

ಮುಂಬೈ: ಇತ್ತೀಚೆಗಷ್ಟೇ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಮಹಾರಾಷ್ಟ್ರದ ಟ್ರೈನಿ ಐಎಎಸ್ ಅಧಿಕಾರಿಯಾಗಿರುವ ಪೂಜಾ ಖೇಡ್ಕರ್, ಒಬ್ಬ ಅಧಿಕಾರಿಗೆ ಸರ್ಕಾರ ಕೊಡುವ ಸವಲತ್ತುಗಳನ್ನು ಮೀರಿ ತನಗೆ ಹೇಗೆ ಬೇಕೋ ಹಾಗೆ ಅಧಿಕಾರ ದುರ್ಬಳಕೆ ಮಾಡಿಕೊಂಡ ರೀತಿಗೆ ರಾಜ್ಯ ಸರ್ಕಾರ ಛೀಮಾರಿ ಹಾಕಿತ್ತು. ಪುಣೆಯಲ್ಲಿ ಟ್ರೈನಿ ಕಲೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಪೂಜಾ ಅಧಿಕಾರ ದುರ್ಬಳಕೆ ಅತಿಯಾದ ಹಿನ್ನೆಲೆ ಸರ್ಕಾರವೇ ಕ್ರಮ ಕೈಗೊಂಡಿದ್ದು, ವಾಶಿಮ್‌ನಲ್ಲಿ ಸೂಪರ್‌ನ್ಯೂಮರರಿ ಸಹಾಯಕ ಕಲೆಕ್ಟರ್ ಆಗಿ ಕೆಲಸ ಮಾಡಲು ನಿರ್ದೇಶಿಸಿತು.
ಇನ್ನು ಮೊನ್ನೆಯಷ್ಟೇ ಆಕೆಯ ಕಾರನ್ನು ಜಪ್ತಿ ಮಾಡಿರುವ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಒಳಪಡಿಸಿದ್ದಾರೆ. ಪೂಜಾರನ್ನು ವಶಕ್ಕೆ ಪಡೆದಿರುವ ಪೊಲೀಸರು ಈ ವಿಚಾರದಲ್ಲಿ ಆಕೆಯ ಪೋಷಕರು ಪಾತ್ರ ಹೆಚ್ಚಿದ್ದು, ಅವರ ತಾಯಿ ಮನೋರಮ ಖೇಡ್ಕರ್ ಭೂಮಿ ವಿಷಯಕ್ಕೆ ರೈತರೊಂದಿಗೆ ಜಟಾಪಟಿ ನಡೆಸಿದ್ದಲ್ಲದೇ ಗನ್ ಹಿಡಿದು ಬೆದರಿಸಿದ್ದರು. ಈ ದೃಶ್ಯಗಳು ಕೂಡ ಪೊಲೀಸರ ಬಳಿ ಸಾಕ್ಷಿಯಾಗಿದೆ. ಇದೆಲ್ಲದರ ಬೆನ್ನಲ್ಲೇ ಪೂಜಾ ಪೋಷಕರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸುತ್ತಿದ್ದಂತೆ ಇಬ್ಬರು ಮನೆಯಿಂದ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
"ಎಫ್ಐಆರ್ ದಾಖಲಿಸುತ್ತಿದ್ದಂತೆ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ. ಸ್ಥಳದಿಂದ ಪರಾರಿಯಾಗಿದ್ದಾರೆ. ವಿಚಾರಣೆಗೆ ಬರುವಂತೆ ನಾವು ಹಲವು ಬಾರಿ ಅವರ ದೂರವಾಣಿ ಸಂಖ್ಯೆಗೆ ಕರೆ ಮಾಡಿದ್ದೆವು. ಆದ್ರೆ, ಫೋನ್ ಸ್ವಿಚ್ಆಫ್ ಆದ ಕಾರಣ, ನಮ್ಮ ಪ್ರಯತ್ನ ವಿಫಲವಾಗಿದೆ. ನಮ್ಮ ಅಧಿಕಾರಿಗಳು ಅವರ ಮನೆಯ ಬಳಿ ಹೋಗಿದ್ದಾರೆ. ಅಲ್ಲಿಯೂ ಕೂಡ ಅವರಿಲ್ಲ" ಎಂದು ಪುಣೆ ಗ್ರಾಮಾಂತರ ಎಸ್ಪಿ ಪಂಕಜ್ ದೇಶ್ಮುಖ್ ಹೇಳಿದ್ದಾರೆ.
"ಸ್ಥಳೀಯ ಅಪರಾಧ ವಿಭಾಗ ಮತ್ತು ಸ್ಥಳೀಯ ಪೊಲೀಸ್ ಠಾಣೆಗಳ ಅಧಿಕಾರಿಗಳು ಸೇರಿದಂತೆ ಹಲವಾರು ತಂಡಗಳು ಪುಣೆ ಮತ್ತು ಹತ್ತಿರದ ಸ್ಥಳಗಳಲ್ಲಿ ಕೆಲವು ತೋಟದ ಮನೆಗಳು ಮತ್ತು ನಿವಾಸಗಳಲ್ಲಿ ಅವರನ್ನು ಹುಡುಕುತ್ತಿವೆ. ಸಿಕ್ಕ ಕೂಡಲೇ ಪ್ರಶ್ನಿಸಿ ಕ್ರಮ ಕೈಗೊಳ್ಳುತ್ತೇವೆ" ಎಂದು ಅಧಿಕಾರಿ ತಿಳಿಸಿದ್ದಾರೆ. ಪೂಜಾ ತಾಯಿ ಮನೋರಮಾ ಖೇಡ್ಕರ್ ಬೆದರಿಕೆ ಹಾಕಿದ್ದಾರೆ ಎಂದು ಸ್ಥಳೀಯ ರೈತ ನೀಡಿದ ದೂರಿನ ಆಧಾರದ ಮೇಲೆ ಮನೋರಮಾ ಮತ್ತು ದಿಲೀಪ್ ಖೇಡ್ಕರ್ ಸೇರಿದಂತೆ ಏಳು ಮಂದಿಯ ವಿರುದ್ಧ ಇದೀಗ ಪ್ರಕರಣ ದಾಖಲಿಸಲಾಗಿದೆ,(ಏಜೆನ್ಸೀಸ್).