

ನವದೆಹಲಿ: ಜಪಾನ್ನ ದ್ವಿಚಕ್ರ ವಾಹನ ಉತ್ಪಾದಕ ಕಂಪನಿ ಯಮಹಾ ಪೆಟ್ರೋಲ್ ಬದಲು ನೀರನ್ನೇ ಇಂಧನವನ್ನಾಗಿ ಬಳಸುವ ಟೆಕ್ನಾಲಜಿಯ ಬೈಕ್ ಒಂದನ್ನು ಅಭಿವೃದ್ಧಿಪಡಿಸುತ್ತಿದೆ. ಈ ಬೈಕ್ ಅನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಂಪನಿ 2016ರಿಂದಲೇ ಕೆಲಸ ಮಾಡುತ್ತಿದ್ದು, ಈಗ ಹೊಸ XT 500 H2O ಬೈಕ್ನ ಚಿತ್ರವನ್ನು ಬಿಡುಗಡೆ ಮಾಡಿದೆ.
ಆದರೆ, ಇದಕ್ಕೆ ಸಂಬಂಧಿಸಿ ಯಾವುದೇ ಅಧಿಕೃತ ಮಾಹಿತಿಯನ್ನು ಕಂಪನಿ ಬಹಿರಂಗಗೊಳಿಸಿಲ್ಲ. ಸದ್ಯದ ಮಟ್ಟಿಗೆ ಈ ಬೈಕ್ ರೂಪುಪಡೆದು ಸಾರ್ವಜನಿಕ ಬಳಕೆಗೆ ಸಿಗಬೇಕಾದರೆ ಇನ್ನೂ 4 ರಿಂದ 5 ವರ್ಷ ಬೇಕಾಗಬಹುದು. ಬೈಕ್ ಅನ್ನು ಮ್ಯಾಕ್ಸಿಮ್ ಲೆಫೆಬ್ವೆರ್ ವಿನ್ಯಾಸಗೊಳಿಸಿದ್ದಾರೆ. ಇವರು ಯಮಹಾ ಕಂಪನಿಯ ಇಂಡಸ್ಟ್ರಿಯಲ್ ಡಿಸೈನರ್ ಆಗಿದ್ದು, ಹೊಸ ವಿನ್ಯಾಸ ಈಗಾಗಲೇ ಜಗತ್ತಿನ ಗಮನ ಸೆಳೆದಿದೆ. ಇದನ್ನು ಓದಿ: ತೆರಿಗೆ ವ್ಯವಸ್ಥೆಯು ತಡೆರಹಿತ, ನೋವುರಹಿತ, ಮುಖರಹಿತವನ್ನಾಗಿಸಲು ಪ್ರಯತ್ನ: ಪ್ರಧಾನಿ ಮೋದಿ
ಇದರೊಂದಿಗೆ ಕಂಪನಿ ತನ್ನ ಐಕಾನಿಕ್ ಎಕ್ಸ್ಟಿ 500 ಬೈಕ್ ಗೆ ಮರುಜೀವ ನೀಡಲಿದೆ. ಈ ಬೈಕ್ 1975ರಿಂದ 1981ರ ಅವಧಿಯಲ್ಲಿ ಹಗುರ ಬೈಕ್ ಎಂಬ ಕಾರಣಕ್ಕೆ ಬಹುಜನಪ್ರಿಯವಾಗಿತ್ತು. ಅಂದು ಅದರಲ್ಲಿ 499 ಸಿಸಿ ಸಿಂಗಲ್ ಸಿಲಿಂಢರ್ ಫೋರ್ ಸ್ಟ್ರೋಕ್ ಇಂಜಿನ್ ಬಳಸಲಾಗಿತ್ತು. ಅಂದಿನ ಕಾಲಕ್ಕೆ ಗಂಟೆಗೆ 160 ಕಿ.ಮೀ. ವೇಗದಲ್ಲಿ ಇದು ಸಂಚರಿಸುತ್ತಿತ್ತು.
ಈಗ ಹೊಸ ಮಾಡೆಲ್ ಬೈಕ್ಗೆ XT 500 H2O ಎಂಬ ಹೆಸರನ್ನು ಇರಿಸಲಾಗಿದ್ದು, ಕನಿಷ್ಠ ಮತ್ತು ಆಕರ್ಷಕ ವಿನ್ಯಾಸ, ಬಣ್ಣ ಗಮನಸೆಳೆಯತೊಡಗಿದೆ. ನೀರಿನಿಂದ ಚಾಲಿತ ಈ ಬೈಕ್ ಝೀರೋ ಕಾರ್ಬನ್ ಎಮಿಷನ್ ಹೊಂದಿದ್ದು, ಪರಿಸರ ಸ್ನೇಹಿ ಆಗಿರಲಿದೆ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್)