

ಅವಿನಾಶ ಮೂಡಂಬಿಕಾನ
ಬೆಂಗಳೂರು: ಕಾನೂನು ಬಾಹಿರ ಚಟುವಟಿಕೆಗಳ ಆರೋಪಗಳ ಹಿನ್ನೆಲೆಯಲ್ಲಿ ಎಸ್ಡಿಪಿಐ, ಪಿಎಫ್ಐ ಸಂಘಟನೆ ನಿಷೇಧಿಸುವ ಮಾತು ಕೇಳಿಬರುತ್ತಿದೆಯಾದರೂ ಹೀಗೆ ಮಾಡಲು ಹಲವು ಪ್ರಕ್ರಿಯೆ ದಾಟಲೇಬೇಕಿದೆ!
ಯುಎಪಿಎ ಕಾಯ್ದೆಯಡಿ ಕೇಂದ್ರ ಸರ್ಕಾರವು ನಿಷೇಧಕ್ಕೆ ಒಳಪಡುವ ಸಂಘಟನೆಗೆ ಸೂಚನೆ ನೀಡುತ್ತದೆ. ಸೆಕ್ಷನ್ 4ರ ಅಡಿ ಈ ಬಗ್ಗೆ ವಿಚಾರಣೆ ನಡೆಸಲು ಹೈಕೋರ್ಟ್ ನ್ಯಾಯಮೂರ್ತಿ ಒಳಗೊಂಡ ಟ್ರಿಬ್ಯುನಲ್ ರಚಿಸಲಾಗುತ್ತದೆ. ಸಂಘಟನೆಗೆ ಸೂಚನೆ ನೀಡಿದ 30 ದಿನದ ಒಳಗೆ ಟ್ರಿಬ್ಯುನಲ್ಗೆ ಈ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಬೇಕು. ಇದನ್ನು ಪರಿಗಣಿಸಿ ಟ್ರಿಬ್ಯುನಲ್ ಸಂಬಂಧಿಸಿದ ಸಂಘಟನೆಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡುತ್ತದೆ. ಸಂಘಟನೆ ಸದಸ್ಯರು, ಮುಖಂಡರಿಗೆ ನೋಟಿಸ್ ಕೊಡಲಾಗಿದೆಯೇ ಎಂಬ ಬಗ್ಗೆ ರಾಜ್ಯ ಸರ್ಕಾರ ಗಮನಹರಿಸಬೇಕಾಗುತ್ತದೆ.
ಬಹುತೇಕ ಮನವಿ ಪುರಸ್ಕೃತವಾಗಲ್ಲ ಪ್ರತಿ ವರ್ಷ ದೇಶದ ಆಯಾ ರಾಜ್ಯಗಳು ಕೆಲ ಸಂಘಟನೆಗಳನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ವರದಿ ನೀಡುತ್ತವೆ. ಆದರೆ, ಸೂಕ್ತ ಪುರಾವೆಗಳಿಲ್ಲದ ಹಿನ್ನೆಲೆಯಲ್ಲಿ ಬಹಳಷ್ಟು ಮನವಿ ಪುರಸ್ಕೃವಾಗುವುದಿಲ್ಲ.
ಇದಾದ 6 ತಿಂಗಳೊಳಗೆ ಟ್ರಿಬ್ಯುನಲ್ ನಿರ್ಧಿಷ್ಟ ಸಂಘಟನೆ ನಿಷೇಧಿಸುವ ಬಗ್ಗೆ ಆದೇಶಿಸುತ್ತದೆ. ಟ್ರಿಬ್ಯುನಲ್ ಒಂದು ಬಾರಿ ಸಂಘಟನೆಗೆ ನೋಟಿಸ್ ಜಾರಿ ಮಾಡಿದರೆ ಸೆಕ್ಷನ್ 6ರ ಪ್ರಕಾರ ಅದು 5 ವರ್ಷ ಕಾರ್ಯಾಚರಣೆಯಲ್ಲಿರುತ್ತದೆ. ಒಂದು ಬಾರಿ ಸಂಘಟನೆ ನಿಷೇಧಕ್ಕೊಳಪಟ್ಟರೆ ಅದಕ್ಕೆ ಸಂಬಂಧಿಸಿದ ಹಣ, ಆಸ್ತಿ-ಪಾಸ್ತಿಗಳನ್ನು ಬಳಕೆ ಮಾಡುವುದನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರ ಸೂಚಿಸುತ್ತದೆ. ಸಂಘಟನೆ ನಿಷೇಧಿಸಿರುವುದನ್ನು ಪ್ರಶ್ನಿಸಿ ಸಂಘಟನೆ ಮುಖಂಡರು ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಮೊರೆ ಹೋಗಲು ಅವಕಾಶಗಳಿವೆ ಎಂದು ಸಿಬಿಐ ಮತ್ತು ಎನ್ಐಎಯ ವಿಶೇಷ ಅಭಿಯೋಜಕ ಪ್ರಸನ್ನ ಕುಮಾರ್ ತಿಳಿಸಿದ್ದಾರೆ.
ವರದಿಯಲ್ಲಿ ಏನೇನಿರಬೇಕು?: ದೇಶದ ಸುಭದ್ರತೆ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆ ಉಂಟು ಮಾಡುತ್ತದೆಂಬ ಬಗ್ಗೆ ರಾಜ್ಯ ಸರ್ಕಾರ ದಾಖಲೆ ಸಮೇತ ವರದಿಯಲ್ಲಿ ಉಲ್ಲೇಖಿಸಬೇಕಾಗುತ್ತದೆ. ಈ ಸಂಘಟನೆ ವಿರುದ್ಧ ಎಷ್ಟು ಪ್ರಕರಣ ದಾಖಲಾಗಿದೆ? ಇದರ ಕಾರ್ಯಕರ್ತರು ಎಷ್ಟು ಜನರನ್ನು ಹತ್ಯೆ ಮಾಡಿದ್ದಾರೆ? ಎಷ್ಟು ಮಂದಿ ಕಾರ್ಯಕರ್ತರ ವಿರುದ್ಧ ಕೊಲೆ ಯತ್ನ ಸೇರಿ ಗಂಭೀರ ಅಪರಾಧ ಪ್ರಕರಣ ದಾಖಲಾಗಿವೆ? ಸಂಘಟನೆಯು ಎಲ್ಲಿ ದಾಂಧಲೆ ನಡೆಸಿದೆ? ಎಷ್ಟು ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿ ಮಾಡಿದೆ? ಎಂಬ ದಾಖಲೆ ಇರಬೇಕು.