ಅಪ್ಪು ಜನ್ಮದಿನಕ್ಕೆ 'ರತ್ನ' ಟ್ರೇಲರ್ ರಿಲೀಸ್​; ಇದು ಪುನೀತ್ ರಾಜಕುಮಾರ್ ಅಭಿಮಾನಿಯ ಸಿನಿಮಾ

WhatsApp Image 2024-03-17 at 3.15.09 PM
Published on

ಬೆಂಗಳೂರು: ಬಸವರಾಜ್ ಬಳ್ಳಾರಿ ನಿರ್ಮಿಸಿ, ನಿರ್ದೇಶಿಸಿರುವ "ರತ್ನ" ಚಿತ್ರದ ಟ್ರೇಲರ್ ಇಂದು ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದಂದೇ ಬಿಡುಗಡೆಯಾಗಿದೆ. ಸದ್ಯ ಟ್ರೇಲರ್​ಗೆ ಸಿನಿಪ್ರಿಯರು ಹಾಗೂ ಅಪಾರ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನು ಈ ಬಗ್ಗೆ ಚಿತ್ರದ ನಿರ್ದೇಶಕರು ಭಾವುಕರಾಗಿ ಮಾತನಾಡಿದ್ದಾರೆ.

ನಾನು "ಸೀನ" ಸೇರಿದಂತೆ ಕೆಲವು ಚಿತ್ರಗಳನ್ನು ನಿರ್ದೇಶಿಸಿದ್ದೇನೆ. ಸೀನ ಚಿತ್ರಕ್ಕೆ ಆರಂಭ ಫಲಕ ತೋರುವ ಮೂಲಕ ಚಾಲನೆ ನೀಡಿದ್ದು, ಪುನೀತ್ ರಾಜಕುಮಾರ್ ಅವರೆ. ಆನಂತರ ಚಿತ್ರೀಕರಣದ ವೇಳೆ ಕೆಲವು ತೊಂದರೆ ಬಂದಾಗ ನಿವಾರಣೆ ಮಾಡಿದ್ದು ಕೂಡ ಅವರೆ ಎಂದು ಅಪ್ಪು ಅವರನ್ನು ಸ್ಮರಿಸುತ್ತಾ ಭಾವುಕರಾದ ನಿರ್ದೇಶಕ ಬಸವರಾಜ್ ಬಳ್ಳಾರಿ, ರತ್ನ ಸಿನಿಮಾ ಅಪ್ಪು ಅವರಿಗಾಗಿಯೇ ಮಾಡಿರುವ ಚಿತ್ರ ಎಂದರು.

ಅಪ್ಪು ಅವರನ್ನು ದೇವರಂತೆ ಆರಾಧಿಸುವ ಅಭಿಮಾನಿಯ ಕುರಿತಾದ ಚಿತ್ರವಿದು. ನಮ್ಮ ಚಿತ್ರದ ನಾಯಕಿಯ ಪಾತ್ರದ ಹೆಸರು "ರತ್ನ".‌ ಆಕೆಗೆ ಅಪ್ಪು ಅವರೆ ಆರಾಧ್ಯದೈವ. ಪುನೀತ್ ರಾಜಕುಮಾರ್ ಅವರನ್ನು ಭೇಟಿಯಾಗಬೇಕೆಂಬ ಹಂಬಲ ಆಕೆಯದು. ಈ ರೀತಿ ಚಿತ್ರದ ಕಥೆ ಸಾಗುತ್ತದೆ. ಇಂದು ಟ್ರೇಲರ್ ಬಿಡುಗಡೆಯಾಗಿದೆ. ಏಪ್ರಿಲ್ 26 ಚಿತ್ರ ತೆರೆಗೆ ಬರಲಿದೆ ಎಂದರು.

ಚಿತ್ರದಲ್ಲಿ ಹರ್ಷಲ ಹನಿ(ನಾಯಕಿ), ವರ್ಧನ್, ಆನಂದ್ ಅಪ್ಪು, ಬಾಲರಾಜ್ ಒಡೆಯರ್, ನಾಗೇಂದ್ರ ಅರಸ್, ಅಮಿತ್ ರಾವ್, ಸಾರಿಕಮ್ಮ, ರಾಣಿ ಬಸವರಾಜ್, ಸುಚಿತ್ ಚೌವ್ಹಾಣ್, ರಾಮು ಕರೂರ್, ಮಂಜು ದೈವಜ್ಞ ಮುಂತಾದವರ ತಾರಾಬಳಗವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net