ಭೀಕರ ಅಪಘಾತ; ಅಂತರಾಷ್ಟ್ರೀಯ ತೊಗಲುಗೊಂಬೆ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ ಮೃತ್ಯು

nadoja belagallu veeranna end life road accident in chitradurga
Published on

ಬಳ್ಳಾರಿ: ಭೀಕರವಾದ ರಸ್ತೆ ಅಪಘಾತದಲ್ಲಿ ಅಂತರಾಷ್ಟ್ರೀಯ ತೊಗಲುಗೊಂಬೆ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ ಮೃತಪಟ್ಟಿದ್ದಾರೆ.

ಕಾರು ಪಲ್ಟಿಯಾದ ಪರಿಣಾಮ ನಾಡೋಜ ಬೆಳಗಲ್ಲು ವೀರಣ್ಣ(91) ಮೃತರು. ಈ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಹಿರೇಹಳ್ಳಿ ಬಳಿ ಇಂದು(ಭಾನುವಾರ) ಸಂಭವಿಸಿದೆ.

ಇಂದು ಬೆಳಗ್ಗೆ ಬಳ್ಳಾರಿಯಿಂದ ಚಿಕ್ಕಮಗಳೂರಿಗೆ ಕಾರಿನಲ್ಲಿ ತೆರಳುತ್ತಿದ್ದಾಗ ಅಪಘಾತ. ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಕಾರಿನಲ್ಲಿದ್ದ ಬೆಳಗಲ್ಲು ವೀರಣ್ಣ ಅವರು ಪುತ್ರ ಹನುಮಂತಪ್ಪ ಅವರಿಗೂ ಗಾಯಗಳಾಗಿದ್ದು, ಅವರನ್ನ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಅಂತ ತಿಳಿದು ಬಂದಿದೆ. ತಳಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ರಂಗಕಲಾವಿದ ಬೆಳಗಲ್ಲು ವೀರಣ್ಣ ಅವರು ಬಳ್ಳಾರಿ ಮೂಲದವರಾಗಿದ್ದಾರೆ. ನಾಡೋಜ ಬೆಳಗಲ್ಲು ವೀರಣ್ಣ ಅವರು ಅಮೆರಿಕಾ ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ತೊಗಲುಗೊಂಬೆ ಪ್ರದರ್ಶನ ನೀಡಿದ್ದಾರೆ. ಮೂಲತಃ ತೊಗಲು ಗೊಂಬೆಯಾಟದ ಕಲಾವಿದರಾದ ಬೆಳಗಲ್ಲು ವೀರಣ್ಣ ಅವರು ತೊಗಲು ಗೊಂಬೆಯಾಟದ ಹಿರಿಮೆಯನ್ನು ಸಪ್ತ ಸಾಗರದ ಆಚೆ ತಲುಪಿಸಿದ ಅಪರೂಪದ ಕಲಾವಿದರು. ಶ್ರೀರಾಮಾಂಜನೇಯ ತೊಗಲು ಗೊಂಬೆ ಕಲಾ ಮೇಳವನ್ನು ಕಟ್ಟಿ ಊರೂರು, ರಾಜ್ಯದಿಂದ ರಾಜ್ಯ, ದೇಶದಿಂದ ವಿದೇಶಕ್ಕೆ ಸುತ್ತಿದವರು. ಅವರ ನಿಧನದಿಂದ ರಾಜ್ಯದ ಕಲಾಲೋಕ ಬಡವಾಗಿದೆ. ವೀರಣ್ಣನವರು ಅಪಾರ ಸಂಖ್ಯೆಯ ಅಭಿಮಾನಿಗಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಜಿಲ್ಲೆಯ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net