ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ

Soundarya Jagadeesh
Published on

ಬೆಂಗಳೂರು: ಚಲನಚಿತ್ರ ನಿರ್ಮಾಪಕ, ರಿಯಲ್ ಎಸ್ಟೇಟ್ ಉದ್ಯಮಿ ಸೌಂದರ್ಯ ಜಗದೀಶ್ (55) ಮಹಾಲಕ್ಷ್ಮೀ ಲೇಔಟ್‌ನ ತಮ್ಮ ನಿವಾಸದಲ್ಲಿ ಭಾನುವಾರ ಬೆಳಗಿನ ಜಾವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶನಿವಾರ ರಾತ್ರಿ ಕುಟುಂಬದ ಸದಸ್ಯರ ಜತೆಗೆ ಊಟ ಮಾಡಿ ತಮ್ಮ ಕೋಣೆಯಲ್ಲಿ ನಿದ್ದೆಗೆ ಜಾರಿದ್ದ ಜಗದೀಶ್, ಮುಂಜಾನೆ 3.30ಕ್ಕೆ ಕೋಣೆಯಿಂದ ಎದ್ದು ಹೊರಬಂದು ಅಡುಗೆ ಮನೆ ಪಕ್ಕದ ಪ್ಯಾಸೇಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗ್ಗೆ 8 ಗಂಟೆಗೆ ಪತ್ನಿ ರೇಖಾ ಎಚ್ಚರಗೊಂಡು ನೋಡಿದಾಗ ಪತಿ ಇರಲಿಲ್ಲ. ಹುಡುಕಾಡಿದಾಗ ಪ್ಯಾಸೇಜ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಜಗದೀಶ್ ಕಂಡಿದ್ದು, ಕೂಡಲೆ ಪತಿಯ ಸ್ನೇಹಿತರಿಗೆ ಕರೆ ಮಾಡಿ ಮನೆಗೆ ಕರೆಸಿಕೊಂಡಿದ್ದಾರೆ. ನೇಣಿನ ಕುಣಿಕೆಯಿಂದ ಜಗದೀಶ್‌ನನ್ನು ಬಿಚ್ಚಿ ರಾಜಾಜಿನಗರದ ಸುಗುಣ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ, ವೈದ್ಯರು ಪರೀಕ್ಷೆ ನಡೆಸಿ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.

ಜಗದೀಶ್ ಸ್ನೇಹಿತರು ನೀಡಿದ ಮಾಹಿತಿ ಆಧರಿಸಿ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಆಸ್ಪತ್ರೆ ಮತ್ತು ಮನೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸಿನಿಮಾ ನಿರ್ಮಾಣ, ವಿತರಣೆ, ರಿಯಲ್ ಎಸ್ಟೇಟ್ ವ್ಯವಹಾರ ಸೇರಿ ಹಲವು ಉದ್ಯಮಗಳಲ್ಲಿ ಜಗದೀಶ್ ತೊಡಗಿಸಿಕೊಂಡಿದ್ದರು. ಸೌಂದರ್ಯ ಕನ್ಸ್‌ಸ್ಟ್ರಕ್ಷನ್ ಹೆಸರಿನ ರಿಯಲ್ ಎಸ್ಟೇಟ್ ಕಂಪನಿ ತೆರೆದಿದ್ದ ಜಗದೀಶ್, ಇತ್ತೀಚೆಗೆ ನಗರದ ಹೊರವಲಯದಲ್ಲಿ ಕೋಟ್ಯಂತರ ರೂ. ಹೂಡಿಕೆ ಮಾಡಿ ಬಡಾವಣೆ ನಿರ್ಮಿಸುತ್ತಿದ್ದರು. ಇದರಲ್ಲಿ ನಿರೀಕ್ಷಿತ ಮಟ್ಟದಲ್ಲಿ ಲಾಭ ಸಿಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು ಎನ್ನಲಾಗಿದೆ.

ಅಲ್ಲದೆ, ವಯೋಸಹಜ ಕಾಯಿಲೆಗೆ ಅತ್ತೆ ಮೃತಪಟ್ಟಿದ್ದರು. ಆರ್ಥಿಕ ಸಂಕಷ್ಟದ ನಡುವೆ ಅತ್ತೆಯ ಸಾವಿನಿಂದ ಜಗದೀಶ್ ಕೊಂಚ ಮಾನಸಿಕವಾಗಿ ನೊಂದಿದ್ದರು. ಈ ಕಾರಣಗಳಿಂದ ಅವರು ಆತ್ಮಹತ್ಯೆ ನಿರ್ಧರ ತೆಗೆದುಕೊಂಡಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳದಲ್ಲಿ ಮರಣಪತ್ರ ಪತ್ತೆಯಾಗಿಲ್ಲ. ಜಗದೀಶ್ ಅವರ ಮೊಬೈಲ್ ಜಪ್ತಿ ಮಾಡಿದ್ದು, ಪರಿಶೀಲನೆ ನಡೆಸಲಾಗುತ್ತಿದೆ. ಸಾಲದ ವಿಚಾರವಾಗಿ ಹಣಕಾಸು ಸಂಸ್ಥೆಯಿಂದ ಮನೆ ಜಪ್ತಿಗೆ ನೊಟೀಸ್ ಬಂದಿತ್ತು ಎನ್ನಲಾಗುತ್ತಿದೆ. ಈ ಬಗ್ಗೆ ಖಚಿತ ಮಾಹಿತಿ ಇಲ್ಲ. ಕುಟುಂಬದ ಸದಸ್ಯರಿಂದ ಮಾಹಿತಿ ಪಡೆದು ಹೆಚ್ಚಿನ ತನಿಖೆ ಕೈಗೊಳ್ಳಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net