ಕರ್ನಾಟಕದ ಹಿತ ಕಾಪಾಡಿ

VidhanaSoudha
Published on

ಗಡಿವಿವಾದವನ್ನು ಕೆದಕುತ್ತಿದ್ದ ಮಹಾರಾಷ್ಟ್ರ ಈಗ ಒಂದು ಹೆಜ್ಜೆ ಮುಂದೆ ಹೋಗಿ ಕರ್ನಾಟಕ ಸರ್ಕಾರ ತಂದ ಕಾನೂನನ್ನೇ ಪ್ರಶ್ನಿಸುವ ಹಂತಕ್ಕೆ ತಲುಪಿದೆ. ಇದು ಖಂಡಿತವಾಗಿಯೂ ಉದ್ಧಟತನದ ಪರಮಾವಧಿ. ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಕುರಿತು ಬುಧವಾರ ಮುಂಬೈನಲ್ಲಿ ಮಹಾರಾಷ್ಟ್ರ ಸರ್ಕಾರದ ಗಡಿ ಉಸ್ತುವಾರಿ ಸಚಿವ ಶಂಭುರಾಜ್ ದೇಸಾಯಿ ನೇತೃತ್ವದಲ್ಲಿ ಕಾನೂನು ಪರಿಣತರು, ಎಂಇಎಸ್ ಮುಖಂಡರು, ಹೋರಾಟಗಾರರ ಸಭೆ ನಡೆದಿದ್ದು, ಕರ್ನಾಟಕ ವಿರೋಧಿ ನಿರ್ಣಯಗಳನ್ನು ತಳೆಯಲಾಗಿದೆ. ರಾಜ್ಯ ಸರ್ಕಾರವು ನಾಮಫಲಕಗಳಲ್ಲಿ ಶೇಕಡ 60 ಕನ್ನಡ ಭಾಷೆ ಬಳಕೆ ಕಡ್ಡಾಯ ಮಾಡಿದ್ದನ್ನು ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸುವುದು, ಗಡಿಭಾಗದಲ್ಲಿ ಅಪರ ಜಿಲ್ಲಾಧಿಕಾರಿ ಮಟ್ಟದ ಅಧಿಕಾರಿಗಳ ನೇಮಕ ಸೇರಿ ಹಲವು ತೀರ್ವನಗಳನ್ನು ಈ ಸಭೆಯಲ್ಲಿ ತೆಗೆದುಕೊಂಡಿದೆ. ಗಡಿಭಾಗದಲ್ಲಿನ 865 ಹಳ್ಳಿಗಳಲ್ಲಿ ಜನಾರೋಗ್ಯ ಯೋಜನೆ ವಿಸ್ತರಿಸಲು ನಿರ್ದೇಶನ ನೀಡಿದೆ. ಇದು ಕನ್ನಡಿಗರನ್ನು ಮತ್ತಷ್ಟು ಕೆರಳಿಸುವಂತೆ ಮಾಡಿದೆ. ಕರ್ನಾಟಕದಲ್ಲಿ ಹಾಕುವ ನಾಮಫಲಕಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಿದರೆ ಅದರಿಂದ ಮಹಾರಾಷ್ಟ್ರಕ್ಕೇನು ತೊಂದರೆ? ಸುಖಾಸುಮ್ಮನೆ ವಿವಾದವನ್ನು ಸೃಷ್ಟಿಸುವ ಮಹಾರಾಷ್ಟ್ರ ಸರ್ಕಾರದ ನಡೆ ಖಂಡನಾರ್ಹ.

ಅತ್ತ ಗಡಿ ಉಸ್ತುವಾರಿ ಸಚಿವರ ಮೂಲಕ ಮಹಾರಾಷ್ಟ್ರ ಕರ್ನಾಟಕದ ವಿರುದ್ಧ ಹೊಸ ಕುತಂತ್ರಗಳನ್ನು ರಚಿಸುತ್ತಿದ್ದರೆ, ಇತ್ತ ಕರ್ನಾಟಕ ಸರ್ಕಾರ ಗಡಿ ಉಸ್ತುವಾರಿಗೆ ಸಚಿವರನ್ನೇ ನೇಮಿಸದಿರುವುದು ವಿಷಾದನೀಯ. ಈ ವಿಚಾರದಲ್ಲಿ ಗಡಿಭಾಗದ ಕನ್ನಡ ಹೋರಾಟಗಾರರು ಪದೇಪದೆ ಒತ್ತಡ ತರುತ್ತಲೇ ಇದ್ದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಮಹಾರಾಷ್ಟ್ರಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಮತ್ತು ಗಡಿಭಾಗದ ಕರ್ನಾಟಕದ ಹಳ್ಳಿಗಳಲ್ಲಿ ಮಹಾರಾಷ್ಟ್ರದ ಯೋಜನೆಗಳ ಜಾರಿಗೆ ತಡೆಗೆ ರಾಜ್ಯ ಸರ್ಕಾರ ಕೂಡಲೇ ಗಡಿ ಉಸ್ತುವಾರಿ ಸಚಿವರನ್ನು ನೇಮಿಸಿ, ಕ್ರಮಕ್ಕೆ ಮುಂದಾಗಬೇಕು.

ಚುನಾವಣೆ ಸಮೀಪಿಸಿದಾಗಲೆಲ್ಲ ಮಹಾರಾಷ್ಟ್ರ ಸರ್ಕಾರ ಗಡಿ ಸಮಸ್ಯೆಗೆ ಜೀವ ತುಂಬುವ ಪ್ರಯತ್ನ ಮಾಡುತ್ತದೆ. ಮತ್ತೊಂದೆಡೆ ಕರ್ನಾಟಕ ಸರ್ಕಾರ ಗಡಿಭಾಗದ ಕನ್ನಡಿಗರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸದಿರುವುದು ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸುತ್ತಿದೆ. ಈಗಾಗಲೇ ಬೆಳಗಾವಿ ಮಹಾನಗರ ಸೇರಿ ಕರ್ನಾಟಕದ ಒಳಗಿರುವ 865 ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಹೋರಾಟ ನಡೆಸಿದೆ. ಈ ವಿವಾದ ಸುಪ್ರೀಂ ಕೋರ್ಟ್​ನಲ್ಲಿದೆ. ಮಹಾರಾಷ್ಟ್ರ ಸರ್ಕಾರ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸುತ್ತಿದ್ದರೂ ಕರ್ನಾಟಕ ಸರ್ಕಾರ ಯಾವುದೇ ದೂರು ನೀಡುತ್ತಿಲ್ಲ. ಹಾಗಾಗಿಯೇ ಮಹಾರಾಷ್ಟ್ರ ಗಡಿಭಾಗದಲ್ಲಿ ತನ್ನ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸುತ್ತಿದೆ ಎಂಬುದು ಕನ್ನಡಪರ ಹೋರಾಟಗಾರರ ಅಭಿಪ್ರಾಯ.

ಕರ್ನಾಟಕ ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಈ ಬೆಳವಣಿಗೆಗಳ ಬಗ್ಗೆ ಗಮನ ಹರಿಸಬೇಕು. ಮತ್ತು ಕನ್ನಡಿಗರ ಹಿತ ಕಾಯಲು ಮುಂದಾಗಬೇಕು. ಸರ್ಕಾರಿ ಕಚೇರಿಗಳನ್ನು ಸ್ಥಾಪಿಸುವ, ಅಧಿಕಾರಿಗಳನ್ನು ನೇಮಿಸುವ ಮೂಲಕ ಆ ಪ್ರದೇಶಗಳ ಮೇಲೆ ಹಕ್ಕು ಸಾಧಿಸುವ ಷಡ್ಯಂತ್ರ ಮಹಾರಾಷ್ಟ್ರ ಸರ್ಕಾರದ್ದು. ಕರ್ನಾಟಕ ಸರ್ಕಾರ ಈ ವಿಷಯವನ್ನು ಲಘುವಾಗಿ ಪರಿಗಣಿಸಬಾರದು. ಗಡಿ ಭಾಗದಲ್ಲಿನ ಸಮಸ್ಯೆಗಳಿಗೆ ರ್ತಾಕ ಪರಿಹಾರ ಒದಗಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net