

ದಾವಣಗೆರೆ: ಯುವತಿ ಚಾಂದ್ ಸುಲ್ತಾನಾಳನ್ನು ಅಮಾನುಷವಾಗಿ ಹತ್ಯೆ ಮಾಡಿದ್ದ ಆರೋಪಿ, ಚಾಂದ್ ಪೀರ್ ಅಲಿಯಾಸ್ ಸಾದತ್ ಸಾವನ್ನಪ್ಪಿದ್ದಾನೆ.
ಕೊಲೆಯಾಗಿದ್ದ ಯುವತಿ ಚಾಂದ್ ಸುಲ್ತಾನಾಳಿಗೆ ಮುಂದಿನ ತಿಂಗಳು ತನ್ನ ಸಹೋದ್ಯೋಗಿಯೊಂದಿಗೆ ಮದುವೆ ನಿಶ್ಚಯವಾಗಿತ್ತು. ಮದುವೆ ಸಿದ್ಧತೆಯಲ್ಲಿದ್ದ ಯುವತಿಯನ್ನು ಸಾದತ್ ಕೊಲೆ ಮಾಡಿದ್ದ. ಚಾಂದ್ ಸುಲ್ತಾನಾಳನ್ನು ಮಾತನಾಡಿಸುವ ನೆಪದಲ್ಲಿ ಕುತ್ತಿಗೆಯನ್ನು ಚಾಕುವಿನಿಂದ ಕೊಯ್ದು ಕ್ರೂರವಾಗಿ ಹತ್ಯೆ ಮಾಡಿದ್ದಾನೆ. ಈ ಘಟನೆ ದಾವಣಗೆರೆಯ ಬಿ.ಜೆ ಬಡಾವಣೆಯ ಐತಿಹಾಸಿಕ ಚರ್ಚ್ ಮುಂಭಾಗ ನಡೆದಿತ್ತು.
ಚಾಂದ್ ಸುಲ್ತಾನಾಳನ್ನು ಕೊಲೆ ಮಾಡಿದ ನಂತರ ಆರೋಪಿ ಸಾದತ್ ವಿಷ ಸೇವಿಸಿ ಅತ್ಮಹತ್ಯೆಗೆ ಯತ್ನಿಸಿದ್ದ. ತಕ್ಷಣ ಆರೋಪಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಇಂದು(ಡಿ.23) ಬೆಳಗ್ಗೆ ಆರೋಪಿ ಸಾದತ್ ಮೃತಪಟ್ಟಿದ್ದಾನೆ.
ಕಳೆದ ಐದು ವರ್ಷಗಳ ಸಾದತ್ನೊಂದಿಗೆ ಚಾಂದ್ ಸುಲ್ತಾನಾಳ ಮದುವೆ ಮಾಡಲು ಮೃತ ಯುವತಿ ಮನೆಯವರು ನಿರ್ಧಾರ ಮಾಡಿದ್ದರು. ಅದರಂತೆ ಕೆಲ ಸಮಾಜದ ಮುಖಂಡರ ಸೇರಿ ಸಾದತ್ ಮನೆಗೆ ಹೋಗಿ ಆತನ ಕುಟುಂಬದ ಸದಸ್ಯರ ಬಳಿ ಮದುವೆ ಪ್ರಸ್ತಾಪಿಸಿದ್ದರು. ಈ ವೇಳೆ ಸಾದತ್ ಮತ್ತು ಆತನ ಮನೆಯವರು ಈ ಮದುವೆಗೆ ಸಮ್ಮತಿ ನೀಡಿರಲಿಲ್ಲ. ಕೊನೆಗೆ ನಮ್ಮ ಮಗಳನ್ನು ಬೇರೆ ಕಡೆ ಮದುವೆ ಮಾಡಿ ಕೊಡುತ್ತೇವೆ ಎಂದು ಮೃತ ಯುವತಿ ಮನೆಯವರು ಹೇಳಿದ್ದರು. ಇದಕ್ಕೆ ಸಾದತ್ ಮತ್ತು ಆತನ ಮನೆಯವರು ಒಪ್ಪಿಗೆ ಸೂಚಿಸಿದ್ದರು. ಕೊನೆಗೆ ಮೃತೆ ಚಾಂದ್ ಸುಲ್ತಾನಾಳ ಮದುವೆಯನ್ನು ಆಕೆಯ ಸಹೋದ್ಯೋಗಿ ಜೊತೆ ನಿಶ್ಚಯಿಸಿದ್ದಾರೆ.
ಕಳೆದ ಕೆಲ ತಿಂಗಳುಗಳಿಂದ ಆರೋಪಿ ಸಾದತ್ ನೀನು ನನ್ನನ್ನೇ ಮದುವೆಯಾಗಬೇಕು ಅಂತ ಮೃತ ಯುವತಿ ಹಿಂದೆ ಬಿದ್ದಿದ್ದ. ಈ ಬಗ್ಗೆ ಚಾಂದ್ ಸುಲ್ತಾನ ಅಷ್ಟಾಗಿ ತಲೆ ಕೆಡಿಸಿಕೊಳ್ಳದೆ ಮುಂದಿನ ತಿಂಗಳು ನಡೆಯಬೇಕಿದ್ದ ತನ್ನ ಮದುವೆಯತ್ತ ಗಮನಹರಿಸಿದ್ದಳು. ಆದರೆ ನಿನ್ನೆ (ಡಿ.22) ಏಕಾಏಕಿ ಚಾಂದ್ ಸುಲ್ತಾನಾಳನ್ನು ಕತ್ತು ಸೀಳಿ, ಸಾದತ್ ಕೊಲೆ ಮಾಡಿದ್ದ.