

ಚಿಕ್ಕಮಗಳೂರು: ಸ್ಥಳೀಯ ಸಂಸ್ಥೆಗಳ ಸೇವೆಯಲ್ಲಿ ಸರ್ಕಾರ ಬದಲಾವಣೆ ತರಲು ತಂತ್ರಜ್ಞಾನದ ಮೊರೆಹೋಗಿದೆ. ನಗರದಲ್ಲಿನ ಆಸ್ತಿಗಳಿಗೆ ಇ-ಆಸ್ತಿ, ಖಾತೆ ಬದಲಾವಣೆ ಸೇರಿ ವಿವಿಧ ಸೌಲಭ್ಯ ನೀಡಲು ಆನ್‌ಲೈನ್ ವ್ಯವಸ್ಥೆ ಅನುಷ್ಠಾನಗೊಳಿಸಿದ್ದು, ಅರ್ಜಿ ಸಲ್ಲಿಸಿದ 7 ದಿನಗಳಲ್ಲಿ ದಾಖಲೆ ಅರ್ಜಿದಾರರ ಕೈ ಸೇರಲಿದೆ.
ಇನ್ನು ಮನೆ ಬಾಗಿಲಿಗೇ ಇ-ಆಸ್ತಿ ದಾಖಲೆಗಳು ಬರಲಿವೆ. ಕೈಬರಹದ ಅರ್ಜಿಯನ್ನು ನಿಲ್ಲಿಸಿದ್ದು ಇನ್ನೇನಿದ್ದರೂ ಆನ್‌ಲೈನ್ ವ್ಯವಹಾರ ಮಾತ್ರ. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ-ಆಸ್ತಿ ತಂತ್ರಾಂಶದ ಬಳಕೆ ಕಡ್ಡಾಯಗೊಳಿಸಿ ಪೌರಾಡಳಿತ ನಿರ್ದೇಶನಾಲಯ ಆದೇಶ ಹೊರಡಿಸಿದೆ. ಈ ಹಿಂದೆ ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿ ನೋಂದಣಿ ಹಾಗೂ ಹಕ್ಕು ಬದಲಾವಣೆ ಮಾಡುವುದು ದೊಡ್ಡ ಸವಾಲಾಗಿತ್ತು. ಅರ್ಜಿ ಸಲ್ಲಿಸಿ ತಿಂಗಳುಗಟ್ಟಲೆ ಕಚೇರಿಗೆ ಅಲೆದಾಡಿದರೂ ಅರ್ಜಿ ವಿಲೇವಾರಿ ಆಗುತ್ತಿರಲಿಲ್ಲ. ಜನಪ್ರತಿನಿಧಿಗಳು, ಮಧ್ಯವರ್ತಿಗಳ ಹಾವಳಿ ಸೇರಿ ಸಾಕಷ್ಟು ದಿನಗಳವರೆಗೆ ಕಾಯಬೇಕಾದ ಅನಿವಾರ್ಯತೆ ಇತ್ತು. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ನಗರಸಭೆ ಬದಲಾವಣೆ ಕೈಗೊಂಡಿದೆ.
ಈ ಹಿಂದೆ ಇ-ಆಸ್ತಿ ಅಥವಾ ಖಾತೆ ಬದಲಾವಣೆಗೆ ನಗರಸಭೆಯ ಟಪಾಲಿನಲ್ಲಿ ಅರ್ಜಿ ಸಲ್ಲಿಸಿದಾಗ ಅದು ಕೇಸ್‌ವರ್ಕರ್‌ಗೆ ಹೋಗಿ ಅಲ್ಲಿಂದ ಬಿಲ್ ಕಲೆಕ್ಟರ್‌ಗೆ ಹೋಗಬೇಕು. ಕರವಸೂಲಿಗಾರ ಸ್ಥಳಕ್ಕೆ ಭೇಟಿ ನೀಡಿ ವರದಿ ತಯಾರಿಸಿ ಕಂದಾಯ ನಿರೀಕ್ಷಕರಿಗೆ (ಆರ್‌ಐ) ಕಳುಹಿಸಬೇಕಿತ್ತು. ಅಲ್ಲಿಂದ ಕಂದಾಯ ಅಧಿಕಾರಿಗೆ (ಆರ್‌ಒ) ಕಳುಹಿಸಬೇಕು, ಅಲ್ಲಿ ಹೊಸ ಆಸ್ತಿಗೆ ನಂಬರ್ ಸೃಷ್ಟಿಯಾಗಿ ಬರಬೇಕು. ನಂತರ ಪೌರಾಯುಕ್ತರ ಲಾಗಿನ್‌ಗೆ ಹೋಗಿ ಬಯೋಮೆಟ್ರಿಕ್ ಕೊಡುವರಷ್ಟರಲ್ಲಿ ತಿಂಗಳು, ವರ್ಷಗಳೇ ಕಳೆಯುತ್ತಿದ್ದವು. ಅರ್ಜಿದಾರ ಕಚೇರಿಗೆ ಅಲೆದು ಚಪ್ಪಲಿ ಸವೆಯುತ್ತಿದ್ದವೇ ಹೊರತು ಸಕಾಲದಲ್ಲಿ ಅರ್ಜಿ ವಿಲೇವಾರಿ ಆಗುತ್ತಿರಲಿಲ್ಲ. ದಲ್ಲಾಳಿಗಳ ಮುಖಾಂತರ ಬಂದರೆ ಅಧಿಕಾರಿಗಳು ಅಥವಾ ಸಿಬ್ಬಂದಿ ಆದ್ಯತೆ ಮೇರೆಗೆ ವಿಲೇವಾರಿ ಮಾಡುತ್ತಿದ್ದರು. ಅರ್ಜಿದಾರ ಎಚ್ಚರ ತಪ್ಪಿ ಕಡತಗಳೇ ನಾಪತ್ತೆಯಾಗಿರುವ ಉದಾಹರಣೆಗಳೂ ಇವೆ.
ಆದರೆ ಇ-ಆಸ್ತಿ ತಂತ್ರಾಂಶವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ, ಜನರಿಗೆ ತ್ವರಿತವಾಗಿ ಸೇವೆ ಒದಗಿಸುವ ಉದ್ದೇಶದಿಂದ ಇ-ಆಸ್ತಿ ತಂತ್ರಾಂಶದಲ್ಲಿ ಹೊಸ ಸೌಲಭ್ಯ ಕಲ್ಪಿಸಲಾಗಿದೆ. ತಂತ್ರಾಂಶದಲ್ಲಿ ಆಸ್ತಿಗಳ ದಾಖಲೀಕರಣ, ಹೊಸ ಪಿಐಡಿ ನೀಡುವುದು, ಹಕ್ಕು ವರ್ಗಾವಣೆ ಮತ್ತು ಆಸ್ತಿಗಳ ವಿಭಜನೆ ಮತ್ತು ಒಟ್ಟುಗೂಡಿಸುವಿಕೆಗೆ ಸಂಬಂಧಿಸಿ ಪ್ರಸ್ತುತ ಇರುವ ವ್ಯವಸ್ಥೆಯನ್ನು ಬದಲಾವಣೆ ಮಾಡಲಾಗಿದೆ.
7 ದಿನ ನಿಗದಿ: ನಗರಸಭೆಯಲ್ಲಿ ಆಸ್ತಿ ದಾಖಲಿಸಲು ಮತ್ತು ಹಕ್ಕು ವರ್ಗಾವಣೆ ವಿಷಯಗಳಲ್ಲಿ ಕರ ವಸೂಲಿಗಾರರು, ಕಂದಾಯ ನಿರೀಕ್ಷಕರು, ಕಂದಾಯ ಅಧಿಕಾರಿ, ಪೌರಾಯುಕ್ತರ ಕಾರ್ಯ ಇರುತ್ತದೆ. ಹೊಸದಾಗಿ ಪಿಐಡಿ ನೀಡುವುದು ಸೇರಿ ಎಲ್ಲ ಕಾರ್ಯಗಳು ಯಾವ ಅಧಿಕಾರಿಗಳ ಮೂಲಕ ಆಗಬೇಕು? ಎಷ್ಟು ಸಮಯದಲ್ಲಿ ಆಗಬೇಕು ಎಂಬುದನ್ನು ನಿಗದಿಸಿಪಡಿಸಿದ್ದು ಯಾರೂ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ-ತಂತ್ರಾಂಶದಲ್ಲಿ ಆಸ್ತಿ ದಾಖಲಿಸಲು 7 ದಿನ, ಹಕ್ಕು ವರ್ಗಾವಣೆಗೆ 4 ದಿನ ಹಾಗೂ ಹೊಸದಾಗಿ ಪಿಐಡಿ ನೀಡುವುದು ಮತ್ತು ಆಸ್ತಿ ವಿಭಜನೆ ಸಂದರ್ಭ ಒಟ್ಟು 7 ದಿನಗಳ ಕಾಲಮಿತಿ ನಿಗದಿಪಡಿಸಲಾಗಿದೆ. ಅಲ್ಲದೆ ಕಾರ್ಯ ಹರಿವಿನಲ್ಲಿ ಬರುವ ಎಲ್ಲ ಅಧಿಕಾರಿಗಳೂ ಅವರಿಗೆ ವಹಿಸಿರುವ ಜವಾಬ್ದಾರಿಯನ್ನು ನಿರ್ವಹಿಸಲೇಬೇಕು. ಇಲ್ಲವಾದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶವಿದೆ.
ಅರ್ಜಿ ಎಲ್ಲೆಲ್ಲಿ ಸಲ್ಲಿಸಬೇಕು?: ಮೊದಲು ಅರ್ಜಿ ಸಲ್ಲಿಸಿದವರಿಗೆ ಮೊದಲು ಸೇವೆ ಸಿಗಲಿದೆ. ಜನರು ಆಸ್ತಿಗಳನ್ನು ಇ-ಆಸ್ತಿ ತಂತ್ರಾಂಶದಲ್ಲಿ ಆನ್‌ಲೈನ್ ಮೂಲಕ ಅಥವಾ ನಗರ ಸ್ಥಳೀಯ ಸಂಸ್ಥೆಗಳ ಸಹಾಯವಾಣಿ ಅಥವಾ ಕರ್ನಾಟಕ ಒನ್ ಕೇಂದ್ರಗಳಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ನೇರವಾಗಿ ಅರ್ಜಿಗಳನ್ನು ಸ್ವೀಕರಿಸುವುದನ್ನು ನಗರಸಭೆಯಲ್ಲಿ ಸ್ಥಗಿತಗೊಳಿದ್ದು, ಹೊಸ ಮಾರ್ಗಸೂಚಿ ಅನುಷ್ಠಾನಗೊಳಿಸಲಾಗಿದೆ. ಇನ್ನುಮುಂದೆ ಸಾರ್ವಜನಿಕರು ನೇರವಾಗಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಇ-ಆಸ್ತಿ ಪಡೆಯಬಹುದು. ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ನಗರಸಭೆಯಿಂದ ಪ್ರಚಾರ ಕೈಗೊಳ್ಳಲಾಗಿದೆ.
ತೆರಿಗೆ ಪಾವತಿ ಕಡ್ಡಾಯ: ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆಗಳಲ್ಲಿ ಆನ್‌ಲೈನ್ ಮೂಲಕ ಇ-ಆಸ್ತಿ, ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಬಹುದು. ವ್ಯಾಪಾರ ಪರವಾನಗಿ ದಾಖಲೆ ಪಡೆದುಕೊಳ್ಳುವ ಪ್ರಗತಿ ಚಾಲ್ತಿಯಲಿದೆ. ಅರ್ಜಿ ಸಲ್ಲಿಸುವವರು ಮೊದಲ ನಿವೇಶನ, ಮನೆಗೆ ಸಂಬಂಧಿಸಿದ್ದಕ್ಕೆ ಪ್ರತಿ ವರ್ಷವೂ ಕಡ್ಡಾಯವಾಗಿ ತೆರಿಗೆ ಪಾವತಿ ಮಾಡಬೇಕು. ಇದರಿಂದಾಗಿ ನಗರಸಭೆಯಿಂದ ದೊರೆಯುವ ಕುಡಿಯುವ ನೀರು, ಯುಜಿಡಿ ಸಂಪರ್ಕ ಸೇರಿ ಇತರೆೆ ಸೌಲಭ್ಯಗಳನ್ನು ಸುಲಭವಾಗಿ ಪಡೆಯಬಹುದು.
ನಗರಸಭೆಯಲ್ಲಿ ಪಾರದರ್ಶಕ ಆಡಳಿತ ಸೇವೆ ಜಾರಿಗೆ ತರಲು ಸರ್ಕಾರ ಸುತ್ತೋಲೆ ಹೊರಡಿಸಿದೆ. ಸಾರ್ವಜನಿಕರು ಆನ್‌ಲೈನ್ ಸೇವೆ ಪಡೆದುಕೊಳ್ಳಬೇಕು. ಅರ್ಜಿ ಸಲ್ಲಿಸಿದರೆ ಬಹಳಷ್ಟು ದಿನಗಳಾಗುತ್ತವೆ ಎಂಬ ಅನುಮಾನದಿಂದ ಹೊರಬಂದು ಸೇವೆ ಪಡೆದುಕೊಳ್ಳಬೇಕು ಎಂದು ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ತಿಳಿಸಿದ್ದಾರೆ.