ಎಲೆಕ್ಟ್ರಿಕ್ ವಾಹನ ಮೇಲಿನ ಉದ್ದೇಶಿತ ತೆರಿಗೆಗೆ ಕೊಕ್; ಪಕ್ಷಾತೀತವಾಗಿ ವಿಧೇಯಕಕ್ಕೆ ಅಂಗೀಕಾರ

Suvarna Vidhanasoudha
Published on

ಬೆಳಗಾವಿ: ವಿದ್ಯುತ್ ಚಾಲಿತ ವಾಹನಗಳಿಗೆ ಉತ್ತೇಜನ ನೀಡುವ ಹಿನ್ನೆಲೆಯಲ್ಲಿ 20 ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ಎಲೆಕ್ಟ್ರಿಕ್ ವಾಹನಗಳ ಮೇಲೆ ವಿಧಿಸಲು ಉದ್ದೇಶಿಸಿದ್ದ ಶೇ.10ರ ತೆರಿಗೆ ಪ್ರಸ್ತಾವನೆಯನ್ನು ಸರ್ಕಾರ ಕೈಬಿಡಲು ನಿರ್ಧರಿಸಿತು.

ವಿಧಾನಸಭೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ಎರಡನೇ ತಿದ್ದುಪಡಿ) ವಿಧೇಯಕದಲ್ಲಿ ಶೇ.10 ತೆರಿಗೆ ವಿಧಿಸಲು ಉದ್ದೇಶಿಸಲಾಗಿದೆ ಎಂದಾಗ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ವಿರೋಧಿಸಿದರು. ಮಧ್ಯ ಪ್ರವೇಶಿಸಿದ ಸಿಎಂ ಸಿದ್ದರಾಮಯ್ಯ, ತೆರಿಗೆ ಕೈಬಿಡುವಂತೆ ಸೂಚಿಸಿದರು. ಈ ಹಿನ್ನೆಲೆಯಲ್ಲಿ ಶೇ.10 ತೆರಿಗೆ ಪ್ರಸ್ತಾವನೆಯನ್ನು ವಿಧೇಯದಿಂದ ಕೈ ಬಿಡಲಾಯಿತು.

ಪೆಟ್ರೋಲ್ ಹಾಗೂ ಡಿಸೇಲ್ ಮೇಲಿನ ಅವಲಂಬನೆ ಕಡಿಮೆ ಮಾಡಲು ಹಾಗೂ ಪರಿಸರ ಸಂರಕ್ಷಿಸುವ ಉದ್ದೇಶದಿಂದ ಬಳಸುತ್ತಿರುವ ವಿದ್ಯುತ್​ಚಾಲಿತ ವಾಹನಗಳು ಜನಸಾಮಾನ್ಯರ ಕೈಗೆಟುಕವ ರೀತಿಯಲ್ಲಿರಬೇಕು. ಸರ್ಕಾರ ತೆರಿಗೆ ಹೆಚ್ಚಿಸಿ ಮತ್ತಷ್ಟು ದುಬಾರಿ ಮಾಡಬಾರದು ಎಂದು ಬಿಜೆಪಿಯ ಆರಗ ಜ್ಞಾನೇಂದ್ರ, ಡಾ.ಸಿ.ಎನ್. ಅಶ್ವತ್ಥ ನಾರಾಯಣ ಆಗ್ರಹಿಸಿದರು. ಅದನ್ನು ಕಾಂಗ್ರೆಸ್​ನ ಆರ್.ವಿ.ದೇಶಪಾಂಡೆ ಬೆಂಬಲಿಸಿ, ರಾಜ್ಯಕ್ಕೆ ಹೂಡಿಕೆ ಬರುತ್ತಿದೆ. ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಬೇಕಿದೆ. ಹಾಗಾಗಿ ತೆರಿಗೆ ಹಾಕುವುದು ಸರಿಯಲ್ಲ ಎಂದು ಸಲಹೆ ನೀಡಿದರು. ಪಕ್ಷಾತೀತವಾಗಿ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ವಿಧೇಯಕ್ಕೆ ಅಂಗೀಕಾರ ನೀಡಲಾಯಿತು.

ಅಂಗೀಕಾರ ಪಡೆದ ವಿಧೇಯಕಗಳು: 2023ನೇ ಸಾಲಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ವಿಧೇಯಕ, ಕರ್ನಾಟಕ ಸಾರ್ವಜನಿಕ ಪರೀಕ್ಷೆ (ನೇಮಕಾತಿಯಲ್ಲಿನ ಭ್ರಷ್ಟಾಚಾರ ಮತ್ತು ಅನುಸೂಚಿತ ವಿಧಾನಗಳ ಪ್ರತಿಬಂಧಕ ಕ್ರಮಗಳು)ವಿಧೇಯಕ, ಕರ್ನಾಟಕ ರಾಜ್ಯ ಉಚ್ಚನ್ಯಾಯಾಲಯ (ತಿದ್ದುಪಡಿ) ವಿಧೇಯಕ, ಕರ್ನಾಟಕ ಸಿವಿಲ್ ನ್ಯಾಯಾಲಯಗಳ (ತಿದ್ದುಪಡಿ) ವಿಧೇಯಕಕ್ಕೆ ಅಂಗೀಕಾರ ನೀಡಲಾಯಿತು.

ಸವದತ್ತಿ ರೇಣುಕಾ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ವಿಧೇಯಕ, ಕರ್ನಾಟಕ ಅನುಸೂಚಿತ ಜಾತಿಗಳ ಉಪ ಹಂಚಿಕೆ ಮತ್ತು ಬುಡಕಟ್ಟು ಉಪಹಂಚಿಕೆ ತಿದ್ದುಪಡಿ ವಿಧೇಯಕ, ಹಂಪಿ ವಿಶ್ವಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ (ತಿದ್ದುಪಡಿ) ವಿಧೇಯಕಗಳಿಗೂ ವಿಧಾನಸಭೆ ಅನುಮೋದನೆ ನೀಡಿತು.

4 ವಿಧೇಯಕಗಳಿಗೆ ಮೇಲ್ಮನೆ ಅಸ್ತು: ಬಿಜೆಪಿ ಸದಸ್ಯರ ಸಭಾತ್ಯಾಗದ ನಡುವೆ ವಿಧಾನಪರಿಷತ್​ನಲ್ಲಿ ಬುಧವಾರ ನಾಲ್ಕು ವಿಧೇಯಕಗಳು ಒಪ್ಪಿಗೆ ಪಡೆದವು. ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ಎರಡನೇ ತಿದ್ದುಪಡಿ) ವಿಧೇಯಕ, ಕರ್ನಾಟಕ ವೈದ್ಯಕೀಯ ಕೋರ್ಸ್​ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಕಡ್ಡಾಯ ಸೇವಾ (ತಿದ್ದುಪಡಿ) ವಿಧೇಯಕ 2023, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ಯ (ತಿದ್ದುಪಡಿ) ವಿಧೇಯಕ 2023 ಮತ್ತು ಕರಾವಳಿ ಅಭಿವೃದ್ಧಿ ಮಂಡಳಿ ವಿಧೇಯಕ 2023 ಅಂಗೀಕಾರ ಪಡೆದುಕೊಂಡವು.

ನಕಲಿ ವೈದ್ಯರ ವಿರುದ್ಧ ಕ್ರಮಕ್ಕೆ ಅಡ್ಡಗಾಲು: ನಕಲಿ ವೈದ್ಯರ ವಿರುದ್ಧ ಕ್ರಮಕೈಗೊಳ್ಳಲು ಮುಂದಾದರೆ ಜನಪ್ರತಿನಿಧಿಗಳು, ಮುಖಂಡರು ಅಡ್ಡಗಾಲು ಹಾಕುತ್ತಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.ನಾಟಿ, ಪಾರಂಪರಿಕ ವೈದ್ಯರು ಇದೇ ಪಟ್ಟಿಗೆ ಸೇರಿದ್ದು, ತಮ್ಮ ವೃತ್ತಿಗೆ ಮಾನ್ಯತೆ ನೀಡಬೇಕೆಂದು ಮನವಿ ಮಾಡಿದ್ದಾರೆ. ಆದರೂ ಮೈಸೂರು ಜಿಲ್ಲೆಯಲ್ಲಿ 15 ಕಡೆ ಕ್ರಮವಹಿಸಲಾಗಿದೆ. ಒತ್ತಡ ಅಥವಾ ಪ್ರಭಾವಕ್ಕೆ ಮಣಿಯದೆ ನಕಲಿ ವೈದ್ಯರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮವಹಿಸಲು ಜಿಲ್ಲಾಧಿಕಾರಿಗಳು ಹಾಗೂ ಡಿಎಚ್​ಒಗಳಿಗೆ ಸೂಚಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net