ಸಮಸ್ಯೆಗಳಿಗೆ ಸ್ಪಂದಿಸಿ; ಹಾಸ್ಟೆಲ್​ಗಳಿಗೆ ಸೂಕ್ತ ಸೌಲಭ್ಯ ಅಗತ್ಯ

Boys Hostel
Published on

ರಾಜ್ಯದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧೀನದಲ್ಲಿ ಇರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿಗಳಿಗಾಗಿ ನಡೆಸುತ್ತಿರುವ ಸರ್ಕಾರಿ ವಸತಿ ನಿಲಯಗಳಲ್ಲಿನ ವಾರ್ಡನ್ ಮತ್ತು ಮೇಲ್ವಿಚಾರಕರ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಕುರಿತು ಸಮಗ್ರ ವಿವರಣೆ ಸಹಿತ ವರದಿ ಸಲ್ಲಿಸುವಂತೆ ಹೈಕೋರ್ಟ್ ಮಂಗಳವಾರ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಹಾಸ್ಟೆಲ್​ಗಳಲ್ಲಿನ ಸಿಬ್ಬಂದಿ ಕೊರತೆಯಿಂದ ಅಧ್ಯಯನ ನಡೆಸುವ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ತೊಂದರೆಯಾಗುತ್ತದೆ. ಮಕ್ಕಳ ಹಕ್ಕುಗಳ ರಕ್ಷಣೆ ವಿಚಾರದಲ್ಲಿ ಈ ರೀತಿಯ ಸಿಬ್ಬಂದಿ ಕೊರತೆ ಕಳವಳಕಾರಿಯಾಗಿದೆ ಎಂದು ನ್ಯಾಯಪೀಠ ತಿಳಿಸಿರುವುದು ಗಮನಾರ್ಹ. ಸಂಬಂಧಿತ ಸಿಬ್ಬಂದಿ ನೇಮಕ ವಿಷಯದಲ್ಲಿ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು.

ಮಕ್ಕಳ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಲಾಗಿದೆ. ಆದರೆ, ಸಮಾಜ ಕಲ್ಯಾಣ ಇಲಾಖೆ ಅಧೀನದ ವಿದ್ಯಾರ್ಥಿನಿಲಯಗಳು ಸಮಸ್ಯೆಗಳಿಂದ ಬಳಲುತ್ತಿದ್ದು, ಎಷ್ಟೋ ಕಡೆಗಳಲ್ಲಿ ಮೂಲಸೌಕರ್ಯದಿಂದ ವಂಚಿತವಾಗಿವೆ. ಸ್ವಚ್ಛತೆಯ ಕೊರತೆ, ಸೌಲಭ್ಯಗಳು ಇಲ್ಲದಿರುವುದು, ಶೌಚಗೃಹಗಳ ದುರವಸ್ಥೆ, ಕಳಪೆ ಆಹಾರ ಹೀಗೆ ಸಮಸ್ಯೆಗಳ ಪಟ್ಟಿ ಮುಗಿಯುವುದೇ ಇಲ್ಲ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸರ್ಕಾರಿ ವಿದ್ಯಾರ್ಥಿನಿಲಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಅವ್ಯವಸ್ಥೆಗೆ ರೋಸಿ ಹೋಗಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ನಿದರ್ಶನಗಳಿಗೂ ಕೊರತೆಯಿಲ್ಲ. ಈಗ ಸಿಬ್ಬಂದಿ ಕೊರತೆಯ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಸಿಬ್ಬಂದಿಯೇ ಇಲ್ಲದೆ ಹಾಸ್ಟೆಲ್​ಗಳ ಕಾರ್ಯನಿರ್ವಹಣೆ ಸುಗಮವಾಗಿ ಸಾಗಲು ಹೇಗೆ ಸಾಧ್ಯ? ಸಕಾಲದಲ್ಲಿ ಸಿಬ್ಬಂದಿಯನ್ನು ನೇಮಿಸಲು ಸರ್ಕಾರ ನಿರ್ಲಕ್ಷ್ಯ ತೋರುತ್ತಿರುವುದಾದರೂ ಏಕೆ? ಇಂಥ ವಿಷಯದಲ್ಲೂ ನ್ಯಾಯಾಲಯ ಮಧ್ಯಪ್ರವೇಶ ಅನಿವಾರ್ಯವಾಗಿದೆಯೆಂದರೆ, ಸಮಾಜ ಕಲ್ಯಾಣ ಇಲಾಖೆ ತನ್ನ ಕಾರ್ಯನಿರ್ವಹಣೆಯ ಬಗ್ಗೆ ಅವಲೋಕನ ಮಾಡಿಕೊಳ್ಳಬೇಕು. ಹಳೆಯ ತಪು್ಪಗಳನ್ನೇ ಪುನರಾವರ್ತಿಸಬಾರದು. ವಿದ್ಯಾರ್ಥಿಗಳ ಬಗೆಗೆ ಕಳಕಳಿ, ಹಾಸ್ಟೆಲ್​ಗಳ ವಿಷಯದಲ್ಲಿ ಕರ್ತವ್ಯಪ್ರಜ್ಞೆ ಇದ್ದಲ್ಲಿ ಇಂಥ ಅಪಸವ್ಯಗಳು ಸಂಭವಿಸುವುದಿಲ್ಲ.

ಸಿಬ್ಬಂದಿ ಕೊರತೆಯ ಸಮಸ್ಯೆ ಮಾತ್ರವಲ್ಲದೆ, ಹಾಸ್ಟೆಲ್​ಗಳಿಗೆ ಸರ್ಕಾರ ನೀಡುವ ಅನುದಾನ ಕೂಡ ಸರಿಯಾದ ಪ್ರಮಾಣದಲ್ಲಿ ಇರುವುದಿಲ್ಲ. ದಶಕಗಳ ಹಿಂದಿನ ಖರ್ಚುವೆಚ್ಚಗಳಿಗೆ ಪೂರಕವಾಗಿ ರೂಪಿಸಿದ ಅನುದಾನ ಪ್ರಮಾಣ ಈಗಲೂ ಮುಂದುವರಿದಿರುವುದು ದುರದೃಷ್ಟಕರ. ಅನುದಾನ ಕೊರತೆಯಿಂದಾಗಿ ವಸ್ತುಗಳನ್ನು ಸರಿಯಾಗಿ ಖರೀದಿಸಲು, ಮಕ್ಕಳಿಗೆ ಪೂರೈಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಅನುದಾನ ಹಂಚಿಕೆಯ ಮಾನದಂಡವನ್ನು ಕೂಡ ಬದಲಿಸಬೇಕು. ಈಗಿನ ಖರ್ಚುವೆಚ್ಚಗಳಿಗೆ ಅನುಸಾರವಾಗಿ ಹಣ ನೀಡುವಂತಾಗಬೇಕು. ಹಾಸ್ಟೆಲ್​ಗಳ ಸಮಗ್ರ ಅಭಿವೃದ್ಧಿಗೆ ಸಮರ್ಪಕ ಕ್ರಮ ಕೈಗೊಂಡು ವಿದ್ಯಾರ್ಥಿಗಳ ಹಿತವನ್ನು ರಕ್ಷಿಸುವ ಇಚ್ಛಾಶಕ್ತಿಯನ್ನು ಸರ್ಕಾರ ಪ್ರದರ್ಶಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net