

ಹನೂರು: ದೇವನಹಳ್ಳಿ ಭೂ ಹೋರಾಟಕ್ಕೆ ಜಯ ಹಾಗೂ 45ನೇ ರೈತ ಹುತಾತ್ಮರ ದಿನಾಚರಣೆಯ ಅಂಗವಾಗಿ ಸೋಮವಾರ ಹನೂರಿನಲ್ಲಿ ತಾಲೂಕು ರೈತ ಸಂಘಟನೆಯ ಪದಾಧಿಕಾರಿಗಳು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ನೆರೆದಿದ್ದ ಪ್ರತಿಭಟನಾಕಾರರು ಹುತಾತ್ಮ ರೈತರಿಗೆ ನಮನ ಸಲ್ಲಿಸಿದರು. ದೇವನಹಳ್ಳಿ ಭೂ ಹೋರಾಟದ ಜಯಕ್ಕೆ ಘೋಷಣೆಯನ್ನು ಮೊಳಗಿಸಿದರು. ಬಳಿಕ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಘೋಷಣೆಯನ್ನು ಕೂಗುತ್ತಾ ಮೆರವಣಿಗೆ ಮೂಲಕ ತಹಸೀಲ್ದಾರ್ ಕಚೇರಿಗೆ ಆಗಮಿಸಿ ಕೆ.ಎನ್ ಚೈತ್ರಾ ಅವರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಸಂಘದ ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ ಮಾತನಾಡಿ, ಚನ್ನರಾಯಪಟ್ಟಣದ 13 ಹಳ್ಳಿಗಳ 1,777 ಎಕರೆ ಭೂ ಸ್ವಾಧೀನವನ್ನು ಸರ್ಕಾರ ದಿಟ್ಟ ಕ್ರಮವಹಿಸಿ ರದ್ದುಪಡಿಸಿರುವುದು ರೈತರಿಗೆ ಸಂದ ಜಯ. ಆದ್ದರಿಂದ ಸರ್ಕಾರ ಮತ್ತಷ್ಟು ಕಾಳಜಿ ವಹಿಸಿ ಈ ಪ್ರದೇಶವನ್ನು ಗೆಜೆಟ್ ಹೊರಡಿಸಬೇಕು. ಭರವಸೆಯಂತೆ ಭೂ ಸುಧಾರಣೆ ಕಾಯ್ದೆಯನ್ನು ಮುಂದಿನ ಅಧಿವೇಶನದಲ್ಲಿ ವಾಪಸ್ ಪಡೆಯಬೇಕು. ರಾಷ್ಟ್ರೀಯ ಕೃಷಿ ಮಾರುಕಟ್ಟೆ ಪ್ರೇಮ್ ವರ್ಕ್ ನೀತಿಯನ್ನು ತಿರಸ್ಕರಿಸಬೇಕು. ವಿದ್ಯುತ್ ಖಾಸಗೀಕರಣ, ಕಾರ್ಮಿಕ ತಿದ್ದುಪಡಿ ಕೋಡ್‌ಗಳನ್ನು ಜಾರಿ ಮಾಡದಂತೆ ಕ್ರಮಕೈಗೊಳ್ಳಬೇಕು. ರೈತರಿಗೆ ಸಮರ್ಪಕ ರಸಗೊಬ್ಬರ ವಿತರಣೆಯಾಗಬೇಕು. ತಾಲೂಕಿನಲ್ಲಿ ಕಾಡು ಪ್ರಾಣಿಗಳ ಹಾವಳಿಯನ್ನು ತಡೆಗಟ್ಟುವ ಸಲುವಾಗಿ ಕಾಡಂಚಿನ ಗ್ರಾಮಗಳಲ್ಲಿ ರೈಲ್ವೆ ಬ್ಯಾರಿಕೇಡ್ ಹಾಗೂ ಸೋಲಾರ್ ಬೇಲಿ ಅಳವಡಿಸಬೇಕು. ತಾಲೂಕಿನ ಎಲ್ಲ ಕೆರೆ, ಜಲಾಶಯಕ್ಕೆ ನದಿ ಮೂಲದಿಂದ ನೀರು ತುಂಬಿಸಬೇಕು. ಬಸ್ ಘಟಕ ಸ್ಥಾಪನೆಯಾಗಬೇಕು. ಹಾಗೆಯೇ ಮಲೆಮಹದೇಶ್ವರ ವನ್ಯಜೀವಿ ಧಾಮವನ್ನು ಹುಲಿ ಸಂರಕ್ಷಿತ ಪ್ರದೇಶವಾಗಿಸಲು ನಿರ್ಧರಿಸಿರುವುದನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು.
ಸಂಘದ ಜಿಲ್ಲಾ ಕಾರ್ಯದರ್ಶಿ ಪೂಂಗುಡಿ, ತಾಲೂಕು ಅಧ್ಯಕ್ಷ ಅಮ್ಜಾದ್‌ಖಾನ್, ಮಹಿಳಾ ಘಟಕದ ಅಧ್ಯಕ್ಷೆ ರಾಜಮಣಿ, ಪದಾಧಿಕಾರಿಗಳಾದ ಲೋಕೇಶ್‌ಗೌಡ, ರವಿನಾಯ್ಡು, ಗೋವಿಂದರಾಜು, ಪಳನಿಸ್ವಾಮಿ, ಮುನಿಗೌಡ, ರಾಜೇಂದ್ರ ಹಾಗೂ ಇನ್ನಿತರರು ಇದ್ದರು.