

ಬೆಳಗಾವಿ: ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಲಿಂಗಾಯತರು ಮತ್ತೆ ದನಿ ಎತ್ತಿದ್ದು, ಆ ನಿಟ್ಟಿನಲ್ಲಿ ಈ ತಿಂಗಳ ಅಂತ್ಯದಲ್ಲೇ ಹೋರಾಟ ಆರಂಭವಾಗಲಿದೆ. ಬೆಳಗಾವಿಯಲ್ಲಿ ಪಂಚಮಸಾಲಿ ಲಿಂಗಾಯತ ಜಿಲ್ಲಾಮಟ್ಟದ ಕಾರ್ಯಕಾರಿಣಿ ಸಭೆಯಲ್ಲಿ ಈ ನಿರ್ಣಯ ಹೊರಬಿದ್ದಿದೆ.
ಬೆಳಗಾವಿ ಗಾಂಧಿ ಭವನದಲ್ಲಿ ಕೂಡಲಸಂಗಮದ ಪೀಠಾಧಿಪತಿ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಸುದ್ದಿಗೋಷ್ಠಿ ನಡೆಸಿ, ಈ ಕುರಿತ ಮಾಹಿತಿಯನ್ನು ನೀಡಿದರು. ಪಂಚಮಸಾಲಿ ಲಿಂಗಾಯತರಿಗೆ ಚುನಾವಣೆಪೂರ್ವದಲ್ಲಿ 2ಡಿ ಘೋಷಣೆ ಮಾಡಲಾಗಿತ್ತು. ಚುನಾವಣೆ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಹೋರಾಟಕ್ಕೆ ವಿರಾಮ ನೀಡಿದ್ದೆವು ಎಂದ ಸ್ವಾಮೀಜಿ ಮುಂದಿನ ಹೋರಾಟದ ಕುರಿತು ವಿವರಿಸಿದರು.
ಸರ್ಕಾರ ರಚನೆ ಆದ ಬಳಿಕ 2ಎ ಮೀಸಲಾತಿಗೆ ಬೇಡಿಕೆ ಇಟ್ಟಿದ್ದೆವು. ಅಲ್ಲದೆ ಮೀಸಲಾತಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದೆವು. ಅಧಿವೇಶನ ಮುಗಿಯುವವರೆಗೂ ಸಿಎಂ ಕಾಲಾವಕಾಶ ಕೇಳಿದರು. ಆದರೆ ಅಧಿವೇಶನ ಮುಗಿದು ತಿಂಗಳ ಕಳೆದರೂ ಸಿಎಂ ಸಭೆ ಕರೆದಿಲ್ಲ. ಹೀಗಾಗಿ ಹೋರಾಟವನ್ನು ಮತ್ತೆ ಶುರು ಮಾಡಿ ಎಂದು ಸಮಾಜದ ಜನರು ಕೇಳುತ್ತಿದ್ದಾರೆ ಎಂದಿದ್ದಾರೆ.
ಲೋಕಸಭಾ ಚುನಾವಣೆ ಒಳಗಾಗಿ ಎರಡೂ ಪಕ್ಷದವರನ್ನು ಸೆಳೆಯಬಹುದು. ಎರಡು ಪಕ್ಷಕ್ಕೂ ಚುನಾವಣೆ ಬಹಳ ಮುಖ್ಯವಾಗಿದ್ದು ಹೋರಾಟ ಮಾಡಿ ಗಮನ ಸೆಳೆಯೋಣ ಎಂದು ಜನರು ಒತ್ತಡ ಹಾಕುತ್ತಿದ್ದಾರೆ. ಹೀಗಾಗಿ ಆಗಸ್ಟ್ ಕೊನೆಯ ವಾರದಲ್ಲಿ ಹೋರಾಟ ಶುರು ಮಾಡುತ್ತೇವೆ. ಬೀದಿಯಲ್ಲಿ ಕುಳಿತು ಇಷ್ಟಲಿಂಗ ಪೂಜೆ ಮೂಲಕ ಹೋರಾಟ ಶುರು ಮಾಡುವುದಾಗಿ ಹೇಳಿದ ಅವರು, ಸರ್ಕಾರದ ಸ್ಪಂದನೆ ಮೇಲೆ ಹೋರಾಟದ ರೂಪುರೇಷೆ ಇರಲಿದೆ ಎಂದರು.
ಈ ಬಾರಿಯೂ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಿಂದ ಹೋರಾಟ ಆರಂಭವಾಗಲಿದೆ. ದಿನಾಂಕವನ್ನು ಶೀಘ್ರದಲ್ಲಿ ನಿರ್ಧಾರ ಮಾಡುತ್ತೇವೆ. ಎರಡು ದಿನ ತಾಲೂಕು ಕೇಂದ್ರದಲ್ಲಿ, ಮೂರನೇ ದಿನ ಜಿಲ್ಲಾ ಕೇಂದ್ರದಲ್ಲಿ ಸಭೆಯಂತೆ ಇಡೀ ರಾಜ್ಯಾದ್ಯಂತ ಸಭೆಗಳನ್ನು ಮಾಡಿ ಕೊನೆಯಲ್ಲಿ ದೊಡ್ಡಮಟ್ಟದ ಹಕ್ಕೊತ್ತಾಯ ಸಭೆ ನಡೆಸಿ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದರು.
ಶೀಘ್ರದಲ್ಲಿ ಸಿಎಂ ತಜ್ಞರ ಸಭೆಯನ್ನ ಕರೆಯಬೇಕು ಎಂದು ಒತ್ತಾಯಿಸಿದ ಸ್ವಾಮೀಜಿ, ಮೀಸಲಾತಿ ಅನುಷ್ಠಾನ ಆಗುವವರೆಗೂ ಹೋರಾಟ ನಿರಂತರ. ಕಾಂಗ್ರೆಸ್ ಸರ್ಕಾರದ ಮೇಲೆ ನಮ್ಮ ಋಣಭಾರ ಇದೆ, ಅದನ್ನು ತೀರಿಸಲಿ. ಈ ಚುನಾವಣೆಯಲ್ಲಿ ಅವರನ್ನು ನಮ್ಮ ಸಮಾಜದ ಜನ ಕೈ ಹಿಡಿದಿದ್ದಾರೆ, ನಾವು ವೋಟ್ ಹಾಕಿದ್ದೇವೆ ಎಂದರು.