

ಸೊರಬ: ಅತಿವೃಷ್ಟಿಯಿಂದ ತಾಲೂಕಿನಲ್ಲಿ ಉಂಟಾದ ಮನೆ ಮತ್ತು ಬೆಳೆ ಹಾನಿಗೆ ತಕ್ಷಣ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ತಾಲೂಕು ಜೆಡಿಎಸ್ ಪದಾಧಿಕಾರಿಗಳು ತಾಲೂಕು ಆಡಳಿತಕ್ಕೆ ಸೋಮವಾರ ಮನವಿ ಸಲ್ಲಿಸಿದರು.
ಭಾರಿ ಮಳೆಯಿಂದ ವರದಾ, ದಂಡಾವತಿ, ಮಾವಿನಹೊಳೆ ನದಿಗಳು ತುಂಬಿ ಹರಿಯುತ್ತಿವೆ. ನದಿ ದಂಡೆ ಮೇಲಿರುವ ಜಮೀನುಗಳಿಗೆ ನೀರು ನುಗ್ಗಿ ಬೆಳೆಗಳು ಕೊಳೆತುಹೋಗಿವೆ. ನದಿ ಪಾತ್ರದ ಅಡಕೆ, ಬಾಳೆ, ಭತ್ತ, ಶುಂಠಿ ಹಾಗೂ ಮೆಕ್ಕೆಜೋಳದ ಬೆಳೆಗಳು ಹಾನಿಗೀಡಾಗಿವೆ. ಕೆಲವು ಗ್ರಾಮಗಳಲ್ಲಿ ಗಾಳಿ-ಮಳೆಯಿಂದಾಗಿ ಮನೆಗಳು ಬಿದ್ದಿವೆ. ವಿದ್ಯುತ್ ಕಂಬಗಳು ಮುರಿದು ಬಿದ್ದು ಸಂಪರ್ಕ ಕಡಿತಗೊಂಡಿದ್ದರೂ ಸರ್ಕಾರ ಗಮನ ಹರಿಸಿಲ್ಲ ಎಂದು ಜೆಡಿಎಸ್ ರಾಜ್ಯ ಕಾರ್ಯದರ್ಶಿ ಕೆ.ಅಜ್ಜಪ್ಪ ಕಾಸರಗುಪ್ಪೆ ದೂರಿದರು.
ಸ್ಥಳ ಪರಿಶೀಲನೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಹಾನಿಯಾಗಿರುವ ಭತ್ತದ ಬೆಳೆಗೆ ಎಕರೆಗೆ 25 ಸಾವಿರ, ಅಡಕೆ ಎಕರೆಗೆ 1 ಲಕ್ಷ, ಶುಂಠಿಗೆ ಐವತ್ತು ಸಾವಿರ, ಮೆಕ್ಕೆಜೋಳಕ್ಕೆ 25 ಸಾವಿರ ರೂ. ಪರಿಹಾರ ನೀಡಬೇಕು. ಮನೆ ಕಳೆದುಕೊಂಡವರಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ರೈತರ ಸಮಸ್ಯೆಗಳನ್ನು ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ. ನಿಯಮಾನುಸಾರ 1992ರಲ್ಲಿ ತಂದೆ ಹೆಸರಿಗೆ ನಿವೇಶನ ಮುಂಜೂರಾಗಿ ಹಕ್ಕುಪತ್ರ ನೀಡಿದರು. ಓಟೂರು ಗ್ರಾಮದ ನಾಗರತ್ನಾ ಎಂಬುವರಿಗೆ ಅವರ ತಂದೆಯ ಹೆಸರಿನಲ್ಲಿದ್ದ ನಿವೇಶನವನ್ನು ಖಾತೆ ಮಾಡಿಕೊಡಲು ತಹಸೀಲ್ದಾರ್ ಮಹಿಳೆಯನ್ನು ಕಚೇರಿಗೆ ಅಲೆದಾಡಿಸುತ್ತಿದ್ದಾರೆ. ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಪಕ್ಷದಿಂದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಹುಚ್ಚಪ್ಪ ಚಿಮಣೂರು ಮಾತನಾಡಿ, ಸೊರಬ ಪಟ್ಟಣದ ಕಾನಕೇರಿಯ ಸರ್ವೇ ನಂ.133ರ ಹಕ್ಕುಪತ್ರಕ್ಕೆ ಸಂಬಂಧಿಸಿ ಚುನಾವಣಾ ಪೂರ್ವದಲ್ಲಿ ನಿವಾಸಿಗಳಿಗೆ ಭರವಸೆ ನೀಡಿ ಶಾಸಕರಾಗಿ ಹಾಗೂ ಮಂತ್ರಿಯಾದರೂ ಮಧು ಬಂಗರಪ್ಪ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ಜೆಡಿಎಸ್ ಪಕ್ಷದ ಟೌನ್ ಘಟಕದ ಅಧ್ಯಕ್ಷ ಶ್ರೀಧರ್ ಶೇಟ್, ಪುಂಡಲೀಕಪ್ಪ, ವಿಷ್ಣು ಬಿಳವಾಣಿ, ನಾಗರಾಜ್, ನೀಲಕಂಠಪ್ಪ ಇತರರಿದ್ದರು.