ನನ್ನನ್ನು ಗೃಹಬಂಧನದಲ್ಲಿ ಇರಿಸಲಾಗಿದೆ; ಕೇಂದ್ರದ ವಿರುದ್ಧ ಮೆಹಬೂಬಾ ಮುಫ್ತಿ ಆರೋಪ

Untitled-design-2024-07-13T160938.852
Published on

ಜಮ್ಮು ಮತ್ತು ಕಾಶ್ಮೀರ: ಕಾಶ್ಮೀರ ಹುತಾತ್ಮರ ದಿನದಂದು ಮಜರ್-ಎ-ಶುಹಾದಾಗೆ ಭೇಟಿ ನೀಡುವುದನ್ನು ತಡೆಯಲು ತಮ್ಮನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹೇಳಿದ್ದಾರೆ.

ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರು ತಮ್ಮ ನಿವಾಸದ ಗೇಟ್‌ಗೆ ಬೀಗ ಹಾಕಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ನನ್ನನ್ನು ಮಜರ್​-ಎ-ಶುಹಾದಾಗೆ ಹೋಗದಂತೆ ತಡೆಯಲಾಗುತ್ತಿದೆ. ಆದರೆ ನಿರಂಕುಶಾಧಿಕಾರ, ದಬ್ಬಾಳಿಕೆ ಮತ್ತು ಅನ್ಯಾಯದ ವಿರುದ್ಧ ಕಾಶ್ಮೀರದ ಪ್ರತಿರೋಧದ ಸಂಕೇತವಾಗಿದೆ. ನನ್ನನ್ನು ಅಲ್ಲಿಗೆ ಹೋಗದಂತೆ ಮತ್ತೊಮ್ಮೆ ಬಾಗಿಲನ್ನು ಮುಚ್ಚಲಾಗಿದೆ ಎಂದು ಹೇಳಿದ್ದಾರೆ.

ಕಾಶ್ಮೀರಿಗಳ ಆತ್ಮವನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂಬುದಕ್ಕೆ ನಮ್ಮ ಹುತಾತ್ಮರ ತ್ಯಾಗವೇ ಸಾಕ್ಷಿ. ಹುತಾತ್ಮರಾದ ಪ್ರತಿಭಟನಾಕಾರರ ಸ್ಮರಣಾರ್ಥ ಈ ದಿನವನ್ನು ಆಚರಿಸುವುದನ್ನೂ ಅಪರಾಧ ಎಂದು ಘೋಷಿಸಲಾಗಿದೆ. 2019 ಆಗಸ್ಟ್ 5ರಂದು ಜಮ್ಮು ಮತ್ತು ಕಾಶ್ಮೀರವನ್ನು ದುರ್ಬಲಗೊಳಿಸಲಾಯಿತು. ನಮಗೆ ಪವಿತ್ರವಾದ ಎಲ್ಲವನ್ನೂ ಕಸಿದುಕೊಳ್ಳಲಾಯಿತು. ಮನಸ್ಸಿನಲ್ಲಿರುವ ನೆನಪುಗಳನ್ನು ಅಳಿಸಲು ಪ್ರಯತ್ನಿಸುತ್ತಾರೆ ಎಂದು ಆರೋಪಿಸಿದರು. ಅಲ್ಲದೆ ಇದು ನಮ್ಮ ನೈತಿಕತೆಯನ್ನು ಹೆಚ್ಚಿಸುತ್ತದೆ. ನಮ್ಮ ಗೌರವ ಮತ್ತು ಹಕ್ಕುಗಳಿಗಾಗಿ ಹೋರಾಟ ಮುಂದುವರಿಸುತ್ತೇವೆ ಎಂದು ಕೇಂದ್ರವನ್ನು ಎಂದು ಮುಫ್ತಿ ತಿಳಿಸಿದರು.

ಮಜರ್-ಎ-ಶುಹಾದಾ ಎಂದರೆ 1931 ಜುಲೈ 13ರಂದು ರಾಜಾ ಹರಿ ಸಿಂಗ್​​ ಅವರ ಆಪಾದಿತ ನಿರಂಕುಶ ಆಡಳಿತದ ವಿರುದ್ಧ ಪ್ರತಿಭಟಿಸುತ್ತಿದ್ದ 22 ಕಾಶ್ಮೀರಿಗಳನ್ನು ಡೋಗ್ರಾ ಸೇನೆಯು ಗುಂಡಿಕ್ಕಿ ಕೊಂದಿತು. ಅಂದಿನಿಂದ, ಪ್ರತಿ ವರ್ಷ ಜನರು ಆ ಸ್ಥಳಕ್ಕೆ ಭೇಟಿ ನೀಡಿ ಗೌರವ ಸಲ್ಲಿಸುತ್ತಾರೆ. 5 ಆಗಸ್ಟ್ 2019ರ ಮೊದಲು ಪ್ರತಿ ವರ್ಷ ಈ ದಿನದಂದು ರಜೆ ಘೋಷಿಸಲಾಗಿತ್ತು. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net