ಮುಂಬಡ್ತಿ ಗೋಲ್ಮಾಲ್!; ಅರ್ಹತೆ ಇಲ್ಲದವರಿಗೆ ಹಿಂಬಡ್ತಿ, ನಕಲಿ ಪದವೀಧರರ ವಿರುದ್ಧ ಕೇಸ್..

Front
Published on

| ಕೀರ್ತಿನಾರಾಯಣ ಸಿ. ಬೆಂಗಳೂರು

ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಲ್ಲಿ ನಡೆದಿರುವ ಅಕ್ರಮ ‘ಮುಂಬಡ್ತಿ’ ದಂಧೆ ಬಯಲಾಗಿದೆ. ಜ್ಯೇಷ್ಠತೆಯ ಅರ್ಹತೆ ಇಲ್ಲದಿದ್ದರೂ ಬಡ್ತಿ ಪಡೆದವರಿಗೀಗ ಹಿಂಬಡ್ತಿ ಶಿಕ್ಷೆಯಾದರೆ ನಕಲಿ ಪದವಿ ಪ್ರಮಾಣಪತ್ರ ಸಲ್ಲಿಸಿ ಪ್ರಮೋಷನ್ ಪಡೆದವರಿಗೆ ಹಿಂಬಡ್ತಿ ಜತೆಗೆ ಕ್ರಿಮಿನಲ್ ಕೇಸ್ ದಾಖಲಾಗಿ ಬಂಧನದ ಭೀತಿಯೂ ಶುರುವಾಗಿದೆ. ಜ್ಯೇಷ್ಠತಾ ಪಟ್ಟಿ ಅನುಸಾರ ಅರ್ಹತೆ ಇಲ್ಲದಿದ್ದರೂ 16 ಅಧಿಕಾರಿಗಳಿಗೆ ಸಹಾಯಕ ನಿರ್ದೇಶಕ ಹುದ್ದೆಯಿಂದ ಉಪ ನಿರ್ದೇಶಕ ಹುದ್ದೆಗೆ ಬಡ್ತಿ ಕೊಡಲಾಗಿದೆ. ಇನ್ನೊಂದೆಡೆ ಹೊರ ರಾಜ್ಯದ ವಿಶ್ವವಿದ್ಯಾಲಯ, ರಾಜ್ಯ ಮುಕ್ತ ವಿವಿ ಮತ್ತು ದೂರಶಿಕ್ಷಣದ ಮೂಲಕ ಪಡೆದಿರುವ ನಕಲಿ ಪದವಿ ಪ್ರಮಾಣಪತ್ರ ಸಲ್ಲಿಸಿದ 37 ಅಧಿಕಾರಿಗಳಿಗೆ ಸಹಾಯಕ ಸಾಂಖ್ಯಿಕ ಅಧಿಕಾರಿ ಹುದ್ದೆಯಿಂದ ಸಹಾಯಕ ನಿರ್ದೇಶಕ ಹುದ್ದೆಗೆ ಬಡ್ತಿ ಕೊಟ್ಟು ಅಕ್ರಮವೆಸಗಿರುವುದು ಇಲಾಖೆ ಪರಿಶೀಲನೆಯಲ್ಲಿ ಬಯಲಾಗಿದೆ. ಈ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 53 ಮಂದಿಗೆ ಅಕ್ರಮವಾಗಿ ಬಡ್ತಿ ಕೊಟ್ಟಿರುವುದು ದೃಢಪಟ್ಟಿದೆ. ಅಕ್ರಮ ಬಡ್ತಿ ಸಾಬೀತಾಗಿರುವ ಹಿನ್ನೆಲೆಯಲ್ಲಿ ಉಪ ನಿರ್ದೇಶಕ ಹುದ್ದೆಗೆ ಬಡ್ತಿ ಪಡೆದಿದ್ದ 16 ಮಂದಿಯ ಹಿಂಬಡ್ತಿಗೆ ಆದೇಶಿಸಲಾಗಿದೆ. ಈ ಪೈಕಿ ಕೆಲವರು ಈಗಾಗಲೇ ನಿವೃತ್ತಿ ಹೊಂದಿದ್ದು, ಮುಂಬಡ್ತಿಯಿಂದ ಪಡೆದಿದ್ದ ಹೆಚ್ಚುವರಿ ವೇತನ, ಇತರ ಸೌಲಭ್ಯಗಳಿಗೆ ತಗುಲಿದ ವೆಚ್ಚವನ್ನು ಅವರಿಂದಲೇ ವಸೂಲಿ ಮಾಡುವ ಬಗ್ಗೆ ಚರ್ಚೆ ನಡೆದಿದೆ. ಇನ್ನು ನಕಲಿ ಪದವಿ ಪ್ರಮಾಣಪತ್ರ ಸಲ್ಲಿಸಿರುವ ಆರೋಪ ಹೊತ್ತಿರುವ 37 ಅಧಿಕಾರಿಗಳಿಗೂ ಹಿಂಬಡ್ತಿಗೆ ಆದೇಶ ಹೊರಡಿಸಿದ್ದು, ಪದವಿ ಪ್ರಮಾಣಪತ್ರ ನಕಲಿ ಎಂಬುದು ಸಾಬೀತಾದವರ ವಿರುದ್ಧ ಎಫ್​ಐಆರ್ ದಾಖಲಿಸಲಾಗುತ್ತಿದೆ.

16 ಅನರ್ಹರಿಗೆ ಬಡ್ತಿ: 2018ರಲ್ಲಿ ಜ್ಯೇಷ್ಠತೆ ಅರ್ಹತೆ ಇಲ್ಲದಿದ್ದರೂ 16 ಜನರಿಗೆ ಉಪ ನಿರ್ದೇಶಕ ಹುದ್ದೆಗೆ ಬಡ್ತಿ ಕೊಡಲಾಗಿತ್ತು. ಇದರಲ್ಲಿ ಹೈದರಾಬಾದ್ ಕರ್ನಾಟಕ ಮೀಸಲಾತಿಯಡಿ 9 ಹಾಗೂ ಜ್ಯೇಷ್ಠತೆ ಮೇರೆಗೆ 7 ಅಧಿಕಾರಿಗಳಿಗೆ ಮುಂಬಡ್ತಿ ಕೊಡಲಾಗಿತ್ತು. ಆದರೆ, ಬಡ್ತಿ ಪಡೆಯಲು ಅರ್ಹತೆ ಹೊಂದಿರದ ಬಗ್ಗೆ ಸಂಸದೀಯ ಸಮಿತಿಯಲ್ಲಿ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದಾಗ ಅರ್ಹತೆ ಇಲ್ಲದಿದ್ದರೂ ಬಡ್ತಿ ಪಡೆದಿರುವ ವಿಚಾರ ದೃಢಪಟ್ಟಿದ್ದರಿಂದ 2020 ನವೆಂಬರ್ 7 ಹಾಗೂ ಡಿ.17ರಂದು ಹಿಂಬಡ್ತಿ ಕೊಟ್ಟು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಆದೇಶ ಹೊರಡಿಸಿದೆ.

ನೈಜತೆ ಪರಿಶೀಲನೆಗೆ ಕಳಿಸಿಲ್ಲ: ಮುಂಬಡ್ತಿಗೆ ಮುನ್ನ ನೌಕರರು ಸಲ್ಲಿಸಿರುವ ಮೂಲ ಪದವಿ ಪ್ರಮಾಣಪತ್ರ, ಅಂಕಪಟ್ಟಿ, ಪರೀಕ್ಷೆಗೆ ಹಾಜರಾದ ದಿನ ಪಡೆದ ರಜೆಗೆ ಸಂಬಂಧಿಸಿದ ದಾಖಲಾತಿ, ಪ್ರವೇಶ ಪತ್ರಗಳನ್ನು ನೈಜತೆಗೆ ಒಳಪಡಿಸಿ ಲೋಪದೋಷಗಳಿದ್ದರೆ ಕ್ರಮ ಕೈಗೊಳ್ಳುವಂತೆ ನಿರ್ದೇಶನಾಲಯವೇ ಆದೇಶಿಸಿತ್ತು. ಆದರೆ, ಅಧಿಕಾರಿಗಳು ಹಣ ಕೊಟ್ಟವರ ದಾಖಲಾತಿ ಪತ್ರಗಳನ್ನು ಪರಿಶೀಲನೆಗೆ ಕಳುಹಿಸದೆ ಹಣ ಕೊಡದ ಅಧಿಕಾರಿಗಳ ಪ್ರಮಾಣಪತ್ರಗಳನ್ನು ಮಾತ್ರವೇ ನೈಜತೆ ಪರಿಶೀಲನೆಗೆ ಕಳುಹಿಸಿಕೊಡಲಾಗಿತ್ತು ಎಂಬ ಆರೋಪವೂ ಕೇಳಿಬಂದಿದೆ.

ಬಡ್ತಿಗಾಗಿ ನಕಲಿ ಸರ್ಟಿಫಿಕೇಟ್: ಸಹಾಯಕ ಸಾಂಖ್ಯಿಕ ಅಧಿಕಾರಿ ಹುದ್ದೆಯಿಂದ ಸಹಾಯಕ ನಿರ್ದೇಶಕ ಹುದ್ದೆಗೆ ಬಡ್ತಿ ಪಡೆದಿರುವ 37 ಜನರ ಪದವಿ ಪ್ರಮಾಣಪತ್ರಗಳೂ ನಕಲಿ ಎಂಬ ಅನುಮಾನವಿದೆ. ಛತ್ತೀಸ್​ಗಢ, ಸಿಕ್ಕಿಂ, ರಾಜಸ್ಥಾನ, ಮಧುರೈ, ಕರ್ನಾಟಕ ಸೇರಿ ಬೇರೆಬೇರೆ ವಿಶ್ವವಿದ್ಯಾಲಯಗಳ ಪದವಿ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಈಗಾಗಲೇ ಬಹುತೇಕರ ಪದವಿ ಪತ್ರಗಳು ನಕಲಿ ಎಂಬುದು ಸಾಬೀತಾಗಿದೆ. ನೈಜತೆ ಕುರಿತು ಸಂಬಂಧಪಟ್ಟ ವಿಶ್ವವಿದ್ಯಾಲಯಗಳಿಗೆ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ ಪತ್ರ ಬರೆದಿದ್ದರೂ ಹೊರ ರಾಜ್ಯದ ವಿವಿಗಳಾಗಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ಬರುವುದು ವಿಳಂಬವಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮತ್ತೆ ಕೆಲ ವಿವಿಗಳು ಅಸ್ತಿತ್ವದಲ್ಲೇ ಇಲ್ಲ ಎಂದೂ ಹೇಳಲಾಗುತ್ತಿದೆ.

ಮೂರು ಸಭೆ ವಿಭಿನ್ನ ನಿರ್ಧಾರ: 16 ಮಂದಿಗೆ ಉಪ ನಿರ್ದೇಶಕ ಹುದ್ದೆಗೆ ಮುಂಬಡ್ತಿ ಕೊಡಲು 2019ರ ಅ.16, ನ.27 ಹಾಗೂ ಡಿ.27ರಂದು ಆಗಿನ ನಿರ್ದೇಶಕರಾಗಿದ್ದ ಡಾ.ಸಿ.ಎಚ್.ವಸುಂಧರಾದೇವಿ (ಈಗ ನಿವೃತ್ತ) 3 ಬಾರಿ ಪ್ರತ್ಯೇಕ ಸಭೆ ನಡೆಸಿದ್ದಾರೆ. ಆದರೆ, ಒಂದೇ ವಿಚಾರವಾಗಿ 3 ಸಭೆಗಳಲ್ಲಿ ವಿಭಿನ್ನ ತೀರ್ಮಾನ ತೆಗೆದುಕೊಂಡು ಪ್ರಸ್ತಾವನೆಯನ್ನು ಸಿಎಂ ಅವಗಾಹನೆಗೆ ಕಳುಹಿಸಿರುವ ಬಗ್ಗೆಯೂ ನಿರ್ದೇಶನಾಲಯ ಅನುಮಾನ ವ್ಯಕ್ತಪಡಿಸಿದೆ.

ತಲಾ 2 ಲಕ್ಷ ರೂ.?: ಮುಂಬಡ್ತಿ ಸಭೆಯಲ್ಲಿ 37 ಜನರ ಪದವಿ ಪ್ರಮಾಣಪತ್ರಗಳ ಅಸಲಿಯತ್ತಿನ ಬಗ್ಗೆ ಅನುಮಾನ ವ್ಯಕ್ತವಾಗಿದ್ದರೂ ಬಡ್ತಿ ಕೊಡಲಾಗಿತ್ತು. ತಲಾ 2 ಲಕ್ಷ ರೂ. ಲಂಚ ಪಡೆದು ಬಡ್ತಿ ಕೊಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ನಿವೃತ್ತರಿಗೆ ನೋಟಿಸ್: ಮುಂಬಡ್ತಿ ಗೊಂದಲದ ಬಗ್ಗೆ 15 ದಿನಗಳ ಒಳಗೆ ವಿವರಣೆ ನೀಡುವಂತೆ ನಿವೃತ್ತ ನಿರ್ದೇಶಕಿ ಡಾ.ಸಿ.ಎಚ್.ವಸುಂಧರಾದೇವಿ ಅವರಿಗೆ ನಿರ್ದೇಶನಾಲಯ ನೋಟಿಸ್ ನೀಡಿದೆ. ಕರ್ನಾಟಕ ನಾಗರಿಕ ಸೇವಾ ನಿಯಮಗಳು 1957 ಅನ್ವಯ ಶಿಸ್ತುಕ್ರಮ ಜರುಗಿಸಲು ಉದ್ದೇಶಿಸಿರುವುದಾಗಿ ಹಾಗೂ ಇಲಾಖಾ ವಿಚಾರಣೆಗೂ ಆದೇಶಿಸಲಾಗಿದೆ.

ಹೇಗೆ ನಡೆದಿದೆ ದಂಧೆ?

  • ಜ್ಯೇಷ್ಠತಾ ಪಟ್ಟಿಯಲ್ಲಿ ಅರ್ಹತೆ ಇಲ್ಲದವರಿಗೂ ಲಂಚ ಪಡೆದು ಮುಂಬಡ್ತಿ ನೀಡಲಾಗಿದೆ
  • ಹೈದರಾಬಾದ್ ಕರ್ನಾಟಕಕ್ಕೆ ಮೀಸಲಾತಿ ತುಂಬಿದ್ದರೂ ಹೆಚ್ಚುವರಿ ಬಡ್ತಿ ಕೊಡಲಾಗಿದೆ
  • ನಕಲಿ ಪದವಿ ಪ್ರಮಾಣಪತ್ರಗಳ ನೈಜತೆ ಪರಿಶೀಲಿಸದೆಯೇ ಬಡ್ತಿ ಕೊಡುಗೆ
  • ಅಸ್ತಿತ್ವದಲ್ಲಿಯೇ ಇಲ್ಲದ ಹೊರರಾಜ್ಯಗಳ ವಿವಿಗಳ ಪ್ರಮಾಣಪತ್ರಗಳನ್ನು ಸಲ್ಲಿಸಿರುವುದು ಬಯಲು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net