

ಬೆಂಗಳೂರು: ಸಿದ್ದರಾಮಯ್ಯ ಕೇವಲ ಸಿಎಂ ಅಲ್ಲ, ಕನ್ನಡಿಗರ ಪ್ರತೀಕ. ದೆಹಲಿ ನಾಯಕರ ಮುಂದೆ ತಲೆ ಬಾಗದೆ, ಪ್ರಧಾನಿ ಎದುರು ದಿಟ್ಟವಾಗಿ ಮಾತನಾಡಬಲ್ಲ ನಾಯಕತ್ವ. ಇದನ್ನು ಕಳೆಯುವ ಪ್ರಯತ್ನ ನಡೆದಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಸಿಎಂ ಇಬ್ರಾಹಿಂ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮತನಾಡಿದ ಅವರು, ನಾನೀಗ ಕಾಂಗ್ರೆಸ್‌ನಲ್ಲಿ ಇಲ್ಲ. ಆದರೆ, ಪ್ರಜಾಪ್ರಭುತ್ವ ಉಳಿಸುವ ದೃಷ್ಟಿಯಿಂದ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದೇನೆ. ರಾಜ್ಯಪಾಲರ ಮೂಲಕ ಕೇಂದ್ರ ಸರ್ಕಾರವು ಕರ್ನಾಟಕದ ಕನ್ನಡಿಗರ ಸ್ವಾಭಿಮಾನ ಕೆಣಕಿದೆ ಎಂದರು.
ಸಿಎಂ ಸಿದ್ದರಾಮಯ್ಯ ಬೆನ್ನಿಗೆ ನಾನೂ ಇದ್ದೇನೆ: ರಾಜ್ಯಪಾಲರು ವಿವೇಚನೆ ಉಪಯೋಗಿಸಿ ತೀರ್ಮಾನ ಕೊಡಬೇಕೆಂದು ಸುಪ್ರೀಂ ಕೋರ್ಟ್ ಹೇಳಿದ್ದರೂ ಈ ರೀತಿಯ ತೀರ್ಮಾನ ಮಾಡಿದ್ದಾರೆ. ಯಡಿಯೂರಪ್ಪ, ಕುಮಾರಸ್ವಾಮಿ, ಮುರುಗೇಶ್ ನಿರಾಣಿ, ಮೊಟ್ಟೆ ಮಾರಿ ತಿಂದ ಜೊಲ್ಲೆ ವಿರುದ್ಧ ಪ್ರಕರಣಗಳಿವೆ. ಭ್ರಷ್ಟಾಚಾರ ಋಜುವಾತಾಗಿರುವ ಈ ಎಲ್ಲ ಭಾರೀ ಕುಳಗಳ ವಿರುದ್ಧ ಲೋಕಾಯುಕ್ತ ಎಸ್‌ಐಟಿ ಕೇಳಿದರೂ ಅನುಮತಿ ಕೊಟ್ಟಿಲ್ಲ ಎಂದು ಆರೋಪಿಸಿದರು.
ಹುರುಳಿಲ್ಲದ ಆರೋಪ ಇಟ್ಟುಕೊಂಡು ಹೋದ ವ್ಯಕ್ತಿಗೆ ಅಭಿಯೋಜನೆಗೆ ಅನುಮತಿ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರವು ರಾಜ್ಯಪಾಲರ ಮೂಲಕ ಕರ್ನಾಟಕದ ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿದೆ. ಟಗರು ಧೈರ್ಯವಾಗಿಯೇ ಇದೆ ಎಂದರು.
ನಾನು ಕಾಂಗ್ರೆಸ್ ಅಲ್ಲ. ಪ್ರಜಾಪ್ರಭುತ್ವ ಉಳಿಸುವ ದೃಷ್ಟಿಯಿಂದ ಸಿದ್ದರಾಮಯ್ಯರನ್ನು ಭೇಟಿ ಮಾಡಿ, ಧೈರ್ಯ ಹೇಳಿದ್ದೇನೆ. ದುರ್ದೈವ, ನಾನು ಅವರ ಜತೆಯಲ್ಲಿ ಇರಲಿಲ್ಲ. ಇಂದಿನಿಂದ ಅವರೊಂದಿಗೆ ಪೂರ್ಣ ಇದ್ದು ಸಹಕರಿಸುತ್ತೇನೆ ಎಂದು ಹೇಳಿದರು.