

ನವದೆಹಲಿ: ಮಾರ್ಚ್ ತಿಂಗಳ ಭವಿಷ್ಯ ನಿಧಿ (ಪಿಎಫ್) ವಂತಿಗೆ ಪಾವತಿಸುವ ಅವಧಿಯನ್ನು ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಮೇ ತಿಂಗಳವರೆಗೆ ಮುಂದೂಡಿದ್ದು, ಇದರಿಂದ 6 ಲಕ್ಷ ಉದ್ಯೋಗದಾತ ಸಂಸ್ಥೆಗಳಿಗೆ ಮತ್ತು 5 ಕೋಟಿ ಉದ್ಯೋಗಸ್ಥರಿಗೆ ಸಹಾಯವಾಗಲಿದೆ.
ಈ ವಂತಿಗೆಯನ್ನು ಏಪ್ರಿಲ್ 15ರೊಳಗೆ ಪಾವತಿಸಬೇಕಾಗಿತ್ತು. ಅದಕ್ಕೀಗ ಮೇ 15ರವರೆಗೂ ಸಮಯ ಸಿಗಲಿದೆ. ಕರೊನಾ ಹಾವಳಿ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ಡೌನ್ ಘೋಷಿಸಿರುವುದರಿಂದ ಉದ್ಯೋಗಿಗಳು ಮತ್ತು ಸಂಸ್ಥೆಗಳು ಸಂಕಷ್ಟಕ್ಕೆ ಸಿಲುಕಿದ್ದು, ಅದಕ್ಕಾಗಿ ಈ ಅವಧಿ ವಿಸ್ತರಣೆಯ ಕ್ರಮ ಕೈಗೊಳ್ಳಲಾಗಿದೆ ಎಂದು ಇಪಿಎಫ್ಒ ಬುಧವಾರ ತಿಳಿಸಿದೆ.
ಮಾರ್ಚ್ ತಿಂಗಳ ವೇತನವನ್ನು ಪಾವತಿಸಿದ ಸಂಸ್ಥೆಗಳಿಗೆ ಇದು ಅನ್ವಯವಾಗುತ್ತದೆ. ಇದಲ್ಲದೇ ಮೇ 15ರೊಳಗೆ ಬಾಕಿ ವಂತಿಗೆ ಪಾವತಿಸುವ ಸಂಸ್ಥೆಗಳಿಗೆ ಬಡ್ಡಿ ಮತ್ತು ದಂಡದಿಂದಲೂ ವಿನಾಯಿತಿ ಸಿಗಲಿದೆ.