

ಕೆ.ಆರ್.ನಗರ: ಕೇಂದ್ರ ಸರ್ಕಾರ ಹೊಸದಾಗಿ ಜಾರಿ ಮಾಡಲು ಹೊರಟಿರುವ ನಿಯಮ ಲಾರಿ ಮಾಲೀಕರು ಹಾಗೂ ಚಾಲಕರಿಗೆ ಮರಣ ಶಾಸನವಾಗಿದ್ದು, ಕೂಡಲೇ ಅದನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕುಗಳ ಶ್ರೀರಾಮ ಲಾರಿ ಮಾಲೀಕರು ಹಾಗೂ ಚಾಲಕರ ಸಂಘ ಆಗ್ರಹಿಸಿ ಪ್ರತಿಭಟನೆ ನಡೆಸಿ ಗುರುವಾರ ಉಪ ತಹಸೀಲ್ದಾರ್ ಬಾಲಸುಬ್ರಮಣ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕೇಂದ್ರದ ನಿಯಮವನ್ನು ವಿರೋಧಿಸಿ ಎರಡು ತಾಲೂಕುಗಳ ಲಾರಿ ಮಾಲೀಕರು ಮತ್ತು ಚಾಲಕರ ಸಂಘದ ವತಿಯಿಂದ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿಯಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಶ್ರೀರಾಮ ಲಾರಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸುರೇಶ್ ಮಾತನಾಡಿ, ಇಂತಹ ನಿಯಮಗಳು ನಮ್ಮನ್ನು ಬೀದಿಗೆ ತಳ್ಳುತ್ತವೆ. ದಿಢೀರ್ ನಿಯಮದಿಂದ ಮಾಲೀಕರು ಮತ್ತು ಚಾಲಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದ್ದು ಕೂಡಲೇ ಕೇಂದ್ರ ಸರ್ಕಾರ ಇದನ್ನು ವಾಪಸ್ ಪಡೆಯಬೇಕು, ಇಲ್ಲವಾದರೆ ನಿರಂತರವಾಗಿ ಮುಷ್ಕರ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಾವು ಸಾರ್ವಜನಿಕ ಸೇವೆ ಮಾಡುತ್ತಿದ್ದು, ದೇಶದಲ್ಲಿ ಶೇ.70ರಷ್ಟು ವ್ಯಾಪಾರ ಮತ್ತು ವಹಿವಾಟು ನಡೆಯುತ್ತಿರುವುದು ನಮ್ಮಿಂದಲೇ. ಜತೆಗೆ ಪ್ರಸ್ತುತ ಶೇ.50ರಷ್ಟು ಚಾಲಕರ ಕೊರತೆಯನ್ನು ದೇಶ ಎದುರಿಸುತ್ತಿದ್ದು, ನಮ್ಮ ಸಂಕಷ್ಟಗಳನ್ನು ಅರಿತು ಕೇಂದ್ರ ಸರ್ಕಾರ ಕೂಡಲೇ ಮಧ್ಯ ಪ್ರವೇಶ ಮಾಡಿ ಹೊಸ ನಿಯಮವನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದರು.
ಪದಾಧಿಕಾರಿಗಳಾದ ಜಯರಾಮ, ಮಹೇಶ್, ಎಚ್.ಕೆ.ಸುರೇಶ್, ತಿಮ್ಮೇಗೌಡ, ಫಜಲ್, ಇನಾಯತ್, ರಫಿಕ್, ಸಫೀಕ್, ನಾಗರಾಜು, ಶ್ರೀಕಂಠಮೂರ್ತಿ, ಅರಸು, ಜಬೀಉಲ್ಲಾ, ರಮೇಶ್, ವಿರೂಪಾಕ್ಷ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.