಲೆಂದೇ ಖ್ಯಾತ ಚಿತ್ರಸಾಹಿತಿ ಡಾ.ವಿ. ನಾಗೇಂದ್ರ ಪ್ರಸಾದ್ 'ಬೆಳ್ಳಿ ಬಾನಿನಲ್ಲಿ ಸೇರಿ ಹೋದೆ ಅಪ್ಪು..' ವಿಶೇಷವಾದ ಗೀತೆಯೊಂದನ್ನು ರಚಿಸಿದ್ದಾರೆ. ರಾಜ್ಯದ ಪ್ರಮುಖ ಚಿತ್ರಮಂದಿರಗಳ ಆವರಣದಲ್ಲಿ ಸಾಮೂಹಿಕವಾಗಿ ಈ ಗೀತೆಯನ್ನು ಹಾಡಿ, ಬಳಿಕ 2 ನಿಮಿಷಗಳ ಮೌನಪ್ರಾರ್ಥನೆಯನ್ನು ಸಲ್ಲಿಸಿ ಪುನೀತ್ ಆತ್ಮಕ್ಕೆ ಶಾಂತಿ ಕೋರಲಾಗಿದೆ.
ಹುಬ್ಬಳ್ಳಿಯ ಅಪ್ಸರಾ ಚಿತ್ರಮಂದಿರ ಬಳಿ ನಡೆದ ಕಾರ್ಯಕ್ರಮದಲ್ಲಿ ಭಜರಂಗಿ-2 ಚಿತ್ರದ ವಿಲನ್ ವಜ್ರಗಿರಿ ಭಾಗವಹಿಸಿದ್ದಾರೆ. ಅಪ್ಪು ಫೋಟೋ ಮುಂದೆ ಮೊಂಬತ್ತಿ ಬೆಳಗಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ವಿಜಯನಗರದ ಹೊಸಪೇಟೆಯ ಲಕ್ಷ್ಮೀ, ವಿಜಯಪುರದ ಅಮೀರ, ಕೋಲಾರದ ಭವಾನಿ, ರಾಯಚೂರಿನ ಪದ್ಮನಾಭ, ಕಲಬುರಗಿಯ ಸಂಗಮ್, ಬೀದರ್ನ ಸಪ್ನಾ ಮಲ್ಟಿಪ್ಲೆಕ್ಸ್, ಹಾವೇರಿಯ ಮಾಗಾವಿ, ಬಳ್ಳಾರಿಯ ನಟರಾಜ್, ಹಾಸನದ ಸಹ್ಯಾದ್ರಿ ಸೇರಿದಂತೆ ರಾಜ್ಯದ ವಿವಿಧ ಚಿತ್ರಮಂದಿರಗಳಲ್ಲಿ ಅಪ್ಪುಗೆ ಬಾಷ್ಪಾಂಜಲಿ ಸಲ್ಲಿಸಲಾಗಿದೆ.