ವಿವಾದಿತ IAS ಅಧಿಕಾರಿ ಪೂಜಾ ಖೇಡ್ಕರ್​ ತಾಯಿಗೆ ಶೋಕಾಸ್​ ನೋಟಿಸ್​ ಜಾರಿ; ಪೊಲೀಸರು ಸೂಚಿಸಿದ್ದೇನು?

Untitled-design-2024-07-14T153504.551
Published on

ಮುಂಬೈ: ವಿವಾದಿತ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್​​ ಅವರ ತಾಯಿ ಮನೋರಮಾ ಖೇಡ್ಕರ್ ಅವರಿಗೆ ಪುಣೆ ಪೊಲೀಸರು ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಮನೋರಮಾ ಖೇಡ್ಕರ್ ಪರವಾನಗಿ ಪಡೆದ ಗನ್ ದುರ್ಬಳಕೆ ಮಾಡಿದ್ದಾರೆ ಎಂಬ ಆರೋಪವಿದ್ದು, ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಇತ್ತೀಚೆಗೆ ಮನೋರಮಾ ಖೇಡ್ಕರ್ ಅವರು ರೈತರಿಗೆ ಗನ್​ ತೋರಿಸಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವೀಡಿಯೊದಲ್ಲಿ ಮನೋರಮಾ ಅವರು ಕೆಲವು ಬೌನ್ಸರ್‌ಗಳೊಂದಿಗೆ ಪಿಸ್ತೂಲ್ ಹಿಡಿದುಕೊಂಡು ವಿವಾದಿತ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವುದನ್ನು ವಿರೋಧಿಸಿದ ರೈತನೊಂದಿಗೆ ತೀವ್ರ ವಾಗ್ವಾದದಲ್ಲಿ ತೊಡಗಿರುವುದು ಕಾಣುತ್ತದೆ. ವಾಗ್ವಾದದ ವೇಳೆ ಮನೋರಮಾ ಖೇಡ್ಕರ್ ಪಿಸ್ತೂಲ್​ ಹಿಡಿದಿರುವ ದೃಶ್ಯ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಪುಣೆ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ಅವರು ನೋಟಿಸ್ ಜಾರಿ ಮಾಡಿದ್ದಾರೆ. ಶೋಕಾಸ್ ನೋಟಿಸ್‌ಗೆ 10 ದಿನಗಳ ಒಳಗಾಗಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದ್ದಾರೆ.

ಮನೋರಮಾ ಖೇಡ್ಕರ್ ಅವರಿಗೆ ಖುದ್ದಾಗಿ ನೋಟಿಸ್ ತಲುಪಿಸಲು ಸಾಧ್ಯವಾಗದೆ ಅವರ ನಿವಾಸದಲ್ಲಿ ಅಂಟಿಸಲಾಗಿದೆ. ಮನೋರಮಾ ಅವರು ಬಂದೂಕು ಪರವಾನಗಿಗೆ ಸಂಬಂಧಿಸಿದ ನಿಯಮಗಳು ಮತ್ತು ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆ ಮತ್ತು ಅವರ ಬೇಜವಾಬ್ದಾರಿಯುತ ಕೃತ್ಯವು ಸಾಮಾನ್ಯ ನಾಗರಿಕರ ಜೀವಕ್ಕೆ ಸಂಭಾವ್ಯ ಅಪಾಯವನ್ನುಂಟು ಮಾಡಿದೆ. ಆದ್ದರಿಂದ ಅವರು ಬಂದೂಕು ಪರವಾನಗಿಯನ್ನು ಹೊಂದಲು ಅನರ್ಹರು ಎಂದು ಪರಿಗಣಿಸಲಾಗಿದೆ. ಬಂದೂಕು ಪರವಾನಗಿಯನ್ನು ಏಕೆ ರದ್ದುಗೊಳಿಸಬಾರದು ಎಂಬುದನ್ನು ವಿವರಿಸಬೇಕು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಅಲ್ಲದೆ, ಶೋಕಾಸ್ ನೋಟಿಸ್‌ಗೆ 10 ದಿನಗಳ ಒಳಗಾಗಿ ಪ್ರತಿಕ್ರಿಯೆ ನೀಡುವಂತೆ ಮನೋರಮಾ ಅವರಿಗೆ ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ. ವಿಫಲವಾದರೆ ಅವರ ಬಂದೂಕು ಪರವಾನಗಿ ರದ್ದುಗೊಳಿಸುವ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ. ಸ್ಥಳೀಯ ರೈತರೊಬ್ಬರು ಪುಣೆ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದು, ಮನೋರಮಾ ಖೇಡ್ಕರ್ ಮತ್ತು ಇತರರು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ವಿಷಯ ಮುನ್ನೆಲೆಗೆ ಬಂದಾಗ, ಟ್ರೈನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರನ್ನು ಪುಣೆಯಿಂದ ವಾಶಿಮ್ ಜಿಲ್ಲೆಗೆ ವರ್ಗಾಯಿಸಲಾಯಿತು. ಪೂಜಾ ಖೇಡ್ಕರ್ ಅವರು ತಮ್ಮ ಹುದ್ದೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಮತ್ತು ನಾಗರಿಕ ಸೇವಾ ಪರೀಕ್ಷೆಯಲ್ಲಿ ನಕಲಿ ಅಂಗವೈಕಲ್ಯ ಮತ್ತು ಜಾತಿ ಪ್ರಮಾಣಪತ್ರಗಳನ್ನು ಸಲ್ಲಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಆರೋಪಗಳ ಕುರಿತು ತನಿಖೆ ನಡೆಸಲು ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸಿದೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net