ವಿವಾದದಲ್ಲಿ ಸಿಲುಕಿರುವ ಐಎಎಸ್​​ ಟ್ರೈನಿ ಪೂಜಾ ಖೇಡ್ಕರ್​ ಐಷಾರಾಮಿ ಕಾರು ಜಪ್ತಿ; ಪೊಲೀಸರು ಹೇಳಿದ್ದೇನು?

Untitled-design-2024-07-14T143339.705
Published on

ಮುಂಬೈ: ಮಹಾರಾಷ್ಟ್ರದ ಪುಣೆಯಲ್ಲಿ ಪ್ರೊಬೇಷನರಿ ಐಎಎಸ್ ಪೂಜಾ ಖೇಡ್ಕರ್​ ವಿರುದ್ಧದ ಒಂದೊಂದೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಡಿಎಂ ಕಚೇರಿಯಲ್ಲಿ ಅವರ ವಿಐಪಿ ಬೇಡಿಕೆ ಮೊದಲು ಬೆಳಕಿಗೆ ಬಂದಿದ್ದು, ನಂತರ ನಕಲಿ ವಿಕಲಚೇತನ ಪ್ರಮಾಣಪತ್ರ ನೀಡಿ ಐಎಎಸ್ ಆಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದಲ್ಲದೇ ಇತ್ತೀಚೆಗೆ ವೈದ್ಯಕೀಯ ಪರೀಕ್ಷೆಗೆ ಹಾಜರಾಗಿಲ್ಲ ಎಂಬ ಆರೋಪವನ್ನು ಅವರು ಎದುರಿಸುತ್ತಿದ್ದಾರೆ. ಈ ನಡುವೆ ಪುಣೆ ಪೊಲೀಸರು ಪೂಜಾ ಖೇಡ್ಕರ್ ಅವರು ಬಳಸುತ್ತಿದ್ದ ಆಡಿ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಐಷಾರಾಮಿ ಕಾರನ್ನು ಪುಣೆಯ ಚತುರ್ಶರಂಗಿ ಸಂಚಾರ ವಿಭಾಗದ ಪೊಲೀಸ್ ಠಾಣೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಪೂಜಾ ಖೇಡ್ಕರ್​​​​ ಇಲ್ಲಿ ಪೋಸ್ಟಿಂಗ್​​ ಆದ ಸಮಯದಲ್ಲಿ ಆಡಿ ಕಾರನ್ನು ಬಳಸಿದ್ದಾರೆ. ನೋಂದಾಯಿತ ಬಳಕೆದಾರರ ವಿಳಾಸವು ಹವೇಲಿ ತಾಲೂಕಿನ ಶಿವನೆ ಗ್ರಾಮ ಎಂದು ನಮೂದಿಸಲಾಗಿದೆ. ಅಲ್ಲದೆ ಅವರು ಅನುಮತಿ ಪಡೆಯದೆ ಕಾರಿನ ಮೇಲೆ ಮಹಾರಾಷ್ಟ್ರ ಸರ್ಕಾರ ಎಂದು ಬರೆದಿದ್ದು, ಕಾರಿನ ಮೇಲೆ ಕೆಂಪು ದೀಪವನ್ನು ಬಳಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಶಪಡಿಸಿಕೊಂಡ ಕಾರಿಗೆ ಜಾಮರ್ ಅಳವಡಿಸಲಾಗಿದ್ದು, ಸುತ್ತಲೂ ಬ್ಯಾರಿಕೇಡ್ ಅಳವಡಿಸಲಾಗಿದೆ. 2012 ಜೂನ್ 27ರಂದು ಪುಣೆ ಆರ್‌ಟಿಒದಲ್ಲಿ ನೋಂದಾಯಿಸಲಾದ ಆಡಿ ಕಾರಿನ ವಿರುದ್ಧ ಸಂಚಾರ ಉಲ್ಲಂಘನೆಯ ಆರೋಪದ ಮೇಲೆ ಈ ಹಿಂದೆ ಒಟ್ಟು 27,000 ರೂ.ಗಳ 21 ಚಲನ್‌ಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು.

ಖೇಡ್ಕರ್ ಬಳಸುತ್ತಿದ್ದ ಖಾಸಗಿ ಕಾರಿನ ಮೇಲೆ ಮಹಾರಾಷ್ಟ್ರ ಸರ್ಕಾರದ ಹೆಸರು ಮತ್ತು ಕೆಂಪು ದೀಪವನ್ನು ಅನಧಿಕೃತವಾಗಿ ಬಳಸುವುದರ ವಿರುದ್ಧ ನೋಟಿಸ್ ನೀಡಲಾಗಿದೆ. ಇದೀಗ ಕಾರನ್ನು ಜಪ್ತಿ ಮಾಡಲಾಗಿದೆ. ಅದರ ದಾಖಲೆಗಳನ್ನು ಪರಿಶೀಲಿಸಲಾಗುವುದು ಮತ್ತು ನಾವು ಈ ವಿಷಯವನ್ನು ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ಅವರ ಹೇಳಿದರು.

ರಾಜ್ಯ ಸರ್ಕಾರದ ಕಾರ್ಯದರ್ಶಿ ಮಟ್ಟಕ್ಕಿಂತ ಮೇಲಿರುವ ಉನ್ನತ ಅಧಿಕಾರಿಗಳು, ಪೊಲೀಸ್​​ ಇನ್​ಸ್ಪೆಕ್ಟರ್​​​ ಜನರಲ್ ಮತ್ತು ಪ್ರಾದೇಶಿಕ ಆಯುಕ್ತರ ಶ್ರೇಣಿಯ ಪೊಲೀಸ್​​ ಅಧಿಕಾರಿಗಳು ಮಾತ್ರ ಫ್ಲ್ಯಾಷರ್‌ಗಳಿಲ್ಲದೆ ಅಂಬರ್ ಬೀಕನ್‌ಗಳನ್ನು ಬಳಸಲು ಅನುಮತಿ ಇದೆ. ಉನ್ನತ ಮಟ್ಟದ ಜಿಲ್ಲಾ ಅಧಿಕಾರಿಗಳು ನೀಲಿ ಬೀಕನ್‌ಗಳನ್ನು ಬಳಸಲು ಅರ್ಹರಾಗಿರುತ್ತಾರೆ. ತರಬೇತಿ ನಿರತ ಐಎಎಸ್ ಪೂಜಾ ಖೇಡ್ಕರ್ ಅವರ ಸ್ಥಾನವನ್ನು ದುರುಪಯೋಗಪಡಿಸಿಕೊಂಡ ಆರೋಪದ ನಂತರ ಪುಣೆಯಿಂದ ಮಹಾರಾಷ್ಟ್ರದ ವಾಶಿಮ್ ಜಿಲ್ಲೆಗೆ ವರ್ಗಾಯಿಸಲಾಗಿದೆ. (ಏಜೆನ್ಸೀಸ್​​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net