

ತಿ.ನರಸೀಪುರ: ಪ್ರಾಥಮಿಕ ಶಾಲಾ ಶಿಕ್ಷಕರ ಸೇವಾ ಜ್ಯೇಷ್ಠತೆ ಆಧಾರದ ಮೇಲೆ ಬಡ್ತಿ ನೀಡುವಂತೆ ಒತ್ತಾಯಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಸೋಮವಾರ ತಾಲೂಕು ಕಚೇರಿ ಮುಂಭಾಗ ಸಾಂಕೇತಿಕ ಪ್ರತಿಭಟನೆ ನಡೆಸಿ, ಗ್ರೇಡ್ 2 ತಹಸೀಲ್ದಾರ್ ರಾಜಾಕಾಂತ್ ಹಾಗೂ ಬಿಇಒ ಶಿವಮೂರ್ತಿ ಅವರಿಗೆ ಮನವಿ ಸಲ್ಲಿಸಲಾಯಿತು.
ನೇಮಕಾತಿ ನಿಯಮ 2017ನ್ನು 2016 ಕ್ಕಿಂತ ಮೊದಲು ನೇಮಕವಾದವರಿಗೆ ಅನ್ವಯಗೊಳಿಸದೆ ಪ್ರಾಥಮಿಕ ಶಾಲಾ ಸೇವಾ ನಿರತ ಶಿಕ್ಷಕರಿಗಾಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿ ಗುರು ಭವನದಿಂದ ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿದರು.
ಸಂಘದ ಖಜಾಂಚಿ ಎಸ್.ನಾಗೇಶ ಮಾತನಾಡಿ, ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ 2017ರ ಹೊಸ ವೃಂದ ಬಲ ನಿಗದಿಯಿಂದ ಶಿಕ್ಷಕರಿಗೆ ಬಡ್ತಿ ನೀಡುವಾಗ ಗೊಂದಲ ಉಂಟಾಗಿದೆ. ಬಿಇಡಿ ವಿದ್ಯಾರ್ಹತೆ ಪಡೆದಿದ್ದರೂ ಶಿಕ್ಷಕರನ್ನು 6ರಿಂದ8ನೇ ತರಗತಿಗೆ ಬೋಧನೆಮಾಡಲು ಪದವೀಧರ ಶಿಕ್ಷಕರೆಂದು ಪರಿಗಣಿಸುತ್ತಿಲ್ಲ ರಾಜ್ಯ ಸರ್ಕಾರ ಇಂತಹ ಅನ್ಯಾಯವನ್ನು ಸರಿಪಡಿಸಿ, ಅರ್ಹತೆಯ ಮತ್ತು ಜ್ಯೇಷ್ಠತೆ ಆಧಾರದ ಮೇಲೆ ಬಡ್ತಿ ನೀಡುವಂತೆ ಮನವಿ ಮಾಡಿದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ವಿ.ಶಿವಶಂಕರಮೂರ್ತಿ, ಶಿಕ್ಷಕರ ಸಂಘದ ಪ್ರಭಾರ ಅಧ್ಯಕ್ಷ ಟಿ.ಎನ್.ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಕುಪ್ಯ ಪುಟ್ಟಸ್ವಾಮಿ, ಮಾಜಿ ಅಧ್ಯಕ್ಷ ಎಚ್.ಡಿ.ಮಾದಪ್ಪ, ಜಿಲ್ಲಾ ಉಪಾಧ್ಯಕ್ಷ ಸುಬ್ರಮಣ್ಯ, ನೌಕರರ ಸಂಘದ ಉಪಾಧ್ಯಕ್ಷ ಗಜೇಂದ್ರ, ಸಹ ಕಾರ್ಯದರ್ಶಿ ಸುಬ್ಬಣ್ಣ, ಚಿತ್ರವಿಶಾಲಾಕ್ಷಿ, ಸಂಘಟನಾ ಕಾರ್ಯದರ್ಶಿ ಗೌರಮ್ಮಣ್ಣಿ, ಜಿಲ್ಲಾ ಕಾರ್ಯದರ್ಶಿ ಮಲ್ಲಣ್ಣ, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಶಿವಣ್ಣ, ಕಾರ್ಯದರ್ಶಿ ಬಸವರಾಜು, ಪದವೀಧರರ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ಸಿದ್ದಲಿಂಗಮ್ಮ, ಟಿ.ಸಿ.ರಾಜೇಶ್, ಚಂದ್ರಶೇಖರ ತಗಡೂರು, ಜೆ.ರಾಜು, ನಂದಿನಿ ಇತರರು ಇದ್ದರು.