ಎಸೈ ಆತುರ ಎಡವಟ್ಟು!; ಅಕ್ರಮ ಜಾಲ ಬಯಲಿಗೆಳೆಯುವ ಆಡಿಯೋದಿಂದ ಗೊಂದಲ

PSI
Published on

ಬೆಂಗಳೂರು: ವಾಣಿಜ್ಯ ತೆರಿಗೆ ಪರಿವೀಕ್ಷಕರ 230 ಹುದ್ದೆಗಳು ಹಾಗೂ 545 ಪಿಎಸ್​ಐ ಹುದ್ದೆಗಳ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಕುರಿತ ಗೊಂದಲಕ್ಕೆ ತೆರೆಬಿದ್ದಿದೆ. ಅಕ್ರಮ ಜಾಲ ಬಯಲಿಗೆಳೆಯುವ ಉದ್ದೇಶದಿಂದ ಗುಪ್ತದಳದ ಸಬ್ ಇನ್​ಸ್ಪೆಕ್ಟರ್ ನಡೆಸಿದ ಸಂಭಾಷಣೆ ವೈರಲ್ ಆಗಿದ್ದರಿಂದ ಪ್ರಶ್ನೆಪತ್ರಿಕೆ ಸೋರಿಕೆ ವದಂತಿ ಸೃಷ್ಟಿಯಾಗಿತ್ತೆಂಬ ಸಂಗತಿ ಸಿಸಿಬಿ ಪೊಲೀಸರ ತನಿಖೆಯಿಂದ ದೃಢಪಟ್ಟಿದೆ.

ವೈರಲ್ ಆಗಿದ್ದ ಆಡಿಯೋ ಆಧಾರದ ಮೇಲೆ ಸಬ್ ಇನ್​ಸ್ಪೆಕ್ಟರ್ ಎಚ್.ವಿ. ಲಿಂಗಯ್ಯ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಅವರ ಮೊಬೈಲ್ ಕರೆಗಳನ್ನು ಪರಿಶೀಲಿಸಲಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆಯಾಗಿಲ್ಲ. ಜತೆ ಸಬ್ ಇನ್​ಸ್ಪೆಕ್ಟರ್ ಬಗ್ಗೆಯೂ ಯಾವುದೇ ಅನುಮಾನ ವ್ಯಕ್ತವಾಗಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ವಿಜಯವಾಣಿಗೆ ಸ್ಪಷ್ಟಪಡಿಸಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆ ಪರಿವೀಕ್ಷಕರ ನೇಮಕಾತಿಗೆ ಭಾನುವಾರ ಮತ್ತು ಎಸ್​ಐ ಹುದ್ದೆಗಳ ನೇಮಕ ಮಂಗಳ ವಾರ ಲಿಖಿತ ಪರೀಕ್ಷೆ ನಿಗದಿಯಾಗಿದೆ. ಇದರ ನಡುವೆ ಲಿಂಗಯ್ಯ ಆಡಿಯೋ ವೈರಲ್ ಆಗಿತ್ತು. ಅದರಲ್ಲಿ ಎರಡು ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರ ಚರ್ಚೆಯಾಗಿತ್ತು. ಹೀಗಾಗಿ ಕೆಲ ಅಭ್ಯರ್ಥಿಗಳು, ಚಂದ್ರಾ ಲೇಔಟ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.

ಪ್ರಶ್ನೆಪತ್ರಿಕೆ ಸೋರಿಕೆಯಾಗದಂತೆ ನೋಡಿಕೊಳ್ಳಲು ನಿಗಾ ವಹಿಸಲಾಗಿದೆ. ಹೀಗಿದ್ದರೂ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ಕಲೆ ಹಾಕುವ ಉದ್ದೇಶದಿಂದ ಕೆಲವರ ಜತೆ ನಡೆಸಿರುವ ಸಂಭಾಷಣೆ ನಡೆಸಲಾಗಿತ್ತು. ಈ ಮೂಲಕ ಅಕ್ರಮ ಜಾಲ ಬಯಲಿಗೆ ಎಳೆಯುವ ಉದ್ದೇಶ ಹೊಂದಲಾಗಿತ್ತು ಎಂದು ಪಿಎಸ್​ಐ ಲಿಂಗಯ್ಯ ಹೇಳಿಕೆ ನೀಡಿದ್ದರು ಎಂದು ದಯಾನಂದ್ ತಿಳಿಸಿದ್ದಾರೆ.

ಇಂದು ಸ್ಪರ್ಧಾತ್ಮಕ ಪರೀಕ್ಷೆ: ವಾಣಿಜ್ಯ ತೆರಿಗೆ ಪರಿವೀಕ್ಷಕರ ಹುದ್ದೆಗೆ ಶನಿವಾರ ಕನ್ನಡ ಭಾಷಾ ಪತ್ರಿಕೆ ಪರೀಕ್ಷೆ ನಡೆದಿದೆ. ಭಾನುವಾರ ಸ್ಪರ್ಧಾತ್ಮಕ ವಿಷಯಗಳ ಪರೀಕ್ಷೆ ನಡೆಯಲಿದೆ. ಬೆಂಗಳೂರು, ಬೆಳಗಾವಿ, ಬಳ್ಳಾರಿ, ಯಾದಗಿರಿ, ಕೊಪ್ಪಳ, ಹಾವೇರಿ, ಮಂಡ್ಯ ಸೇರಿದಂತೆ 29 ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದೆ. ಸುರಕ್ಷಿತವಾಗಿ ಮತ್ತು ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕೆಪಿಎಸ್​ಸಿ ಕಾರ್ಯದರ್ಶಿ ಭರವಸೆ ನೀಡಿದ್ದಾರೆ.

ಪರೀಕ್ಷೆಗೆ ಕಟ್ಟೆಚ್ಚರ: ಮಂಗಳವಾರ ನಿಗದಿಯಾಗಿರುವ ಎಸ್​ಐ ನೇಮಕಾತಿಯ ಮರುಪರೀಕ್ಷೆ ಯನ್ನು ಲೋಪಗಳಿಲ್ಲದಂತೆ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕಠಿಣ ಕ್ರಮಗಳನ್ನು ಕೈಗೊಂಡಿದೆ. ಮುಖ್ಯವಾಗಿ ಪರೀಕ್ಷಾ ಕೇಂದ್ರಗಳಿಗೆ ಬೇರೆ ಜಿಲ್ಲೆಗಳ ಸಿಬ್ಬಂದಿಯನ್ನು ನೇಮಿಸಲಾಗುತ್ತಿದೆ. ಪರೀಕ್ಷಾ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತಿದೆ. ಅಭ್ಯರ್ಥಿಗಳಿಗೆ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಲಾಗಿದೆ.

ಯಾವುದೇ ರೀತಿಯ ಅಕ್ರಮ ನಡೆದಿಲ್ಲ. ಈ ಬಗ್ಗೆ ಮಾಹಿತಿ ಸಂಗ್ರಹಿಸಲು ಕರೆ ಮಾಡಿರುವುದಾಗಿ ಪಿಎಸ್​ಐ ಹೇಳಿಕೆ ನೀಡಿದ್ದಾನೆ. ಸತ್ಯಾಸತ್ಯತೆಯ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಅಭ್ಯರ್ಥಿಗಳು ಆತಂಕಪಡುವ ಅಗತ್ಯ ಇಲ್ಲ.

| ಡಾ.ಜಿ. ಪರಮೇಶ್ವರ ಗೃಹ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net