

ನವದೆಹಲಿ: ಜಗತ್ತಿನಲ್ಲಿ ಈಗಾಗಲೇ ಕರೊನಾ ನಾಲ್ಕನೇ ಅಲೆ ಶುರುವಾಗಿದ್ದರೆ, ನಮ್ಮಲ್ಲಿ ಜನರು ಕೋವಿಡ್ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂಬ ಆತಂಕ ವ್ಯಕ್ತಪಡಿಸಿರುವ ಸರ್ಕಾರ, ಎಲ್ಲರೂ ಸೂಕ್ತ ಮುನ್ನೆಚ್ಚರಿಕೆ ಪಾಲಿಸಬೇಕು ಎಂಬುದಾಗಿ ಕಿವಿಮಾತನ್ನು ಹೇಳಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಹಾಗೂ ಐಸಿಎಂಆರ್ ಡೈರೆಕ್ಟರ್-ಜನರಲ್ ಡಾ.ಬಲರಾಂ ಭಾರ್ಗವ್ ಅವರು ಇಂದು ಜಂಟಿಯಾಗಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ಎಚ್ಚರಿಕೆ ನೀಡಿದ್ದಾರೆ.
ಜಗತ್ತು ಈಗಾಗಲೇ ಕರೊನಾ ನಾಲ್ಕನೇ ಅಲೆಗೆ ಸಾಕ್ಷಿಯಾಗಿದೆ. ಮಾತ್ರವಲ್ಲ ವಿಶ್ವದ ಒಟ್ಟಾರೆ ಪಾಸಿಟಿವಿಟಿ ಪ್ರಮಾಣ ಶೇ. 6.1ಕ್ಕೆ ತಲುಪಿದೆ. ಈ ಮಧ್ಯೆ ದೇಶದಲ್ಲಿ 358 ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ ಯಾರೂ ನಿರ್ಲಕ್ಷ್ಯ ವಹಿಸುವಂತಿಲ್ಲ. ಎಲ್ಲರೂ ತಪ್ಪದೆ ಕರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದ್ದಾರೆ.
ನ. 26ರ ಬಳಿಕ ಯುರೋಪ್, ಉತ್ತರ ಅಮೆರಿಕ, ಮತ್ತು ಆಫ್ರಿಕಗಳಲ್ಲಿ ಸೋಂಕಿನ ಪ್ರಮಾಣ ವಾರದಿಂದ ವಾರಕ್ಕೆ ಹೆಚ್ಚಾಗುತ್ತಿದೆ. ಭಾರತದಲ್ಲಿ ದೈನಂದಿನ ಪ್ರಕರಣಗಳ ಸಂಖ್ಯೆ ಕಳೆದ ನಾಲ್ಕು ವಾರಗಳಲ್ಲಿ 10 ಸಾವಿರಕ್ಕಿಂತ ಕಡಿಮೆ ಇದ್ದರೂ ನಿರ್ಲಕ್ಷಿಸುವಂತಿಲ್ಲ ಎಂದು ಹೇಳಿದ್ದಾರೆ.
ಇದರ ಬೆನ್ನಿಗೇ ಗುಜರಾತಿನ 8 ನಗರಗಳಲ್ಲಿ ನಾಳೆಯಿಂದ ನೈಟ್ ಕರ್ಫ್ಯೂ ವಿಧಿಸಲಾಗುತ್ತಿದ್ದರೆ, ಹರ್ಯಾಣದಲ್ಲಿ ಕೋವಿಡ್ ಲಸಿಕೆ ತೆಗೆದುಕೊಂಡಿರದಿದ್ದರೆ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ನಿರ್ಬಂಧಿಸಲಾಗುತ್ತಿದೆ. ಅತ್ತ ಮಹಾರಾಷ್ಟ್ರದಲ್ಲೂ ನಿಯಮಗಳನ್ನು ಬಿಗಿಗೊಳಿಸಲಾಗಿದ್ದು, ರಾತ್ರಿ 9ರಿಂದ ಬೆಳಗ್ಗೆ 6ರ ವರೆಗೆ ಐದಕ್ಕಿಂತ ಹೆಚ್ಚು ಜನ ಗುಂಪು ಸೇರದಂತೆ ನಿರ್ಬಂಧ ವಿಧಿಸಲಾಗಿದೆ.