

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ಅನುಮತಿ ನೀಡಿದ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಹಾಗೂ ವಿಪಕ್ಷ ಬಿಜೆಪಿ - ಜೆಡಿಎಸ್ ನಡುವಿನ ಮೂರನೇ ಹಂತದ ಸಮರಕ್ಕೆ ಅಖಾಡ ಸಜ್ಜಾಗಿದೆ. ರಾಜ್ಯಪಾಲರ ವಿರುದ್ಧ ಸೋಮವಾರ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ಕೊಟ್ಟಿರುವ ಕೈಪಡೆ, ಸಿಎಂ ಪರವಾಗಿ ಹೈಕೋರ್ಟ್ ಮೆಟ್ಟಿಲೇರಲು ತೀರ್ವನಿಸಿದೆ. ಇನ್ನು ಪ್ರಾಸಿಕ್ಯೂಷನ್ ಅಸ್ತ್ರವನ್ನು ವ್ಯರ್ಥವಾಗಲು ಬಿಡದ ವಿಪಕ್ಷಗಳು ಸಿಎಂ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆಗೆ ತೀರ್ವನಿಸಿವೆ. ಪ್ರಾಸಿಕ್ಯೂಷನ್ ಬಳಿಕದ ಈ ಬೆಳವಣಿಗೆಗಳು ರಾಜ್ಯ ರಾಜಕಾರಣದಲ್ಲಿ ಹೈಟೆನ್ಶನ್ಗೆ ಕಾರಣವಾಗಿವೆ.
ಸಿಎಂ ಸಿದ್ದರಾಮಯ್ಯಗೆ ಮುಡಾ ಹಗರಣದ ಉರುಳು ಬಿಗಿಯಾಗುತ್ತಿದ್ದಂತೆ ಕಾಂಗ್ರೆಸ್ ಹೈಕಮಾಂಡ್ ಎಚ್ಚೆತ್ತುಕೊಂಡಿದೆ. ರಾಜಕೀಯವಾಗಿ ಹಾಗೂ ದೂರದೃಷ್ಟಿಯಲ್ಲಿ ಎದುರಾಗಬಹುದಾದ ಪಲ್ಲಟ ಎದುರಿಸಲು ಸಕಲ ರೀತಿಯಲ್ಲಿ ಸಜ್ಜಾಗಿದೆ. ಈ ಪ್ರಯತ್ನದ ಭಾಗವಾಗಿ ಸೋಮವಾರ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ರಾಜ್ಯಪಾಲರ ವಿರುದ್ಧ ಪಾದಯಾತ್ರೆ ಸಹಿತ ಪ್ರತಿಭಟನೆಗೆ ಕರೆಕೊಟ್ಟಿದೆ. ಜತೆಗೆ ಗುರುವಾರ ಶಾಸಕಾಂಗ ಪಕ್ಷದ ಸಭೆ ಕರೆಯಲು ಸೂಚಿಸಿದೆ.
ಅಭಿಯೋಜನೆಗೆ ತಡೆ?: ಈ ಪ್ರಕರಣದ ಇನ್ನೊಂದು ಭಾಗವಾಗಿ ಸಿಎಂ ಪರವಾಗಿ ಹೈಕೋರ್ಟ್ನಲ್ಲಿ ಸೋಮವಾರ ಅರ್ಜಿ ಸಲ್ಲಿಸಲಾಗುತ್ತಿದೆ. ರಾಜ್ಯಪಾಲರು ಅಭಿಯೋಜನೆಗೆ ಅನುಮತಿ ಕೊಟ್ಟಿದ್ದಕ್ಕೆ ತಡೆ ತರುವ ಪ್ರಯತ್ನ ಇದಾಗಿದೆ. ಈ ಹಾದಿ ಅರಿತೇ ದೂರುದಾರರಿಬ್ಬರು ಹೈಕೋರ್ಟ್ನಲ್ಲಿ ಕೇವಿಯೆಟ್ ಸಲ್ಲಿಸಿದ್ದಾರೆ. ಮೂರನೇ ದೂರುದಾರ (ಅಬ್ರಹಾಂ) ಸೋಮವಾರ ಬೆಳಗ್ಗೆ 10.30ಕ್ಕೆ ಕೇವಿಯೆಟ್ ಸಲ್ಲಿಸಲಿದ್ದಾರೆ. ಆ ಮೂಲಕ ನ್ಯಾಯಾಲಯ ಯಾವುದೇ ತೀರ್ಮಾನ ಮಾಡುವುದಕ್ಕೆ ಸಾಧ್ಯವಾಗದಂತೆ ದೂರುದಾರರು ಹೆಜ್ಜೆ ಇಟ್ಟಿದ್ದಾರೆ. ರಾಜ್ಯಪಾಲರ ತೀರ್ವನಕ್ಕೆ ತಡೆ ನೀಡಬೇಕೆಂಬ ಕೋರಿಕೆಯನ್ನು ಪರಿಗಣಿಸುವುದಾದರೆ ನಮ್ಮ ಅಹವಾಲು ಆಲಿಸಿ ಎಂದು ಕೋರ್ಟ್ ಮೊರೆ ಹೋಗಿದ್ದಾರೆ.
ಕಾಂಗ್ರೆಸ್ಗೆ ದಂಡಿ ಸವಾಲು: ಪ್ರಾಸಿಕ್ಯೂಷನ್ ಪ್ರಕರಣವನ್ನು ಕಾನೂನಾತ್ಮಕವಾಗಿ ಎದುರಿಸಲು ಸಿಎಂ ಪ್ರಯತ್ನಶೀಲರಾಗಿದ್ದಾರೆ. ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ ನೆರವು ಯಾಚಿಸಿದ್ದು, ನ್ಯಾಯಾಲಯದಲ್ಲಿ ಎದುರಾಗುವ ಪರಿಸ್ಥಿತಿ ಹಾಗೂ ಹಾಕಬೇಕಾದ ಪಟ್ಟುಗಳ ಬಗ್ಗೆಯೂ ಚರ್ಚೆ ನಡೆಸಿದ್ದಾರೆ. ಇನ್ನೊಂದೆಡೆ ಎಐಸಿಸಿಯು ಈ ಪ್ರಕರಣದ ಆಳ-ಅಗಲ, ಅಭಿಯೋಜನೆ ಕೊಟ್ಟ ಪರಿಣಾಮ, ಮುಂದೆ ಆಗುವ ಬೆಳವಣಿಗೆ, ಅದಕ್ಕೆ ಆಗಬೇಕಾದ ತಯಾರಿಯ ಕುರಿತು ಪ್ರತ್ಯೇಕವಾಗಿ ಅವಲೋಕನ ನಡೆಸಿದೆ ಎಂಬ ಮಾಹಿತಿ ಇದೆ. ಮುಖ್ಯವಾಗಿ ಕಾನೂನು ತಜ್ಞರ ಅಭಿಪ್ರಾಯ ಪಡೆದುಕೊಂಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಸದ್ಯಕ್ಕಂತೂ ಸಿಎಂ ಬೆನ್ನಿಗೆ ನಿಲ್ಲುವುದು, ಅಷ್ಟು ಸಲೀಸಾಗಿ ಹೆಜ್ಜೆ ಹಿಂದಿಡದೇ ಇಡುವುದು ಪಕ್ಷದ ನಿರ್ಣಯ. ಮುಂದೆ ಪರಿಸ್ಥಿತಿಗೆ ತಕ್ಕಂತೆ ನಿಲುವು ಬದಲಿಸಿಕೊಳ್ಳಲು ಉದ್ದೇಶಿಸಲಾಗಿದೆ.
ರಾಜೀನಾಮೆ ಕೊಡಲ್ಲ: ಮುಡಾ ನಿವೇಶನ ಹಗರಣದ ಗುರುತರ ಆರೋಪ ಮತ್ತು ರಾಜ್ಯಪಾಲರು ತನಿಖೆ ನಡೆಸಲು ಅನುಮತಿ ನೀಡಿದ ಬಳಿಕ ಸಿಎಂ ಪಕ್ಷದ ನಾಯಕರಿಗೂ ಒಂದು ಸ್ಪಷ್ಟ ಸಂದೇಶವನ್ನು ಕಳಿಸಿದರು. ನಾನು ರಾಜೀನಾಮೆ ಕೊಡಲ್ಲ ಎಂದು ಖಚಿತ ಮಾತಲ್ಲಿ ಹೇಳಿದರು. ಜತೆಗೆ ಹೈಕಮಾಂಡ್ ಕೂಡ ಎಲ್ಲ ನಾಯಕರೂ ಸಿದ್ದರಾಮಯ್ಯ ಬೆನ್ನಿಗೆ ನಿಲ್ಲಬೇಕು, ಹೋರಾಟ ನಡೆಸಬೇಕು ಎಂದು ಕರೆಕೊಟ್ಟಿತು. ಈ ಸೂಚನೆ ಹಿಂದೆ ರಾಜಕೀಯ ಲೆಕ್ಕಾಚಾರವೂ ಅಡಗಿದೆ ಎಂಬ ವಿಶ್ಲೇಷಣೆ ಇದೆ. ಇಂತಹ ಆರೋಪ ಬಂದಾಗ ಆಂತರಿಕವಾಗಿ ಏಳುವ ಅಪಸ್ವರ ತಡೆಗಟ್ಟುವುದು ಹೈಕಮಾಂಡ್ನ ಮುಖ್ಯ ಉದ್ದೇಶವಾಗಿತ್ತು. ಆ ಪ್ರಯತ್ನದಲ್ಲಿ ಸದ್ಯಕ್ಕಂತೂ ಸಫಲವಾಗಿದೆ. ಇಡೀ ಬೆಳವಣಿಗೆ ಮೇಲೆ ಪೂರ್ಣ ನಿಗಾ ವಹಿಸಿರುವ ಕೈ ದೆಹಲಿ ನಾಯಕರು, ಸೋಮವಾರ ಸಿದ್ದರಾಮಯ್ಯ ಬೆಂಬಲಿಸಿ ನಡೆಯುವ ಪ್ರತಿಭಟನೆಯಲ್ಲಿ ಯಾರೆಲ್ಲ ಹಾಜರಾಗಿರಬೇಕು ಎಂದು ಸ್ಪಷ್ಟವಾಗಿ ತಿಳಿಸಿದೆ. ಜತೆಗೆ ಪ್ರತಿಭಟನೆಯ ವರದಿ ಕೂಡ ತರಿಸಿಕೊಳ್ಳುತ್ತಿದೆ.
ಶಾಸಕಾಂಗ ಪಕ್ಷದ ಸಭೆ: ಗುರುವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದ್ದು, ಅಲ್ಲಿ ಶಾಸಕರನ್ನು ವಿಶ್ವಾಸದಲ್ಲಿ ಇಟ್ಟುಕೊಳ್ಳುವ ಪ್ರಯತ್ನ ನಡೆಯಲಿದೆ. ಸಭೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಜರಾಗುವ ಸಾಧ್ಯತೆ ಇದೆ. ಒಟ್ಟಾರೆ ಈ ಎಲ್ಲ ಪ್ರಯತ್ನದ ಮೂಲಕ ಪ್ರತಿಪಕ್ಷದ ಲೆಕ್ಕಾಚಾರ ಬುಡಮೇಲು ಮಾಡುವುದು ಕೈ ನಾಯಕರ ಲೆಕ್ಕಾಚಾರವಾಗಿದೆ.
ವರದಿ ಕೇಳಿದ ರಾಜ್ಯಪಾಲರು: ಸಿಎಂ ವಿರುದ್ಧ ಅಭಿಯೋಜನೆಗೆ ತಾವು ಅನುಮತಿ ನೀಡಿದ ಬಳಿಕ ಸರ್ಕಾರದಲ್ಲಿ ನಡೆದಿರುವ ಬೆಳವಣಿಗೆ ಕುರಿತು ವರದಿ ನೀಡುವಂತೆ ರಾಜ್ಯಪಾಲರು ಮುಖ್ಯಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ. ರಾಜ್ಯದ ಕಾನೂನು ಸುವ್ಯವಸ್ಥೆ ಸೇರಿದಂತೆ ಒಟ್ಟಾರೆ ಬೆಳವಣಿಗಳ ಮಾಹಿತಿ ನೀಡುವಂತೆ ತಿಳಿಸಿದ್ದಾರೆಂದು ಮೂಲಗಳು ಹೇಳಿವೆ.
23ಕ್ಕೆ ಸಿಎಂ ದೆಹಲಿಗೆ: ಮುಡಾ ಪ್ರಕರಣ ಗಂಭೀರ ತಿರುವು ಪಡೆದುಕೊಳ್ಳುತ್ತಿದ್ದಂತೆ ಸೋಮವಾರದ ಮಂತ್ರಾಲಯ ಭೇಟಿಯನ್ನು ಸಿದ್ದರಾಮಯ್ಯ ಮೊಟಕುಗೊಳಿಸಿದ್ದಾರೆ. ಜತೆಗೆ ಆ.23ರಂದು ದೆಹಲಿಗೆ ತೆರಳಲಿದ್ದಾರೆ. ಸೋನಿಯಾಗಾಂಧಿ, ರಾಹುಲ್ ಹಾಗೂ ಪ್ರಿಯಾಂಕ ಗಾಂಧಿ ಅವರನ್ನು ಭೇಟಿ ಮಾಡಿ ಸಂಪೂರ್ಣ ವಿವರ ನೀಡಲಿದ್ದಾರೆ. 22ರಂದು ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸೂಚನೆಯ ಮೇರೆಗೆ ಸಿಎಲ್ಪಿ ಹಾಗೂ ದೆಹಲಿ ಭೇಟಿ ನಿಗದಿಯಾಗಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.
ಆರೋಪಿ ಎಂದಾದರೆ?: ವಿವಿಧ ಆಯಾಮದಲ್ಲಿ ಇಡೀ ಬೆಳವಣಿಗೆ ಅವಲೋಕಿಸಿರುವ ಕಾಂಗ್ರೆಸ್, ಒಂದು ವಿಷಯದಲ್ಲಿ ಸ್ಪಷ್ಟತೆ ತಂದುಕೊಂಡಿಲ್ಲ. ಸೋಮವಾರದ ನಂತರ ಈ ಪ್ರಕರಣ ನ್ಯಾಯಾಲಯದ ವ್ಯಾಪ್ತಿಗೆ ಬರಲಿದೆ. ಒಂದು ವೇಳೆ ನ್ಯಾಯಾಲಯ ತನಿಖೆಗೆ ಸೂಚನೆ ನೀಡಿದ್ದೇ ಆದರೆ ಸಿಎಂ ಹಾಗೂ ಅವರ ಕುಟುಂಬ ಸದಸ್ಯರ ಮೇಲೆ ಎಫ್ಐಆರ್ ದಾಖಲಾಗಲಿದೆ. ಹಾಗೊಂದು ವೇಳೆ ಎಫ್ಐಆರ್ ದಾಖಲಾದರೆ ಆರೋಪಿ ಎಂಬ ಪಟ್ಟ ಬರಲಿದೆ. ಆ ಸಂದರ್ಭದಲ್ಲಿ ಪಕ್ಷ ಯಾವ ತೀರ್ಮಾನ ಮಾಡಬೇಕೆಂಬ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರಕ್ಕೆ ಬಂದಿಲ್ಲ. ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನಿಲುವು ಕೈಗೊಂಡು ಪಕ್ಷದ ಅಧ್ಯಕ್ಷರಿಗೆ ತಿಳಿಸಲಿದ್ದಾರೆಂದು ಪಕ್ಷದ ನಾಯಕರು ತಿಳಿಸಿದ್ದಾರೆ.
ಇಂದು ದೋಸ್ತಿ ಕಹಳೆ: ಕಾಂಗ್ರೆಸ್ ಪ್ರತಿಭಟನೆಗೆ ಪ್ರತಿಯಾಗಿ ಬಿಜೆಪಿ- ಜೆಡಿಎಸ್ ಕೂಡ ತಂತ್ರ ಹಣೆದಿವೆ. ಸೋಮವಾರ ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಮುಂದೆ ಧರಣಿ ನಡೆಸಿ, ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹಿಸುವ ಮೂಲಕ ಒತ್ತಡ ತರಲಿವೆ.
2. ಈ ವಿಚಾರ ಗ್ರಹಿಸಿರುವ ದೂರುದಾರರು ಹೈಕೋರ್ಟ್ನಲ್ಲಿ ಕೇವಿಯೆಟ್ ಹಾಕಿದ್ದು, ತಮ್ಮ ಅಹವಾಲು ಆಲಿಸಲು ಕೋರಿದ್ದಾರೆ
3. ಒಂದೊಮ್ಮೆ ನ್ಯಾಯಾಲಯ ಸಿದ್ದರಾಮಯ್ಯನವರ ಅರ್ಜಿ ಸ್ವೀಕರಿಸಿದರೆ, ದೂರುದಾರರಿಗೆ ನೋಟಿಸ್ ಜಾರಿಯಾಗಲಿದೆ
4. ನಿಗದಿತ ದಿನಾಂಕದಂದು ಯಾವ ಕಾರಣಕ್ಕೆ ತಡೆ ಕೊಡಬೇಕೆಂದು ಸಿದ್ದರಾಮಯ್ಯ ಪರ ವಕೀಲರು ವಾದ ಮಂಡಿಸುವರು
5. ಬಳಿಕ ಯಾವ ಕಾರಣಕ್ಕೆ ತಡೆ ಕೊಡಬಾರದು ಎಂದು ದೂರುದಾರರ ಪರ ವಕೀಲರು ವಾದ ಮಂಡಿಸಲಿದ್ದಾರೆ
6. ಎಲ್ಲರ ವಾದ ಆಲಿಸಿ, ಪ್ರಕರಣದ ಗಂಭೀರತೆ ಅರಿತು ಕೋರ್ಟ್ ಮುಂದಿನ ತೀರ್ಮಾನ ಮಾಡಲಿದೆ.
7. ಒಂದೊಮ್ಮೆ ಕೋರ್ಟ್ ಸಿದ್ದರಾಮಯ್ಯ ಅರ್ಜಿ ಮಾನ್ಯ ಮಾಡದೇ ಹೋದಲ್ಲಿ ತನಿಖೆಗೆ ಅವಕಾಶ ಸಿಗಲಿದೆ
ಲೋಕಸಭೆಯಲ್ಲಿ ಪಕ್ಷದ ಸಂಸದರ ಕೈಗೆ ಸಂವಿಧಾನದ ಪ್ರತಿ ಕೊಟ್ಟು ಪ್ರಮಾಣ ವಚನ ಸ್ವೀಕಾರ ಮಾಡಿಸುವ ಕಾಂಗ್ರೆಸ್, ಕರ್ನಾಟಕದಲ್ಲಿ ಮಾತ್ರ ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಾಗಿರುವ ರಾಜ್ಯಪಾಲರಿಗೆ ಬೆದರಿಕೆ ಹಾಕುವ, ಜನರನ್ನು ಎತ್ತಿ ಕಟ್ಟುವ ಕೆಲಸ ಮಾಡಿಸುತ್ತಿದೆ. | ಎಚ್.ಡಿ. ಕುಮಾರಸ್ವಾಮಿ ಕೇಂದ್ರ ಸಚಿವ