

ಸಾಗರ: ಶರಾವತಿ ಪಂಪ್ಡ್ ಸ್ಟೋರೇಜ್ ಹೆಸರಿನಲ್ಲಿ ಪಶ್ಚಿಮಘಟ್ಟದ ಹೃದಯವನ್ನು ಸೀಳುವ ಕೆಲಸ ಮಾಡಬೇಡಿ. ಜೀವವೈವಿಧ್ಯದಿಂದಲೇ ಪಶ್ಚಿಮಘಟ್ಟ ಹೆಸರುವಾಸಿ. ಇಂತಹ ಯೋಜನೆಗಳು ರಾಜಕಾರಣಿಗಳಿಗೆ ಹಣ ಮಾಡಿಕೊಳ್ಳಲಷ್ಟೇ ಉಪಯೋಗ ಎಂದು ಪರಿಸರಕ್ಕಾಗಿ ನಾವು ಸಂಸ್ಥೆ ಅಧ್ಯಕ್ಷ, ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಹೇಳಿದರು.
ನಗರದ ಎಸಿ ಕಚೇರಿ ಎದುರು ಶಿವಮೊಗ್ಗ ಜಿಲ್ಲಾ ರೈತ ಸಂಘದಿಂದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಭಾನುವಾರ ಪಾಲ್ಗೊಂಡು ಮಾತನಾಡಿದರು.
ಶರಾವತಿ ಕಣಿವೆ ಭೌಗೋಳಿಕವಾಗಿ ಅತ್ಯಂತ ಸೂಕ್ಷ್ಮ ಪ್ರದೇಶ. ಪಶ್ಚಿಮಘಟ್ಟ ಹಾದುಹೋಗುವ ಪರಿಸರದಲ್ಲಿ ಯೋಜನೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಈ ಯೋಜನೆ ಹಿಂದೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾತ್ರವಿದೆ. ಯೋಜನೆ ಅನುಷ್ಠಾನದಿಂದ ನದಿಮೂಲ ಬತ್ತುವ ಜತೆಗೆ ಜಲಕ್ಷಾಮ ಉಂಟಾಗುವ ಸಾಧ್ಯತೆಯೂ ಇದೆ. ಈ ಮಾರಕ ಯೋಜನೆಯಿಂದ ಮುಂದಿನ ಪೀಳಿಗೆ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಪಶ್ಚಿಮಘಟ್ಟ ನಾಶದಿಂದ ಜನಜೀವನಕ್ಕೆ ಆಪತ್ತು ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಎಚ್ಚರಿಸಿದರು.
ಯೋಜನೆ ವಿರೋಧಿಸಿ ಬೆಂಗಳೂರಿನಲ್ಲಿ ಪರಿಸರವಾದಿಗಳ ಸಭೆ ನಡೆಸಿದ್ದಾರೆ. ಯಾವ ಕಾರಣಕ್ಕೂ ಕೈಗೆತ್ತಿಕೊಳ್ಳಬಾರದು ಎಂದು ಒತ್ತಾಯಿಸಲು ನಿರ್ಣಯ ಕೈಗೊಳ್ಳಲಾಗಿದೆ. ರಾಜ್ಯ ಸರ್ಕಾರ ಕಾರ್ಪೋರೇಟ್ ವ್ಯಕ್ತಿಗಳಿಗೆ ಮಣೆ ಹಾಕುತ್ತಿದೆ. ಇಂತಹ ಯೋಜನೆ ಹಿಂದೆ ಸದುದ್ದೇಶ ಇಲ್ಲ. ರಾಜ್ಯ ಸರ್ಕಾರ ಹಣಕ್ಕಾಗಿ ಏನು ಬೇಕಾದರೂ ಮಾಡುವ ಸ್ಥಿತಿಯಲ್ಲಿದೆ ಎಂದು ಆರೋಪಿಸಿದರು.
ವಿದ್ಯುತ್‌ಗಾಗಿ ಪರ್ಯಾಯ ಮಾರ್ಗಗಳು ಸಾಕಷ್ಟಿವೆ. ಅದನ್ನು ಬಿಟ್ಟು ಪಶ್ಚಿಮಘಟ್ಟದ ಹೃದಯಭಾಗವನ್ನು ಬಗೆಯಲು ಹೊರಟಿರುವುದು ಎಷ್ಟು ಸರಿ? ಸ್ಟೋರೇಜ್ ಯೋಜನೆ ವಿರೋಧಿಸಿ ಹಮ್ಮಿಕೊಳ್ಳುವ ಎಲ್ಲ ಪ್ರತಿಭಟನೆಗೆ ಪರಿಸರಕ್ಕಾಗಿ ನಾವು ಸಂಘಟನೆ ಸಂಪೂರ್ಣ ಬೆಂಬಲ ನೀಡುತ್ತದೆ ಎಂದರು.
ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ, ಪ್ರಮುಖರಾದ ತೀ.ನ.ಶ್ರೀನಿವಾಸ್, ವೀರಪ್ಪ ಹರಕೇರಿ, ಆರ್.ಜಿ.ತಿಮ್ಮಾಪುರ, ಡಾ. ರಾಜಶೇಖರ ಧಾರವಾಡ, ವಿಠ್ಠಲ ರಾವ್, ಮಾಧುರಿ ಅಶೋಕ್ ಧಾರವಾಡ, ಎ.ಎಸ್.ಕವಿತಾ, ಅಶ್ವಿನಿ ಚಿಪ್ಪಳಿ, ಪ್ರಕಾಶ್ ಶಿವಮೊಗ್ಗ, ಅಶೋಕಕುಮಾರ್, ಪರಶುರಾಮೇಗೌಡ, ಡಾ. ಬಸವರಾಜ್ ರಾಣಿಬೆನ್ನೂರು, ಬಾಪೇಗೌಡ, ನಾಡೇಗೌಡ ಕೋಲಾರ, ಪರಶುರಾಮ ಶಿವಮೊಗ್ಗ ಇತರರಿದ್ದರು.