

ಹುಣಸೂರು: ತಾಲೂಕಿನ ಹರಾಜು ಖರೀದಿ ಕೇಂದ್ರದಲ್ಲಿ ರೈತರಿಗೆ ಸರ್ಕಾರ ನೀಡಬೇಕಿರುವ 41.80 ಕೋಟಿ ರೂ.ಹಣವನ್ನು ವಾರದೊಳಗೆ ಬಿಡುಗಡೆಗೊಳಿಸದಿದ್ದರೆ, ಜಿಲ್ಲಾಧಿಕಾರಿ ಕಚೇರಿ ಎದುರು ರೈತಸಂಘದಿಂದ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ರೈತಸಂಘ ಮತ್ತು ಹಸಿರುಸೇನೆಯ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಎಚ್ಚರಿಸಿದರು.
ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆ ಸಿಗದಿದ್ದರೂ ರೈತ ಸಂಘದ ಹೋರಾಟದ ಫಲವಾಗಿ ಕೆಲವು ಬೆಳೆಗಳಿಗೆ ಸರ್ಕಾರ ಬೆಂಬಲ ಬೆಲೆ ನಿಗದಿಗೊಳಿಸಿದೆ.
ದರೆ, ಖರೀದಿಸಿದ ಬೆಳೆಗಳಿಗೆ ನಿಗದಿತ ಸಮಯದೊಳಗೆ ಹಣ ಪಾವತಿ ಮಾಡುವತ್ತ ಸರ್ಕಾರಗಳು ಚಿತ್ತ ಹರಿಸುತ್ತಿಲ್ಲ. ಪ್ರಸ್ತುತ ಸಾಲಿನಲ್ಲಿ ತಾಲೂಕಿನ 22275 ರೈತರು ರಾಗಿ ಖರೀದಿ ಕೇಂದ್ರದಲ್ಲಿ ತಾವು ಬೆಳೆದ ರಾಗಿಯನ್ನು ಮಾರಾಟ ಮಾಡಿದ್ದು, ಒಟ್ಟು 4.78 ಲಕ್ಷ ಕ್ವಿಂಟಾಲ್ ರಾಗಿಯನ್ನು ಮಾರಾಟ ಮಾಡಿದ್ದಾರೆ. ಸರ್ಕಾರ ನಿಗದಿಪಡಿಸಿದ ದರದ ಅನ್ವಯ 184.15 ಕೋಟಿ ರೂ.ಗಳನ್ನು ಸರ್ಕಾರ ರೈತರಿಗೆ ನೀಡಬೇಕಿದೆ. ಈ ಪೈಕಿ 17102 ರೈತರಿಗೆ 142.35 ಕೋಟಿ ರೂ.ಗಳನ್ನು ಅವರ ಖಾತೆಗೆ ನೇರವಾಗಿ ಜಮಾ ಮಾಡಲಾಗಿದ್ದು, ಬಾಕಿ ಉಳಿದ 5173 ರೈತರಿಗೆ ನೀಡಬೇಕಿದ್ದ ಹಣ 41.80 ಕೋಟಿ ರೂ.ಗಳನ್ನು ಇಂದಿಗೂ ನೀಡಿಲ್ಲ. ಈ ಬಗ್ಗೆ ಸಂಘ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ತಕ್ಷಣ ಹಣ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದ್ದರೂ ಕೂಡ ಸಾಫ್ಟ್‌ವೇರ್ ಸಮಸ್ಯೆಗಳ ಕಾರಣ ಹೇಳಿಕೊಂಡು ವಿಳಂಬ ಮಾಡುತ್ತಿರುವುದು ಖಂಡನೀಯ. ವ್ಯವಸಾಯದ ಸಮಯದಲ್ಲಿ ಹಣಕಾಸಿನ ಸಮಸ್ಯೆಗಳು ಹೆಚ್ಚಾಗಿದ್ದು, ರೈತರು ಕಂಗಾಲಾಗಿದ್ದಾರೆ. ಜಿಲ್ಲಾಡಳಿತ ವಾರದೊಳಗೆ ಹರಾಜು ಖರೀದಿ ಕೇಂದ್ರಗಳ ಹಣ ಬಿಡುಗಡೆ ಮಾಡಬೇಕು ಇಲ್ಲದಿದ್ದರೆ ಆ.12ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಸಂಘದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.