ಭಕ್ತರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಿ

038fe1bd-77a4-429e-b60b-f9c1cb193719
Published on

ಬನ್ನಿಕುಪ್ಪೆ: ದೇವರ ದರ್ಶನಕ್ಕೆ ಜಾತ್ರೆಗೆ ಬರುವ ಭಕ್ತರಿಗೆ ಕುಡಿಯುವ ನೀರು, ವಿದ್ಯುತ್, ಮೂಲಸೌಕರ್ಯ ಒದಗಿಸುವಂತೆ ಅಧಿಕಾರಿಗಳಿಗೆ ಶಾಸಕ ಜಿ.ಡಿ.ಹರೀಶ್‌ಗೌಡ ತಿಳಿಸಿದರು.


ಮಾರ್ಚ್ 26ರಿಂದ 31ರವರೆಗೆ ನಡೆಯುವ ಬನ್ನಿಕುಪ್ಪೆಯ ಶ್ರೀಬನ್ನಮ್ಮ ಹಾಗೂ ಶ್ರೀ ವೀರಭದ್ರೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಮಂಗಳವಾರ ಮಾರಿಗುಡಿ ಆವರಣದಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಕಂದಾಯ ಇಲಾಖೆ, ಆರೋಗ್ಯ ಇಲಾಖೆ, ಸೆಸ್ಕ್ ಹಾಗೂ ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಕೆಲಸ ಕಾರ್ಯಗಳನ್ನು ನಿಭಾಯಿಸುವಂತೆ ಸೂಚಿಸಿದರು.


ಮೂರು ದಿನಗಳ ಕಾಲ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡುವಂತೆ ಮನವಿ ಮಾಡಲಾಯಿತು. ತುರ್ತಾಗಿ ಬೇಕಾದ ಕೆಲವು ಕಾಮಗಾರಿಗಳನ್ನು ಪೂರ್ಣಗೊಳಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.


ತಹಸೀಲ್ದಾರ್ ಮಂಜುನಾಥ್, ಎಇಇ ಭೋಜರಾಜ್, ಸೆಸ್ಕ್ ಎಇಇ ವಿಜಯಕುಮಾರಿ, ಜೆಇ ಮಲ್ಲಿಕ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ಶಿವನಂಜಯ್ಯ, ವೈದ್ಯಾಧಿಕಾರಿ ಡಾ.ಸಿ.ಪವಿತ್ರಾ, ಕಂದಾಯ ಇಲಾಖೆಯ ವೃತ್ತ ನಿರೀಕ್ಷಕ ನಂದೀಶ್, ಗ್ರಾಮ ಲೆಕ್ಕಾಧಿಕಾರಿ ತೀರ್ಥಗಿರಿಗೌಡ, 7 ಹಳ್ಳಿಯ ಯಜಮಾನ ಕೂಸಪ್ಪ, ಬನ್ನಿಕುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಆರ್.ಗೋವಿಂದನಾಯಕ್, ಪಿಡಿಒ ರಾಘವೇಂದ್ರ ಪ್ರಸನ್ನ, ಕಾರ್ಯದರ್ಶಿ ಸಿ.ಎಸ್.ವೇದಮೂರ್ತಿ, ಪಿಎಸಿಸಿಎಸ್ ನಿರ್ದೇಶಕ ಗೋವಿಂದಗೌಡ, ಗ್ರಾಪಂ ಸದಸ್ಯರಾದ ಎಂ.ಸಿ ಚಂದ್ರಶೇಖರ್, ಬಿ.ಎಚ್.ಲೋಕೇಶ್, ಚಂದ್ರೇಗೌಡ, ಎಂ.ಎನ್.ಬಸವರಾಜು, ಪರಶುರಾಮ್, ರೇವಣ್ಣಾಚಾರಿ, ತಾಪಂ ಮಾಜಿ ಸದಸ್ಯ ಕೆಂಗಯ್ಯ, ಮುಖಂಡರಾದ ಮಹೇಶ್, ಗಣೇಶ್, ಚಿಕ್ಕಸ್ವಾಮಿ ಹಾಗೂ 7 ಹಳ್ಳಿಯ ಯಜಮಾನರು, ಸಾರ್ವಜನಿಕರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net