ಅಂಬೇಡ್ಕರ್ ಸ್ವಾಭಿಮಾನಿ ಸೇನೆಯಿಂದ ಪ್ರತಿಭಟನೆ

HUN-DEC-21-1(AMBEDKER SWAMBHIMANI SENE PROTEST)
Published on

ಹುಣಸೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ವತಿಯಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.


ತಾಲೂಕು ಕಚೇರಿ ಆವರಣದಲ್ಲಿ ಜಮಾವಣೆಗೊಂಡ ಸೇನೆಯ ಸದಸ್ಯರು, ರಾಜ್ಯ ಸರ್ಕಾರದ ದಲಿತ ವಿರೋಧಿ ನೀತಿ ಖಂಡಿಸಿ, ಹುಣಸೂರು ಉಪ ವಿಭಾಗ ವ್ಯಾಪ್ತಿಯ ತಾಲೂಕುಗಳಲ್ಲಿ ದಲಿತ ಸಮುದಾಯ ಸಮಸ್ಯೆಗಳನ್ನು ಪರಿಹರಿಸಲು ಆಗ್ರಹಿಸಿ ಘೋಷಣೆಗಳನ್ನು ಕೂಗಿದರು.


ಸೇನೆಯ ಜಿಲ್ಲಾಧ್ಯಕ್ಷ ಕಾಂತರಾಜು ಮಾತನಾಡಿ, ರಾಜ್ಯ ಸರ್ಕಾರ ಎಸ್‌ಇಪಿ ಮತ್ತು ಟಿಎಸ್‌ಪಿ ಯೋಜನೆಯಡಿ ಮೀಸಲಾಗಿದ್ದ 11 ಸಾವಿರ ಕೋಟಿ ರೂ. ಅನುದಾನವನ್ನು ಗ್ಯಾರಂಟಿ ಯೋಜನೆಗಳ ಜಾರಿಗೆ ಬಳಸುವುದನ್ನು ಹಿಂಪಡೆಯುವ ಮೂಲಕ ಸಾಮಾಜಿಕ ನ್ಯಾಯ ನೀಡಬೇಕು. ರಾಜ್ಯ ಕಾಂಗ್ರೆಸ್ ಸರ್ಕಾರ ದಲಿತ ಪರ ನೀತಿ ಅನುಸರಿಸುತ್ತಿದೆ ಎಂದು ಹೇಳುತ್ತಲೇ ಗ್ಯಾರಂಟಿ ಯೋಜನೆಗಳ ಜಾರಿಗಾಗಿ ಶೋಷಿತ ಸಮುದಾಯಗಳಿಗೆ ಮೀಸಲಿದ್ದ ಹಣವನ್ನು ಬಳಕೆ ಮಾಡುತ್ತಿರುವುದು ದ್ರೋಹದ ಕೆಲಸವಾಗಿದೆ. ಕೂಡಲೇ 11 ಸಾವಿರ ಕೋಟಿ ರೂ.ಗಳನ್ನು ಹಿಂಪಡೆದು ಎಸ್‌ಇಪಿ, ಟಿಎಸ್‌ಪಿ ಯೋಜನೆಗಳಿಗೆ ಒದಗಿಸಬೇಕು. ಇದಲ್ಲದೇ ಗ್ಯಾರಂಟಿ ಯೋಜನೆಯ ಹೆಸರು ಹೇಳಿ ಅನುದಾನದ ಕೊರತೆಯನ್ನು ಮುಂದಿಟ್ಟ ಪರಿಣಾಮ ಗ್ರಾಮೀಣ ಭಾಗಗಳಲ್ಲಿ ಕನಿಷ್ಠ ಮೂಲಸೌಕರ್ಯದ ಅಭಿವೃದ್ದಿಗೆ ಅನುದಾನ ಇಲ್ಲದಂತಾಗಿದೆ. ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆ ಅಧ್ವಾನವಾಗಿದೆ. ಸರ್ಕಾರ ಕೂಡಲೇ ಇತ್ತ ಗಮನಹರಿಸಿ ಸಮಸ್ಯೆಗಳನ್ನು ಬಗೆಹರಿಸುವತ್ತ ಕ್ರಮ ವಹಿಸಬೇಕೆಂದು ಆಗ್ರಹಿಸಿದರು.


ಸೇನೆಯ ತಾಲೂಕು ಅಧ್ಯಕ್ಷ ದೊಡ್ಡಹೆಜ್ಜೂರು ನಾಗೇಶ್ ಮಾತನಾಡಿ, ತಾಲೂಕಿನಲ್ಲಿ 8 ಸಾವಿರಕ್ಕೂ ಅಧಿಕ ಗೃಹಿಣಿಯರಿಗೆ ಗೃಹಲಕ್ಷ್ಮಿಯೋಜನೆಯ ಅನುದಾನ ಇದುವರೆಗೂ ದೊರಕಿಲ್ಲ. ಹುಣಸೂರು ಉಪವಿಭಾಗ ವ್ಯಾಪ್ತಿಯಲ್ಲಿ 57ರಡಿ ಸಾಗುವಳಿ ಅರ್ಜಿ ವಿಚಾರದಲ್ಲಿ ಉಳುಮೆಯನ್ನೇ ಮಾಡದೆ ಅಧಿಕಾರಿಗಳಿಗೆ ಲಂಚ ನೀಡಿ ಸಾಗುವಳಿ ಪಡೆದಿರುವ ಪ್ರಕರಣಗಳು ಕಂಡುಬಂದಿದ್ದು, ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳು ಇತ್ತ ಗಮನಿಸಬೇಕು. ಹುಣಸೂರು, ಎಚ್.ಡಿ.ಕೋಟೆ ಮತ್ತು ಪಿರಿಯಾಪಟ್ಟಣ ತಾಲೂಕುಗಳಲ್ಲಿ ಶೋಷಿತ ಸಮುದಾಯದವರು ಹೆಚ್ಚಾಗಿರುವ ಗ್ರಾಮಗಳಲ್ಲಿ ಸ್ಮಶಾನದ ಅಭಿವೃದ್ಧಿ, ಗುರುತಿಸುವಿಕೆ ಆಗದೇ ತೊಂದರೆಯಾಗಿದ್ದು, ಕೂಡಲೇ ಕ್ರಮ ವಹಿಸಬೇಕೆಂದು ಆಗ್ರಹಿಸಿ ಉಪ ವಿಭಾಗಾಧಿಕಾರಿ ರುಚಿ ಬಿಂದಾಲ್ ಅವರಿಗೆ ಮನವಿ ಸಲ್ಲಿಸಲಾಯಿತು.


ಪ್ರತಿಭಟನೆಯಲ್ಲಿ ಸೇನೆಯ ಪಿರಿಯಾಪಟ್ಟಣ ತಾಲೂಕು ಅಧ್ಯಕ್ಷ ಮಂಜು ಆಯಿತನಹಳ್ಳಿ, ಎಚ್.ಡಿ.ಕೋಟೆ ತಾಲೂಕಿನ ಸದಾಶಿವ, ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಜವರಮ್ಮ, ಮುಖಂಡರಾದ ರಮಣಯ್ಯ, ವಿಷ್ಣುಕುಮಾರ್, ಮಹದೇವು, ರವಿಕುಮಾರ್, ಸಿದ್ದಪ್ಪಾಜಿ, ನಂದಮೌರ್ಯ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net