

ಬೆಂಗಳೂರು: ಕಾವೇರಿ 2.0 ತಂತ್ರಾಂಶದಲ್ಲಿ ಮತ್ತೆ ಸರ್ವರ್ ಡೌನ್ ಸಮಸ್ಯೆ ಇಣುಕಿರುವ ಪರಿಣಾಮ ರಾಜ್ಯಾದ್ಯಂತ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಸ್ಥಿರಾಸ್ತಿಗಳ ದಸ್ತಾವೇಜು ನೋಂದಣಿ ಹಳಿತಪ್ಪಿದೆ. ಕಳೆದ ಜೂನ್ 13ರಿಂದ ಸಾಫ್ಟ್ವೇರ್ನಲ್ಲಿ ದೋಷ ಕಾಡುತ್ತಿದ್ದು, ಜನರು ಕಚೇರಿ ಬಾಗಿಲು ಕಾಯುವಂತಾಗಿದೆ. ಮತ್ತೊಂದೆಡೆ ಈ ಸಮಸ್ಯೆ ಸರ್ಕಾರದ ಆದಾಯ ಖೋತಾಗೂ ದಾರಿ ಮಾಡಿಕೊಟ್ಟಿದೆ.
ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಕಳೆದ ಶುಕ್ರವಾರದಿಂದ ನಿರಂತರವಾಗಿ ಸರ್ವರ್ ಸಮಸ್ಯೆ ಕಾಡುತ್ತಿದೆ. ದಸ್ತಾವೇಜುಗಳ ನೋಂದಣಿಗೆ ಸಿಟಿಜನ್ ಲಾಗಿನ್ನಲ್ಲಿ ದಾಖಲೆ ಅಪ್ಲೋಡ್ ಮಾಡಲು ಇ-ಖಾತಾ ಅಥವಾ ಪಹಣಿ ಮಾಹಿತಿ ತೋರಿಸುತ್ತಿಲ್ಲ. ಇದಾದ ಮೇಲೆ ಮತ್ತೆ ದಾಖಲೆ ಪತ್ರ ಅಪ್ಲೋಡ್ ಮಾಡುವಾಗ ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದೆ. ಹರಸಾಹಸ ಪಟ್ಟು ಅಪ್ಲೋಡ್ ಮಾಡಿದಾಗ ಸಬ್ ರಿಜಿಸ್ಟ್ರಾರ್ ಲಾಗಿನ್ನಲ್ಲಿ ತೋರಿಸದೆ ಸತಾಯಿಸುತ್ತಿರುವುದು ಅಧಿಕಾರಿ ವರ್ಗಕ್ಕೆ ತಲೆನೋವಾಗಿದೆ. ಆನ್ಲೈನ್ನಲ್ಲಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾವತಿ ಮಾಡಲು ಪೇಮೆಂಟ್ ಗೇಟ್ವೇನಲ್ಲೂ ಸದಾಕಾಲ ಸರ್ವರ್ ಬಿಜಿ ಬರುತ್ತಿದೆ.
ಲಕ್ಷಾಂತರ ರೂ. ಶುಲ್ಕ ಪಾವತಿ ಮಾಡಬೇಕಾದ ಸಮಯದಲ್ಲಿ ಏಕಾಏಕಿ ಅರ್ಧಕ್ಕೆ ನಿಂತು ಬ್ಯಾಂಕ್ ಖಾತೆಯಿಂದ ಹಣ ಕಡಿವಾಗುತ್ತಿದೆ. ಆ ಕಡೆ ಖಜಾನೆ-2ಗೂ ಪಾವತಿ ಆಗದೆ ಮಾಯವಾಗುತ್ತಿದೆ. ಕೊನೆಗೆ ಶುಲ್ಕ ಪಾವತಿಸಿದ ಮೇಲೆ ತಮಗೆ ಬೇಕಾದ ದಿನಾಂಕದಂದು ಸ್ಲಾಟ್ ತೆಗೆದುಕೊಳ್ಳಲು ಕಾವೇರಿ 2.0 ತಂತ್ರಾಂಶ ಪಕ್ಷಕಾರರಿಗೆ ಸ್ಪಂದಿಸುತ್ತಿಲ್ಲ. ಮಂಗಳವಾರ (ಜೂ.16) ಯಾರೊಬ್ಬರಿಗೂ ಆಸ್ತಿ ನೋಂದಣಿಗೆ ಸ್ಲಾಟ್ ಸಿಕ್ಕಿಲ್ಲ. ಸಿಕ್ಕವರಿಗೆ ರಿಜಿಸ್ಟ್ರೇಷನ್ ಪ್ರಕ್ರಿಯೇ ಇಡೀ ದಿನ ತೆಗೆದುಕೊಂಡಿದೆ. ಕೆಲವೊಮ್ಮೆ ಆಸ್ತಿ ನೋಂದಣಿ ಪ್ರಕ್ರಿಯೆ ಚಾಲ್ತಿಯಲ್ಲಿರುವಾಗಲೇ ಸರ್ವರ್ ಹ್ಯಾಂಗ್ ಆಗಿರುವ ನಿದರ್ಶನಗಳಿವೆ. ಗುರುವಾರ ಸಹ ರಾಜ್ಯದಲ್ಲಿ ಅದೇ ಪರಿಸ್ಥಿತಿ ಇತ್ತು.
ಸಾರ್ವಜನಿಕರು ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಸಿಬ್ಬಂದಿ ಜತೆ ತಗಾದೆ ತೆಗೆಯುವುದು ನಿಂತಿಲ್ಲ. ಒಂದು ದಿನದಲ್ಲಿ ಆಗುವ ಕೆಲಸ 15 ದಿನ ವಿಳಂಬವಾಗುತ್ತಿದೆ. ಹೊಸ ತಂತ್ರಾಂಶ ಅನುಷ್ಠಾನಕ್ಕೆ ತರುವಾಗ ಸಾಧಕ-ಬಾಧಕಗಳನ್ನು ಯೋಚಿಸದಿದ್ದರೆ ಹೇಗೆ ಎಂಬುದು ಜನರ ಪ್ರಶ್ನೆ.
ಸರ್ವರ್ ಡೌನ್ ಎಂಬ ಫಲಕಗಳು ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ಕಾಯಂ ಆಗಿವೆ. ರಾಜ್ಯದ ಬಜೆಟ್ನಲ್ಲಿ ಶೇ.15 ಮುದ್ರಾಂಕ ಮತ್ತು ನೋಂದಣಿ ಶುಲ್ಕದ ವರಮಾನ ಇದೆ. ಯಾವ ತಂತ್ರಾಂಶದಲ್ಲಿ ತಾಂತ್ರಿಕ ದೋಷ ಇದೆ ಎಂಬುದು ಜನರಿಗೆ ಮುಖ್ಯವಲ್ಲ. ಒಟ್ಟಾರೆ ನೋಂದಣಿ ಪ್ರಕ್ರಿಯೆ ಸುಗಮ ಆಗಬೇಕು. ಸಾಫ್ಟ್ವೇರ್ ಬದಲಿಸಿ ಸಮಸ್ಯೆ ಸರಿಪಡಿಸಬೇಕು ಎಂಬುದು ಜನರ ಆಗ್ರಹವಾಗಿದೆ.