ಗಂಡನನ್ನು ಬಿಟ್ಟಿರಲಾಗದೆ ಕೋರ್ಟ್ ಮಹಡಿಯಿಂದ ಕೆಳಕ್ಕೆ ಹಾರಿದಳು!

Untitled-1
Published on

ಬೆಂಗಳೂರು: ಗಂಡನನ್ನು ಬಿಟ್ಟಿರಲು ಆಗದ ಯುವತಿಯೊಬ್ಬಳು, ನ್ಯಾಯಾಲಯ ಕಟ್ಟಡದ ಮಹಡಿಯಿಂದ ಕೆಳಕ್ಕೆ ಹಾರಿ, ಸ್ಥಳದಲ್ಲಿದ್ದವರಲ್ಲಿ ಅನೇಕರು ಒಮ್ಮೆ ಹೌಹಾರುವಂತೆ ಮಾಡಿದ್ದಾಳೆ. ಆಕೆ ಕೆಳಕ್ಕೆ ಜಿಗಿದು ಗಂಭೀರ ಗಾಯಗೊಂಡಿದ್ದರೂ ತಕ್ಷಣವೇ ಅವಳನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದರಿಂದ ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಅಷ್ಟಕ್ಕೂ ಈ ಇಬ್ಬರೂ ಪ್ರೀತಿಸುತ್ತಿದ್ದು, ಅಂತರ್ಜಾತಿಯವರಾಗಿದ್ದರಿಂದ ಮದುವೆಗೆ ಯುವತಿಯ ಮನೆಯವರ ವಿರೋಧವಿತ್ತು. ಹೀಗಾಗಿ ಓಡಿ ಹೋಗಿ ಮದುವೆ ಆಗಿದ್ದಲ್ಲದೆ, ಮನೆಯರಿಗೆ ಸಿಗದೆ ತಲೆಮರೆಸಿಕೊಂಡಿದ್ದರು. ಅತ್ತ ಪ್ರೀತಿಯ ಗಂಡನನ್ನು ಬಿಟ್ಟಿರಲಾಗದೆ, ಇತ್ತ ಮನೆಯರಿಂದಲೂ ದೂರವಿರಲಾಗದೆ ಗೊಂದಲಕ್ಕೆ ಸಿಕ್ಕಿದ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಅಂದಹಾಗೆ ಈ ಜೋಡಿಯ ಹೆಸರು ಪ್ರಣವ್ ಕುಮಾರ್ ಮತ್ತು ಸಂಗಂ ಕುಮಾರಿ. ಬಿಹಾರದ ಕತರಮಾಲಾ ಗ್ರಾಮದವರಾದ ಇವರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಮದುವೆಗೆ ಮನೆಯವರ ವಿರೋಧ ಇದ್ದಿದ್ದರಿಂದ 2019ರ ಫೆ. 10ರಂದು ಓಡಿಹೋಗಿ ಮದುವೆಯಾಗಿದ್ದರು. ಈ ಬಗ್ಗೆ ಯುವತಿಯ ಮನೆಯವರು, ತಮ್ಮ ಪುತ್ರಿ ಅಪ್ರಾಪ್ತೆ, ಆಕೆಯನ್ನು ಅಪಹರಿಸಲಾಗಿದೆ ಎಂದು ದೂರು ನೀಡಿದ್ದರು.

ದೂರಿನ ಮೇರೆಗೆ ಕಾರ್ಯಪ್ರವೃತ್ತರಾದ ಪೊಲೀಸರು 2021ರ ಜನವರಿ 12ರಂದು ಇಬ್ಬರನ್ನೂ ಬಂಧಿಸಿ, ಹೇಳಿಕೆ ದಾಖಲಿಗಾಗಿ ನ್ಯಾಯಾಲಯಕ್ಕೆ ಕರೆದೊಯ್ದಿದ್ದರು. ಬಿಹಾರದ ಬೇಗುಸರಾಯ್ ನ್ಯಾಯಾಲಯಕ್ಕೆ ಕರೆದೊಯ್ದಿದ್ದಾಗ ಪತಿಯನ್ನು ಬಿಟ್ಟಿರಲಾಗುವುದಿಲ್ಲ ಎಂಬ ಹಠಕ್ಕೆ ಬಿದ್ದ ಯುವತಿ, ಅತ್ತ ಮನೆಯವರ ವಿರೋಧವನ್ನೂ ಎದುರಿಸಲಾಗದೆ ನ್ಯಾಯಾಲಯದ ಮಹಡಿಯಿಂದ ಕೆಳಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net