

ನವದೆಹಲಿ: ಕೋವಿಡ್ -19 ರೋಗಿಗಳ ಚಿಕಿತ್ಸೆಗೆ ಗಂಗಾ ನದಿಯ ನೀರನ್ನು ಬಳಸಬಹುದೇ ಎಂಬುದರ ಬಗ್ಗೆ ವೈದ್ಯಕೀಯ ಸಂಶೋಧನೆ ನಡೆಸುವಂತೆ ಜಲ ಶಕ್ತಿ ಸಚಿವಾಲಯ ಸಲ್ಲಿಸಿದ ಪ್ರಸ್ತಾಪವನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ ತಿರಸ್ಕರಿಸಲು ನಿರ್ಧರಿಸಿದೆ.
ಈ ಕುರಿತು ಐಸಿಎಂಆರ್ನ ಸಂಶೋಧನಾ ಪ್ರಸ್ತಾವನೆಗಳ ಮೌಲ್ಯಮಾಪನ ಸಮಿತಿಯ ಮುಖ್ಯಸ್ಥ ಡಾ. ವೈ. ಕೆ. ಗುಪ್ತಾ ಮಾತನಾಡಿ, ಪ್ರಸ್ತುತ ಲಭ್ಯವಿರುವ ದಾಖಲೆಗಳು ಮತ್ತು ದತ್ತಾಂಶಗಳು ಕರೊನಾ ಚಿಕಿತ್ಸೆಗಾಗಿ ಗಂಗಾ ಜಲ ಕುರಿತ ವೈದ್ಯಕೀಯ ಅಧ್ಯಯನಕ್ಕೆ ಬಲವಾದ ದಾಖಲೆಗಳಾಗಿಲ್ಲ ಎಂದು ತಿಳಿಸಿದ್ದಾರೆ.
ಕರೊನಾ ವಿರುದ್ಧ ಹೋರಾಡುವಲ್ಲಿ ಗಂಗಾ ಜಲ ಬಳಕೆ ಕುರಿತು ಅಧ್ಯಯನಕ್ಕೆ ಸ್ವಚ್ಛ ಗಂಗಾ ಅಭಿಯಾನ (ಎನ್ಎಂಸಿಜಿ) ಕ್ಕೆ ಹಲವು ಪ್ರಸ್ತಾಪಗಳು ಬಂದಿದ್ದು, ಅವುಗಳನ್ನು ಐಸಿಎಂಆರ್ಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ಪ್ರಸ್ತಾವನೆಗಳಿಗೆ ಹೆಚ್ಚಿನ ವೈಜ್ಞಾನಿಕ ದತ್ತಾಂಶಗಳು, ಪುರಾವೆಗಳು ಹಾಗೂ ಬಲವಾದ ಹಿನ್ನೆಲೆ ಅಗತ್ಯವಾಗಿದ್ದು, ಇದನ್ನು ಎನ್ಎಂಸಿಜಿಗೆ ತಿಳಿಸಲಾಗಿದೆ ಎಂದಿದ್ದಾರೆ ಗುಪ್ತಾ,
ರಾಷ್ಟ್ರೀಯ ಪರಿಸರೀಯ ಇಂಜಿನಿಯರಿಂಗ್ ಸಂಶೋಧನಾ ಸಂಸ್ಥೆ (ಎನ್ಇಇಆರ್ಐ) ತಜ್ಞರೊಂದಿಗೆ ಈ ಪ್ರಸ್ತಾಪಗಳ ಕುರಿತು ಎನ್ಎಂಸಿಜಿ ಚರ್ಚಿಸಿದೆ.
ಎನ್ಎಂಸಿಜಿ ಮತ್ತು ಎನ್ಇಇಆರ್ಐ ಮಧ್ಯೆ ನಡೆದ ಸಮಾಲೋಚನೆ ಸಂದರ್ಭದಲ್ಲಿ ಗಂಗಾ ಜಲ ಅಥವಾ ಮಣ್ಣನಿನಲ್ಲಿ ವೈರಾಣು ನಿರೋಧಕ ಗುಣಲಕ್ಷಣಗಳಿವೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಎನ್ಇಇಆರ್ಐ ವಿಜ್ಞಾನಿಗಳು ತಿಳಿಸಿದ್ದಾರೆ. (ಏಜನ್ಸೀಸ್)