

ಸಾಗರ: ದಲಿತ ಸಮುದಾಯಕ್ಕೆ ಬದುಕಿನ ಮಾರ್ಗದರ್ಶನ ಮಾಡಿದವರು ಪ್ರೊ. ಬಿ.ಕೃಷ್ಣಪ್ಪ. ಸಾಗರದ ಎಲ್ಬಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುವ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗ ತೋರಿಸಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷ ರೇವಪ್ಪ ಕೆ. ಹೊಸಕೊಪ್ಪ ಹೇಳಿದರು.
ಸಾಗರದ ವಿನೋಬನಗರದ ಡಿಎಸ್‌ಎಸ್ ಕಚೇರಿಯಲ್ಲಿ ಸೋಮವಾರ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಪ್ರೊ. ಬಿ.ಕೃಷ್ಣಪ್ಪ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ಭದ್ರಾವತಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುವಾಗ ತಾರತಮ್ಯದ ವಿರುದ್ಧ ಧ್ವನಿ ಎತ್ತಿ ದಲಿತ ಮತ್ತು ಹಿಂದುಳಿದ ವರ್ಗದವರಲ್ಲಿ ಆತ್ಮಸ್ಥೈರ್ಯ ತುಂಬಿದ ಕೀರ್ತಿ ಕೃಷ್ಣಪ್ಪ ಅವರಿಗೆ ಸಲ್ಲುತ್ತದೆ ಎಂದರು.
ದಲಿತರ ಮೇಲಿನ ನಿರಂತರ ದೌರ್ಜನ್ಯ ಕಂಡು ತಮ್ಮ ಒಡನಾಡಿಗಳ ಜತೆ ಸೇರಿ ಸಂಘಟನೆಯನ್ನು ಹುಟ್ಟುಹಾಕಿ ಸರ್ಕಾರಿ ನೌಕರಿಗೆ ಸ್ವಯಂನಿವೃತ್ತಿ ಘೋಷಿಸಿ ನಿರಂತರ ಹೋರಾಟ ಕೈಗೆತ್ತಿಕೊಂಡರು. ರಾಜ್ಯಾದ್ಯಂತ ಸೈಕಲ್ನಲ್ಲೇ ಸಂಚರಿಸಿ ದಲಿತ ಸಮುದಾಯದಲ್ಲಿ ಜಾಗೃತಿ ಮೂಡಿಸಿದರು. ಶಿಕ್ಷಣ, ಸಂಘಟನೆ, ಹೋರಾಟ ಎಂಬ ಸಿದ್ಧಾಂತಗಳನ್ನು ಸಮುದಾಯಕ್ಕೆ ನೀಡಿದರು. ಅವರ ಆದರ್ಶಗಳನ್ನು ನಾವು ಪಾಲಿಸಬೇಕು ಎಂದು ತಿಳಿಸಿದರು. ಕಲ್ಲಪ್ಪ ಮೆಣಸಿನಾಳ್, ಗಣಪತಿ ವಡ್ನಾಲ, ಜಗನ್ನಾಥ್, ಉಮಾ, ಪ್ರತಿಭಾ ಇತರರಿದ್ದರು.