ಜಲಾಶಯಗಳನ್ನು ಸಂರಕ್ಷಿಸಿ

ವಿಜಯವಾಣಿ
Published on

ಉತ್ತಮ ಮಳೆಯಿಂದ ಭರ್ಜರಿ ಫಸಲಿನ ನಿರೀಕ್ಷೆಯಲ್ಲಿದ್ದ ಭತ್ತದ ಕಣಜ ತುಂಗಭದ್ರಾ ತೀರದ ರೈತರ ಆಸೆ ಕಮರಿಹೋಗಿದೆ. ತುಂಗಭದ್ರಾ ಅಣೆಕಟ್ಟೆಯ 19ನೇ ಕ್ರಸ್ಟ್ ಗೇಟ್ ಸರಪಳಿಯ ಕೊಂಡಿ ತುಂಡಾಗಿ, ನದಿ ಪಾಲಾದ ಪರಿಣಾಮ ರೈತರು ಮಳೆಗಾಲದಲ್ಲೇ ಬರ ನೆನಪಿಸಿಕೊಂಡು ಚಿಂತಾಕ್ರಾಂತರಾಗಿದ್ದಾರೆ. ತುಂಗಭದ್ರಾ ಡ್ಯಾಂನಿಂದ ಕರ್ನಾಟಕದ 9.26 ಲಕ್ಷ ಎಕರೆ, ಆಂಧ್ರಪ್ರದೇಶ ಹಾಗೂ ತೆಲಂಗಾಣದ 7.12 ಲಕ್ಷ ಎಕರೆ ಜಮೀನಿಗೆ ನೀರು ಪೂರೈಕೆಯಾಗುತ್ತದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಜಲಾಶಯದ 65 ಟಿಎಂಸಿ ನೀರು ಖಾಲಿ ಮಾಡುವ ಅನಿವಾರ್ಯತೆ ಎದುರಾಗಿರುವುದರಿಂದ ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು, ಆಂಧ್ರಪ್ರದೇಶದ ಅನಂತಪುರ, ಕರ್ನಲು, ಕಡಪ, ತೆಲಂಗಾಣದ ಮಹೆಬೂಬ್​ನಗರ ಜಿಲ್ಲೆಗಳ ರೈತರು ಭವಿಷ್ಯದ ಕಠಿಣ ದಿನಗಳನ್ನು ನೆನಪಿಸಿಕೊಂಡು ದಿಗಿಲುಗೊಂಡಿದ್ದಾರೆ. ಕಳೆದ ವರ್ಷದ ಭೀಕರ ಬರದಿಂದ ಚೇತರಿಸಿಕೊಳ್ಳುವ ಮುನ್ನವೇ ರೈತರಿಗೆ ಮತ್ತೊಂದು ಆಘಾತ ಎದುರಾಗಿದೆ.

ಭಾನುವಾರ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿದ ಜಲ ಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ‘ಮೂರು ರಾಜ್ಯಗಳಿಗೆ ಸೇರಿರುವ ನೀರನ್ನು ಹೇಗಾದರೂ ಉಳಿಸಿಕೊಂಡು ತುಂಗಭದ್ರಾ ಅಣೆಕಟ್ಟಿನ ಗೇಟ್ ದುರಸ್ತಿ ಮಾಡುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಈ ಬಗ್ಗೆ ತಜ್ಞರ ವರದಿಯನ್ನು ಪಡೆಯಲಾಗುವುದು’ ಎಂದಿದ್ದಾರೆ. ಕೇಂದ್ರ ಜಲ ಆಯೋಗದ ತಂತ್ರಜ್ಞರು ಕೂಡ ಸ್ಥಳಕ್ಕೆ ಆಗಮಿಸಿದ್ದು, ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ‘ತುಂಗಭದ್ರಾ ಪರಿಸ್ಥಿತಿಯನ್ನು ಅವಲೋಕಿಸಿದರೆ ಕೆಆರ್​ಎಸ್ ಅಣೆಕಟ್ಟೆಗೂ ಸ್ಟಾಪ್ ಲಾಕ್ ಗೇಟ್ ಅಳವಡಿಸಬೇಕು’ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಅದೇನಿದ್ದರೂ, ರಾಜ್ಯದ ಇತರ ಜಲಾಶಯಗಳ ಸಂರಕ್ಷಣೆ ವಿಷಯದಲ್ಲೂ ಎಚ್ಚೆತ್ತುಕೊಳ್ಳುವುದು ಅವಶ್ಯ ಎಂಬುದನ್ನು ತುಂಗಭದ್ರಾ ಘಟನೆ ಪಾಠ ಕಲಿಸಿದೆ.

ಜಲಾಶಯಗಳ ಗೇಟುಗಳ ನಿರ್ವಹಣೆ ವರ್ಷಕ್ಕೊಮ್ಮೆ ಮಾಡುವುದು ವಾಡಿಕೆ. ಆದರೆ, ಇವು ನಿಜಕ್ಕೂ ಕ್ರಮಬದ್ಧವಾಗಿ ನಡೆಯುತ್ತಿವೆಯೇ? ಪರಿಶೀಲನೆ ವೇಳೆ ಲೋಪಗಳಾಗಿವೆಯೇ? ತಂತ್ರಜ್ಞರು ಸರಿಯಾದ ವರದಿಯನ್ನು ನೀಡುತ್ತಿದ್ದಾರೆಯೇ? ಸುರಕ್ಷೆಗಾಗಿ ಕೈಗೊಳ್ಳಬೇಕಾದ ಕ್ರಮಗಳೇನು? ಎಂಬುದನ್ನು ಸೂಕ್ತವಾಗಿ ಅವಲೋಕಿಸಬೇಕು. ಜಲಾಶಯಗಳು ನಾಡಿನ ಜನರ ಜೀವನಾಡಿ. ಕೃಷಿಗೆ ಮತ್ತು ಕುಡಿಯುವ ನೀರಿಗೆ ಮೂಲಾಧಾರ. ಸುರಕ್ಷೆ ದೃಷ್ಟಿಯಲ್ಲಿ ಸಣ್ಣ ಲೋಪವಾದರೂ, ಅದಕ್ಕೆ ಭಾರಿ ಬೆಲೆ ತೆರಬೇಕಾಗುತ್ತದೆ. ಈಗ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ರಿಪೇರಿಗೆ 65 ಟಿಎಂಸಿ ನೀರು ಖಾಲಿ ಮಾಡುವುದು ಅನಿವಾರ್ಯ ಎಂಬುದು ಅಧಿಕಾರಿಗಳ ಅಭಿಪ್ರಾಯ. ಆದರೆ, 65 ಟಿಎಂಸಿ ನೀರು ಖಾಲಿಯಾದರೆ, ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಪರದಾಡಬೇಕಾಗುತ್ತದೆ. ಕೇಂದ್ರದ ಜಲಾಶಯಗಳ ನಿರ್ವಹಣಾ ಸಮಿತಿ ನೀಡಿರುವ ಸಲಹೆಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿಲ್ಲ ಎಂಬ ಆರೋಪಗಳೂ ಕೇಳಿಬಂದಿದ್ದು, ಇಂಥ ವಿಷಯಗಳಲ್ಲಿ ನಿರ್ಲಕ್ಷ್ಯ ಸಲ್ಲ. ಅಣೆಕಟ್ಟು ಹಾಗೂ ಜನರ ಸುರಕ್ಷತೆಗೆ ಸರ್ಕಾರ ಗಮನಹರಿಸಬೇಕು. ಇತರ ಜಲಾಶಯಗಳಲ್ಲಿ ಇಂಥ ಘಟನೆಯಾಗದಂತೆ ಎಚ್ಚರ ವಹಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net