

ಪುಣೆ: ತಂದೆಯ ದುಬಾರಿ ಬೆಲೆಯ ಪೋರ್ಶೆ ಕಾರನ್ನು (Porsche Car Crash) ಮನಬಂದಂತೆ ಚಲಾಯಿಸಿ, ಬೈಕ್ನಲ್ಲಿ ಸಾಗುತ್ತಿದ್ದವರಿಗೆ ಡಿಕ್ಕಿ ಹೊಡೆದಿದ್ದ ಅಪ್ರಾಪ್ತ ಬಾಲಕನೊಬ್ಬ, ಇಬ್ಬರು ಸಾಫ್ಟ್‌ವೇರ್ ದಂಪತಿಗಳ ಪೈಕಿ ಓರ್ವ ಮಹಿಳೆಯ ಸಾವಿಗೆ ಕಾರಣನಾಗಿದ್ದ. ಈ ಅಪಘಾತ (Accident) ಪ್ರಕರಣದಲ್ಲಿ ಬಂಧಿತನಾಗಿದ್ದ ಬಾಲಕನಿಗೆ ಪುಣೆ ನ್ಯಾಯಾಲಯ ಜೂನ್ 25ರಂದು ಜಾಮೀನು ನೀಡಿತ್ತು. ಆದ್ರೆ, ಇದೀಗ ಮತ್ತೊಮ್ಮೆ ಆತ ಮುನ್ನೆಲೆಗೆ ಬಂದಿದ್ದು, ತನಗೆ ಕಾಲೇಜಿನಲ್ಲಿ ಸೀಟು ಸಿಗುತ್ತಿಲ್ಲ ಎಂದು ಅಳಲು ವ್ಯಕ್ತಪಡಿಸಿದ್ದಾನೆ.
ಬಾಲಕನನ್ನು ರಿಮಾಂಡ್ನಿಂದ ಬಿಡುಗಡೆಗೊಳಿಸಲು ಬಾಂಬೆ ಹೈಕೋರ್ಟ್ ಆದೇಶ ಹೊರಡಿಸಿದ ಬಳಿಕ ಷರತ್ತುಬದ್ಧ ಜಾಮೀನಿನ ಮೇರೆಗೆ ಪ್ರಕರಣದಿಂದ ಹೊರಬಂದ ಹುಡುಗ ಸದ್ಯ ತಾನು ವಿದ್ಯಾಭ್ಯಾಸ ಮುಂದುವರಿಸಲು ಆಗುತ್ತಿಲ್ಲ ಎಂದು ಹೇಳಿಕೊಂಡಿದ್ದಾನೆ. ಈ ಬಗ್ಗೆ ಸ್ವತಃ ಬಾಲಕನ ಪರ ವಾದ ಮಂಡಿಸಿದ್ದ ವಕೀಲರು ಸ್ಪಷ್ಟಪಡಿಸಿದ್ದು, ಕಾಲೇಜಿಗೆ ಸೇರಲು ಹೋದರೆ ಆತನನ್ನು ಆಯಾ ಕಾಲೇಜಿನ ಆಡಳಿತ ಮಂಡಳಿ ಪ್ರವೇಶದ ಅರ್ಜಿಯನ್ನು ಕೊಡಲು ನಿರಾಕರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
"ಪ್ರಸ್ತುತ ಆತನ ವಿರುದ್ಧ ಕ್ರಿಮಿನಲ್ ಕೇಸ್ ಇರುವ ಕಾರಣ ಯಾರು ಅವನಿಗೆ ಕಾಲೇಜಿನಲ್ಲಿ ಸೀಟು ಕೊಡುತ್ತಿಲ್ಲ. ಇತ್ತೀಚೆಗಷ್ಟೇ ತನ್ನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರುವ ಅಪ್ರಾಪ್ತ ಬಾಲಕ, ದೆಹಲಿಯ ಪ್ರತಿಷ್ಠಿತ ಕಾಲೇಜಿನಲ್ಲಿ ಬಿಬಿಎ ಕೋರ್ಸ್‌ಗೆ ಅರ್ಜಿ ಸಲ್ಲಿಸಿದ್ದ. ಆದರೆ ಘಟನೆಯ ಬಗ್ಗೆ ಮಾಹಿತಿ ಪಡೆದ ಕಾಲೇಜು ಆಡಳಿತ ಮಂಡಳಿ ಆತನಿಗೆ ಪ್ರವೇಶವನ್ನು ಇದೀಗ ನಿರಾಕರಿಸಿದೆ" ಎಂದು ಬಾಲಕನ ಪರ ವಕೀಲರು ಜುವೆನೈಲ್ ಜಸ್ಟಿಸ್ ಬೋರ್ಡ್ಗೆ (ಜೆಜೆಬಿ) ಮಾಹಿತಿ ನೀಡಿದ್ದಾರೆ,(ಏಜೆನ್ಸೀಸ್).