

ಸಾಗರ: ಸಾಗರ, ಹೊಸನಗರ ತಾಲೂಕಿನಾದ್ಯಂತ ಮಳೆ ಹೆಚ್ಚಾಗಿದ್ದು ಅವಘಡ ಸಂಭವಿಸಿದರೆ ತಕ್ಷಣ ನನ್ನ ಗಮನಕ್ಕೆ ತರಬೇಕು. ಮಳೆಗಾಲ ಮುಗಿಯುವವರಿಗೆ ಯಾವ ಕಾರಣಕ್ಕೂ ಅಧಿಕಾರಿಗಳು ರಜೆ ಹಾಕುವಂತಿಲ್ಲ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಪ್ರವಾಸಿ ಮಂದಿದ ಸಭಾಂಗಣದಲ್ಲಿ ಸೋಮವಾರ ಮಳೆ ಮುಂಜಾಗ್ರತೆ ಕುರಿತು ಹಾಗೂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ಪ್ರಮುಖವಾಗಿ ಗ್ರಾಪಂ ವ್ಯಾಪ್ತಿಯಲ್ಲಿ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದರು.
ಮಳೆಗಾಲದಲ್ಲಿ ರಸ್ತೆ, ಸೇತುವೆ ಕೊಚ್ಚಿಕೊಂಡು ಹೋದರೆ, ಮನೆ, ಕೊಟ್ಟಿಗೆ ಮೇಲೆ ಮರ ಬಿದ್ದು ಅವಘಡ ಸಂಭವಿಸಿದರೆ ನನ್ನ ಗಮನಕ್ಕೆ ತನ್ನಿ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಸೌಲಭ್ಯ ಒದಗಿಸುವ ಪ್ರಯತ್ನ ನಡೆಸುತ್ತೇನೆ. ಶಾಲೆಗಳು ಸೋರುತ್ತಿದ್ದರೆ ತಕ್ಷಣ ರಿಪೇರಿ ಮಾಡಿ. ಸಾಧ್ಯವಾಗದಿದ್ದರೆ ಮಕ್ಕಳಿಗೆ ಸುರಕ್ಷಿತ ಜಾಗದಲ್ಲಿ ಪಾಠ ನಡೆಸಿ. ಶಾಲಾ ದುರಸ್ತಿಗೆ ಆರ್ಥಿಕ ನೆರವು ಕಲ್ಪಿಸಲಾಗುತ್ತದೆ. ಶಾಲೆ ಪ್ರಾರಂಭವಾಗಿದ್ದು ಯಾವುದೇ ಮಗುವೂ ಶಾಲೆಯಿಂದ ಹೊರಗೆ ಉಳಿಯದಂತೆ ನೋಡಿಕೊಳ್ಳಿ ಎಂದು ಬಿಇಒಗೆ ಸೂಚನೆ ನೀಡಿದರು.
ಶರಾವತಿ ಹಿನ್ನೀರಿನ ಪ್ರದೇಶದ ಜನರಿಗೆ ಸಮಸ್ಯೆ ಆಗದಂತೆ ಗಮನಹರಿಸಿ. ಮಳೆಗಾಲದಲ್ಲಿ ಸರ್ಕಾರ ಕೂಡ ವಿದ್ಯುತ್ ಸಮಸ್ಯೆ ಪರಿಹರಿಸಿಕೊಳ್ಳಲು ಈಗಾಗಲೇ ವಿಶೇಷ ಪ್ಯಾಕೇಜ್ ನೀಡಿದೆ. ಹಿಂದಿನ ಶಾಸಕರು ತಾವು ಅಭಿವೃದ್ಧಿಗೆ ಅನುದಾನ ತಂದಿದ್ದು ಕ್ಷೇತ್ರದ ಶಾಸಕನಾಗಿ ನಾನು ಏನೂ ಅನುದಾನ ತಂದಿಲ್ಲ ಎಂದು ಹೇಳುತ್ತಿರುವುದು ಸತ್ಯಕ್ಕೆ ದೂರವಾದ ಸಂಗತಿ. ನಾನು ಶಾಸಕನಾದ ಮೇಲೆ ವಿವಿಧ ಕಾಮಗಾರಿಗೆ ಹಣಕಾಸು ಮಂಜೂರು ಮಾಡಿಸಿದ್ದೇನೆ. ನನ್ನ ಅವಧಿಯಲ್ಲಿ ಆಗಿರುವ ಆಗುತ್ತಿರುವ ಅನುದಾನ ಬಿಡುಗಡೆ ಮತ್ತು ಕಾಮಗಾರಿಯ ಅಧಿಕೃತ ಪಟ್ಟಿಯನ್ನು ಬಹಿರಂಗಡಿಸುತ್ತೇನೆ ಎಂದರು.
ತಹಸೀಲ್ದಾರ್ ಸೈಯದ್ ಕಲೀಮುಲ್ಲಾ, ತಾಪಂ ಇಒ ಗುರುಕೃಷ್ಣ ಶೆಣೈ, ಡಿವೈಎಸ್ಪಿ ಗೋಪಾಲಕೃಷ್ಣ ನಾಯ್ಕ್, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.