ವಿಲ್ ನೋಂದಣಿಯೂ ಆಗದೆ, ಅದಕ್ಕೆ ಸಾಕ್ಷಿಯೂ ಇಲ್ಲದಿದ್ರೆ ಮುಂದೇನು? ಕಾನೂನಿನಲ್ಲಿ ಏನಿದೆ ನೋಡಿ...

nyayadevate
Published on
ನಮ್ಮ ತಂದೆಗೆ ಮೂರು ಮಕ್ಕಳು. ನಾನು ಮಧ್ಯದವನು. ನಮ್ಮ ತಂದೆ ತಾಯಿ ಇಬ್ಬರನ್ನೂ 25 ವರ್ಷ ನಾನೇ ಸಾಕಿದ್ದೇನೆ. ಆದ್ದರಿಂದ ನಮ್ಮ ತಂದೆ ಅವರೇ ಸಂಪಾದಿಸಿದ ಮನೆ ಮತ್ತು ಎರಡು ಎಕರೆ ಜಮೀನನ್ನು ನನ್ನ ಹೆಸರಿಗೆ ವಿಲ್ ಮಾಡಿದ್ದಾರೆ. ವಿಲ್ ಟೈಪ್ ಮಾಡಿಸಿ ಅವರೇ ಸಹಿ ಮಾಡಿದ್ದಾರೆ . ಆದರೆ ಅದಕ್ಕೆ ಯಾರೂ ಸಾಕ್ಷಿಗಳೂ ಇಲ್ಲ. ವಿಲ್ ನೋಂದಣಿ ಆಗಿಲ್ಲ. ಬಿಳಿಯ ಕಾಗದದ ಮೇಲೆ ಟೈಪ್ ಆಗಿದೆ. ಈಗ ನಾನು ವಿಲ್ ಆಧಾರದ ಮೇಲೆ ಆಸ್ತಿ ನನ್ನ ಹೆಸರಿಗೆ ಖಾತೆ ಮಾಡಿಸಿಕೊಳ್ಳಲು ಹೋದರೆ ನನ್ನ ಅಣ್ಣ ಮತ್ತು ತಮ್ಮ ತಕರಾರು ಹಾಕಿದ್ದಾರೆ . ನಾನು ನನ್ನ ಆಸ್ತಿಯನ್ನು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು? ದಯಮಾಡಿ ತಿಳಿಸಿ.

ಉತ್ತರ: ಯಾವುದೇ ವಿಲ್ ನೋಂದಣಿ ಆಗಬೇಕು ಎಂದು ಕಾನೂನಿನಲ್ಲಿ ಇಲ್ಲ. ಆದರೆ ನೋಂದಣಿ ಆಗಿದ್ದರೆ ಒಳ್ಳೆಯದು ಅಷ್ಟೆ. ನೋಂದಣಿ ಆಗಿರುವ ವಿಲ್ ಸಿಂಧುತ್ವದ ಬಗ್ಗೆ ತಕರಾರು ಬಂದಾಗ, ವಿಲ್ ನೋಂದಾಯಿತವಾಗಿದೆ ಎನ್ನುವ ಅಂಶ ಸ್ವಲ್ಪ ಮಟ್ಟಿಗೆ, ವಿಲ್‍ನ ಸಿಂಧುತ್ವವನ್ನು ಸಾಬೀತು ಪಡಿಸುವಲ್ಲಿ ಸಹಾಯ ಮಾಡುತ್ತದೆ . ವಿಲ್ ಬಿಳಿಯ ಕಾಗದದ ಮೇಲೆ ಇದ್ದರೂ ಚಿಂತೆಯಿಲ್ಲ. ಆದರೆ ಯಾವುದೇ ವಿಲ್‍ಗೆ ಕಡ್ಡಾಯವಾಗಿ ಇಬ್ಬರು ಸಾಕ್ಷಿಗಳು ಇರಲೇ ಬೇಕು. ವಿಲ್​​ದಾರರು, ಅಂದರೆ ಯಾರು ವಿಲ್ ಬರೆದಿರುತ್ತಾರೋ ಅವರ ಸಹಿಯೂ ಇರಬೇಕು.

ನಿಮ್ಮ ವಿಷಯದಲ್ಲಿ ಸಾಕ್ಷಿಗಳು ಇಲ್ಲದೇ ಇರುವುದರಿಂದ ವಿಲ್ ಸಿಂಧುತ್ವವನ್ನು ಸಾಬೀತುಪಡಿಸುವುದು ಕಾನೂನಿನ ಚೌಕಟ್ಟಿನಲ್ಲಿ ಕಷ್ಟವಿದೆ. ನೀವೂ ನಿಮ್ಮ ಸಹೋದರರೂ ಕೂತು ಮಾತಾಡಿ ಸಮಸ್ಯೆಯನ್ನು ಮಧ್ಯಸ್ಥಿಕೆಯಿಂದ ಬಗೆಹರಿಸಿಕೊಳ್ಳುವುದು ಒಳ್ಳೆಯದು. ನೀವು ನಿಮ್ಮ ತಂದೆ ತಾಯಿಯರನ್ನು ನೋಡಿಕೊಂಡಿದ್ದರಿಂದ ನಿಮ್ಮ ಸಹೋದರರು ನಿಮಗೆ ಹೆಚ್ಚಿನ ಭಾಗ ಕೊಡಲು ಒಪ್ಪಬಹುದು. ಇಲ್ಲದೇ ಹೋದರೆ ಕಾನೂನಿನಂತೆ ಮೂವರು ಮಕ್ಕಳಿಗೂ ತಲಾ ಮೂರನೇ ಒಂದು ಸಮಪಾಲು ಬರುತ್ತದೆ. ತಂದೆ ತಾಯಿಯನ್ನು ಸಾಕಿದ ಮಾತ್ರಕ್ಕೆ ಆಸ್ತಿಯಲ್ಲಿ ಹೆಚ್ಚಿನ ಭಾಗ ಬರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net