ಹಿಜಾಬ್​ ವಿವಾದ; ಕುತೂಹಲ ಕೆರಳಿಸಿದೆ ದ್ವಿತೀಯ ಪಿಯು ಪ್ರಾಯೋಗಿಕ ಪರೀಕ್ಷೆ!

Hijab Row
Published on

ಬೆಂಗಳೂರು: ರಾಜ್ಯದಲ್ಲಿ ಫೆ.17ರಿಂದ ದ್ವಿತೀಯ ಪಿಯು ಪ್ರಾಯೋಗಿಕ ಪರೀಕ್ಷೆಗಳು ಆರಂಭವಾಗಿವೆ. ಹಿಜಾಬ್ ಗಲಾಟೆ ನಡುವೆಯೇ ಪರೀಕ್ಷೆಗಳು ಆರಂಭವಾಗಿದ್ದು, ವಿದ್ಯಾರ್ಥಿಗಳ ಹಾಜರಾತಿ ಬಹಳ ಮುಖ್ಯವಾಗಿದೆ. ಆದರೆ, ಕಡ್ಡಾಯವಲ್ಲ. ಅದಾಗ್ಯೂ ಹಿಜಾಬ್ ವಿವಾದಿಂದಾಗಿ ಈ ಪರೀಕ್ಷೆಗಳು ಕುತೂಹಲ ಕೆರಳಿಸಿವೆ.

ಪ್ರಾಯೋಗಿಕ ಪರೀಕ್ಷೆಗಳು ಜಿಲ್ಲಾ ಹಂತದಲ್ಲಿ ನಡೆಯಲಿದ್ದು, ಫೆ.17ರಿಂದ ಮಾ.15ರೊಳಗೆ ಮುಕ್ತಾಯವಾಗುವ ರೀತಿಯಲ್ಲಿ ವೇಳಾಪಟ್ಟಿ ರಚಿಸಿಕೊಂಡು ಪರೀಕ್ಷೆ ನಡೆಸಲು ಇಲಾಖೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ 34 ಶೈಕ್ಷಣಿಕ ಜಿಲ್ಲೆಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ವೇಳಾಪಟ್ಟಿ ರಚಿಸಿಕೊಂಡು ಪರೀಕ್ಷೆ ನಡೆಸುತ್ತಿವೆ.

ಹಿಜಾಬ್ ಗಲಾಟೆ ಜೋರಾಗಿರುವುದರಿಂದ ಬಹುತೇಕ ವಿದ್ಯಾರ್ಥಿಗಳು ಹಿಜಾಬ್ ಇಲ್ಲದೆ ತರಗತಿಗೆ ಪ್ರವೇಶ ಪಡೆಯುವುದಿಲ್ಲವೆಂದು ಈಗಾಗಲೆ ಬಹುತೇಕ ಕಡೆ ಗೈರು ಹಾಜರಾಗಿದ್ದಾರೆ. ಪ್ರಾಯೋಗಿಕ ಪರೀಕ್ಷೆ ನಡೆಯುವ ವೇಳೆ ವಿದ್ಯಾರ್ಥಿಗಳು ಇದೇ ರೀತಿ ಹಠ ಸಾಧಿಸಿ ಪರೀಕ್ಷೆ ಗೈರು ಹಾಜರಾಗುತ್ತಾರೆಯೇ? ಇಲ್ಲ ಹಿಜಾಬ್ ತೆಗೆದು ಹಾಜರಾಗುತ್ತಾರೆಯೇ? ಎಂಬ ಕುತೂಹಲ ಕೆರಳಿಸಿದೆ.

‘ದ್ವಿತೀಯ ಪಿಯು ಪರೀಕ್ಷೆ ಏ.16ರಿಂದ ಮೇ 6ವರೆಗೆ ನಡೆಯಲಿದೆ. ಇದಕ್ಕೆ ಪೂರಕವಾಗಿ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಕಡ್ಡಾಯವಾಗಿ ಪ್ರಾಯೋಗಿಕ ಪರೀಕ್ಷೆಗಳಿಗೆ ಹಾಜರಾಗಬೇಕೆಂದಿಲ್ಲ. ಒಂದು ವೇಳೆ ಗೈರು ಹಾಜರಾದಲ್ಲಿ, ಆ ವಿದ್ಯಾರ್ಥಿಗಳಿಗೆ ಮತ್ತೆ ಪ್ರಾಯೋಗಿಕ ಪರೀಕ್ಷೆ ಬರೆಯಲು ಅವಕಾಶ ನೀಡುವುದಿಲ್ಲ. ಈ ಪರೀಕ್ಷೆಯು 30 ಅಂಕಗಳಿಗೆ ನಡೆಯಲಿದೆ.

ಆದರೆ, ಗೈರು ಹಾಜರಾದರೂಮುಖ್ಯ ಪರೀಕ್ಷೆ ಬರೆಯಲು ಅವಕಾಶದಿಂದ ವಂಚಿತರಾಗುವುದಿಲ್ಲ. ಆದರೆ, ಅಲ್ಲಿ 70 ಅಂಕಗಳಿಗೆ ಪಾಸ್ ಆಗಲು ನಿಗದಿ ಪಡಿಸಿರುವ ಕನಿಷ್ಠ ಅಂಕಗಳಿಗಿಂತ ಕಡಿಮೆ ಪಡೆದರೂ, ಪ್ರಾಯೋಗಿಕ ಅಂಕಗಳನ್ನು ಸೇರಿಸಿ ಪಾಸ್ ಮಾಡಲಾಗುತ್ತಿತ್ತು. ಗೈರು ಹಾಜರಾದಲ್ಲಿ ಈ ಪ್ರಮೇಯ ಇರುವುದಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ. ಭೌತಶಾಸ್ತ್ರ, ಜೀವಶಾಸ್ತ್ರ, ರಸಾಯನಶಾಸ್ತ್ರ ಎಂಬ 10ಕ್ಕೂ ಹೆಚ್ಚಿನ ವಿಷಯಗಳಲ್ಲಿ ಪ್ರಾಯೋಗಿಕ ಪರೀಕ್ಷೆಗಳು ನಡೆಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net