

| ದೇವರಾಜ್ ಕನಕಪುರ ಬೆಂಗಳೂರು
ಕರೊನಾ ಕಾರಣಕ್ಕೆ ಕಳೆದ ವರ್ಷ ಪರೀಕ್ಷೆ ಇಲ್ಲದೆಯೇ ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಲಾಗಿತ್ತು. ಈ ವರ್ಷ ಪರೀಕ್ಷೆ ನಡೆಸುತ್ತಿದ್ದರೂ ಉತ್ತೀರ್ಣರಾಗುವುದು ಅಷ್ಟೇನು ಕಷ್ಟವಲ್ಲ. ಏಕೆಂದರೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸುಲಭ ಮಾದರಿಯಲ್ಲಿ ಪೂರ್ವಶಿಕ್ಷಣ ಇಲಾಖೆ ಪ್ರಶ್ನೆಗಳನ್ನು ರೂಪಿಸುತ್ತಿದೆ.
ಕೋವಿಡ್ನಿಂದಾಗಿ ಈ ಬಾರಿ ಕಡಿಮೆ ಶೈಕ್ಷಣಿಕ ದಿನಗಳು ಲಭ್ಯವಾದ ಹಿನ್ನೆಲೆಯಲ್ಲಿ ಹಾಗೂ ಕಳೆದ ವರ್ಷ ಪಿಯು ಪರೀಕ್ಷೆ ಇಲ್ಲದೆಯೇ ಪಾಸ್ ಮಾಡಿರುವ ಹಿನ್ನೆಲೆಯಲ್ಲಿ ಈ ಬಾರಿ ಸುಲಭ ವಿಧಾನದಲ್ಲಿ ಪಾಸ್ ಆಗುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಕಳೆದ ವರ್ಷಕ್ಕಿಂತ ಈ ಬಾರಿ ವಿದ್ಯಾರ್ಥಿಗಳಿಗೆ ಒಂದು ಅಂಕದ ಪ್ರಶ್ನೆಗಳನ್ನು ಉತ್ತರಿಸಲು ಹೆಚ್ಚಿನ ಆಯ್ಕೆಗಳನ್ನು ನೀಡಲಾಗುತ್ತಿದೆ.
ಇತ್ತೀಚಿಗೆ ಮುಕ್ತಾಯವಾದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲೂ ಇದೇ ಮಾದರಿಯನ್ನು ಅಳವಡಿಸಿ ಕೊಳ್ಳಲಾಗಿತ್ತು. 2021ರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 6 ವಿಷಯಗಳ ಪತ್ರಿಕೆಯನ್ನು ಎರಡು ಪತ್ರಿಕೆಗಳಿಗೆ ಸೀಮಿತ ಮಾಡಿ ಬಹು ಆಯ್ಕೆ ಮಾದರಿಯ ಪ್ರಶ್ನೆ ಪತ್ರಿಕೆ ರೂಪಿಸಿ ಕೇವಲ ಎರಡು ದಿನದಲ್ಲೇ ಪರೀಕ್ಷೆ ಮುಗಿಸಲಾಗಿತ್ತು. ಅದೇ ಮಾದರಿಯಲ್ಲಿ ಈ ವರ್ಷವೂ ನಡೆಸುವಂತೆ ವಿದ್ಯಾರ್ಥಿಗಳಿಂದ ಒತ್ತಾಯ ಕೇಳಿ ಬಂದಿತ್ತಾದರೂ ಒಪ್ಪಿರಲಿಲ್ಲ. ಆದರೆ, ಪ್ರಶ್ನೆಗಳಿಗೆ ಹೆಚ್ಚಿನ ಅಂಕಗಳನ್ನು ಕೊಡಲಾಗಿತ್ತು. ಅದೇ ಮಾದರಿಯನ್ನೇ ದ್ವಿತೀಯ ಪಿಯು ಪರೀಕ್ಷೆಯಲ್ಲೂ ಜಾರಿಗೆ ತರಲು ಇಲಾಖೆ ತೀರ್ವನಿಸಿದೆ. ಏ.22ರಿಂದ ಮೇ 18ರವರೆಗೆ ಪರೀಕ್ಷೆ ನಡೆಯಲಿದೆ.
15 ಪ್ರಶ್ನೆಗಳಲ್ಲಿ 10ಕ್ಕಷ್ಟೇ ಉತ್ತರ: ಪ್ರತಿ ಪತ್ರಿಕೆಯನ್ನು ಸುಲಭ ಮಾದರಿಯಲ್ಲಿ ರೂಪಿಸಲಾಗಿದೆ. ಪ್ರತಿ ವರ್ಷ 1 ಅಂಕದ ಪ್ರಶ್ನೆಗಳು ತೀರಾ ಕಡಿಮೆ ಇರುತ್ತಿದ್ದವು. ಇವುಗಳನ್ನು ಈ ಬಾರಿ 10 ಅಂಕಗಳಿಗೆ ಹೆಚ್ಚಿಸಲಾಗಿದೆ. ಅಲ್ಲದೆ, ಮೊದಲು ಪ್ರಶ್ನೆಗಳಿಗೆ ಹೆಚ್ಚಿನ ಆಯ್ಕೆ ಸಂಖ್ಯೆಯನ್ನು ಕಡಿಮೆ ನೀಡಲಾಗುತ್ತಿತ್ತು. ಉದಾಹರಣೆಗೆ 1 ಅಂಕದ 10 ಪ್ರಶ್ನೆಗಳನ್ನು ಕೊಟ್ಟು ಎಲ್ಲದಕ್ಕೂ ಉತ್ತರಿಸುವ ವ್ಯವಸ್ಥೆ ಇತ್ತು. ಆದರೆ ಈ ಬಾರಿ 15 ಪ್ರಶ್ನೆಗಳನ್ನು ನೀಡುತ್ತಿದೆ. ಇದರಿಂದ ವಿದ್ಯಾರ್ಥಿಗಳು ಸುಲಭವಾಗಿ ಪ್ರಶ್ನೆಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಮೊದಲು ವಿಜ್ಞಾನ ವಿಷಯದಲ್ಲಿ ಒಂದು ಪ್ರಶ್ನೆ ಪತ್ರಿಕೆಯಲ್ಲಿ 105 ಪ್ರಶ್ನೆಗಳು ಇರುತ್ತಿದ್ದವು. ಈ ಬಾರಿಯಿಂದ 140 ಪ್ರಶ್ನೆಗಳಿರಲಿದೆ. ಆದರೆ, ವಿದ್ಯಾರ್ಥಿಗಳು 70 ಅಂಕಗಳಿಗೆ ಉತ್ತರಿಸಬೇಕಿದೆ.
ಕರೊನಾ ಹಿನ್ನೆಲೆಯಲ್ಲಿ ಶೈಕ್ಷಣಿಕ ಅವಧಿ ಕಡಿಮೆ ಸಿಕ್ಕಿದೆ. ಸುಲಭವಾಗಿ ಪಾಸ್ ಆಗಬೇಕೆಂಬ ದೃಷ್ಟಿಯಿಂದ ಪ್ರಶ್ನೆಗಳಿಗೆ ಹೆಚ್ಚಿನ ಆಯ್ಕೆಗಳನ್ನು ನೀಡಲಾಗಿದೆ. ಮಾದರಿ ಪ್ರಶ್ನೆ ಪತ್ರಿಕೆ ವೆಬ್ಸೈಟ್ನಲ್ಲಿ ಲಭ್ಯವಿದ್ದು, ವಿದ್ಯಾರ್ಥಿಗಳು ನೋಡಬಹುದು. | ಆರ್.ರಾಮಚಂದ್ರನ್ ಆಯುಕ್ತರು, ಪದವಿಪೂರ್ವ ಶಿಕ್ಷಣ ಇಲಾಖೆ
ಅಪ್ಲಿಕೇಷನ್ ಹಂತದ ಪ್ರಶ್ನೆಗಳು: ಸಾಮಾನ್ಯವಾಗಿ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅಪ್ಲಿಕೇಷನ್ ಮಾದರಿಯ ಪ್ರಶ್ನೆಗಳನ್ನು ಕೇಳಲಾಗುತ್ತಿತ್ತು. ಇದರಿಂದ ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಉತ್ತರಿಸುವುದು ಕಷ್ಟವಾಗುತ್ತಿತ್ತು. ಆದರೆ ಈ ಬಾರಿ ಅಪ್ಲಿಕೇಷನ್ ಮಾದರಿಯ ಪ್ರಶ್ನೆಗಳನ್ನು ಕೈ ಬಿಡಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ಸುಲಭವಾಗಿ ಪ್ರಶ್ನೆಗಳಿಗೆ ಉತ್ತರಿಸಬಹುದಾಗಿದೆ.