ಮತ್ತೆ ಚಾಲ್ತಿಗೆ ಬಂದ 'ಕೆರೆಕಳ್ಳ' ಟೈಟಲ್; ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಚಿತ್ರ ನೋಂದಣಿಗೆ ಅರ್ಜಿ ಸಲ್ಲಿಕೆ

Kere Kalla Poster
Published on

ಬೆಂಗಳೂರು: ರಾಜ್ಯದಲ್ಲಿ ಕೆಲ ದಿನಗಳ ಹಿಂದೆ ಉರಿಗೌಡ-ನಂಜೇಗೌಡ ಹೆಸರು ಹೆಚ್ಚು ಚಾಲ್ತಿಯಲ್ಲಿತ್ತು. ಇದು ಬಿಜೆಪಿ-ಕಾಂಗ್ರೆಸ್ ಮತ್ತು ಜೆಡಿಎಸ್​ ನಾಯಕರ ನಡುವೆ ಆರೋಪ-ಪ್ರತ್ಯಾರೋಪಗಳಿಗೂ ಅವಕಾಶ ಮಾಡಿಕೊಟ್ಟಿತ್ತು. ಈ ವೇಳೆ ಸಚಿವ ಮುನಿರತ್ನ ಉರಿಗೌಡ-ನಂಜೇಗೌಡ ಹೆಸರಿನಲ್ಲಿ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದರು.

ಉರಿಗೌಡ-ನಂಜೇಗೌಡ ಸಿನಿಮಾ ಸಿನಿಮಾ ನಿರ್ಮಾಣ ವಿಚಾರ ತಣ್ಣಗಾಗುತ್ತಿದ್ದಂತೆ ಇದೀಗ ಮತ್ತೊಂದು ಸಿನಿಮಾ ಹೆಸರು ರಾಜಕೀಯ ವಲಯದಲ್ಲಿ ಹೆಚ್ಚು ಚರ್ಚೆಗೆ ಅವಕಾಶ ಮಾಡಿಕೊಟ್ಟಂತಿದೆ. ಈ ಹಿಂದೆ ಸಚಿವ ಮುನಿರತ್ನ ಅವರನ್ನು ಕಾಂಗ್ರೆಸ್ 'ಕೆರೆ ಕಳ್ಳ' ಆರೋಪಿಸಿ, ಟ್ವಿಟರ್​ನಲ್ಲಿ ಪೋಸ್ಟರ್ ಬಿಡುಗಡೆ ಮಾಡಿತ್ತು. ಸದ್ಯ 'ಕೆರೆಕಳ್ಳ' ಎಂಬ ಹೆಸರಿನಲ್ಲಿ ಸಿನಿಮಾ ನಿರ್ಮಾಣಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಚಿತ್ರ ನೋಂದಣಿಗೆ ಅರ್ಜಿ ಸಲ್ಲಿಕೆಯಾಗಿದೆ. 

ರಾಜರಾಜೇಶ್ವರಿನಗರ ಕಾಂಗ್ರೆಸ್ ಬೆಂಬಲಿತ ನಿರ್ಮಾಪಕ ಸುಭಾಶ್, ಸುನಂದ ಟಾಕೀಸ್ ಹೆಸರಿನಲ್ಲಿ 'ಕೆರೆ ಕಳ್ಳ' ಟೈಟಲ್​ನಲ್ಲಿ ಸಿನಿಮಾ ಮಾಡಲು ಮುಂದಾಗಿದ್ದಾರೆ. ರಾಜರಾಜೇಶ್ವರಿನಗರ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮುನಿರತ್ನ ರಾಜಕೀಯ ತಿಕ್ಕಾಟವೇ ಸಿನಿಮಾ ಮಾಡಲು ಕಾರಣ ಎನ್ನಲಾಗಿದೆ. ಉರಿಗೌಡ-ನಂಜೇಗೌಡ ವಿವಾದ ಮುಂದಿಟ್ಟುಕೊಂಡು ಮುನಿರತ್ನ ಮಾಡಿದ್ದ ಸ್ಟ್ರಾಟಜಿಗೆ, ಅದೇ ರೀತಿಯಲ್ಲಿ ಕೌಂಟರ್ ನೀಡಲು 'ಕೆರೆ ಕಳ್ಳ' ಸಿನಿಮಾ ನಿರ್ಮಾಣವಾಗುತ್ತಿದೆ.

ಈ ಸಿನಿಮಾಗೆ ನೈಜ ಚಿತ್ರಗಳ ಆಧಾರಿತ ಸತ್ಯಕತೆ ಎಂಬ ಅಡಿಬರಹ ಕೊಡಲಾಗಿದೆ. ಅಲ್ಲದೆ ಚಿತ್ರದ ಶೀರ್ಷಿಕೆಯು ಯಾವ ವ್ಯಕ್ತಿಗಾದರೂ ಪರೋಕ್ಷವಾಗಿ ಅನ್ವಯವಾದಲ್ಲಿ ಅದು ಅವರ ಪಾಪದ ಪ್ರಾಯಶ್ಚಿತ್ತವೇ ಹೊರತು ನಾವು ಜವಾಬ್ದಾರರಲ್ಲ ಎಂಬ ಅಡಿಬರಹದೊಂದಿಗೆ ಸಚಿವ ಮುನಿರತ್ನ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಲಾಗಿದೆ. ಇದನ್ನೂ ಓದಿ: VIDEO | ನೀತಾ ಅಂಬಾನಿಯ ನೃತ್ಯ ನೋಡಿ ಮನಸೋತ ಬಾಲಿವುಡ್ ಮಂದಿ!

ಉರಿಗೌಡ-ನಂಜೇಗೌಡ ಸಿನಿಮಾದ ಪೋಸ್ಟರ್ ಬಿಡುಗಡೆಗೊಳಿಸಿ, ಮುಹೂರ್ತ ನೆರವೇರಿಸಲು ಮುನಿರತ್ನ ದಿನಾಂಕ ನಿಗದಿ ಮಾಡಿದ್ದರು. ಸಿನಿಮಾದ ಬಗ್ಗೆ ವಿರೋಧಗಳು ಹೆಚ್ಚಾಗುತ್ತಿದ್ದಂತೆ, ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಮುನಿರತ್ನ ಭೇಟಿಯಾಗಿ ಅವರ ಸೂಚನೆಯಂತೆ ಉರೀಗೌಡ-ನಂಜೇಗೌಡ ಸಿನಿಮಾ ಸ್ಥಗಿತಗೊಳಿಸಲು ನಿರ್ಧರಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net